ಬುಧವಾರ, ನವೆಂಬರ್ 13, 2019
23 °C

371 (ಜೆ) ಜನಕ ವೈಜನಾಥ ಪಾಟೀಲ: ಸಾಹಿತಿ ಅಯ್ಯಣ್ಣ ಹುಂಡೇಕರ್

Published:
Updated:

ಯಾದಗಿರಿ: ಹೈದರಾಬಾದ್‌ ಕರ್ನಾಟಕ ಭಾಗಕ್ಕೆ 371 (ಜೆ) ಜಾರಿಗೆ ತರಲು ಹೋರಾಡಿದ ಮಾಜಿ ಸಚಿವ ವೈಜನಾಥ ಪಾಟೀಲರು 371 (ಜೆ) ಜನಕ ಎಂದು ಹಿರಿಯ ಸಾಹಿತಿ ಅಯ್ಯಣ್ಣ ಹುಂಡೇಕರ್ ಬಣ್ಣಿಸಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಆಂಧ್ರ, ಮಹಾರಾಷ್ಟ್ರಕ್ಕೆ ತೆರಳಿ 371 (ಜೆ) ಬಗ್ಗೆ ಅಧ್ಯಯನ ಮಾಡಿ ಹೋರಾಟಕ್ಕಿಳಿದರು. ಅವರ ಶ್ರಮದಿಂದ ಈಗ ಈ ಭಾಗಕ್ಕೆ ಮೀಸಲಾತಿ ಸಿಕ್ಕಿದೆ. ಹೀಗಾಗಿ ಅವರ ಹೋರಾಟ ಎಲ್ಲರಿಗೂ ಪ್ರೇರೇಪಣೆ ಎಂದರು.

ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ ತಡವಾಗಿದ್ದಕ್ಕೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಹೀಗಾಗಿ ಈ ಭಾಗದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ರಾಜಿ ಪ್ರಶ್ನೆಯೇ ಇಲ್ಲದೇ ಹೋರಾಟ ಮಾಡಿದ ವೈಜನಾಥ ಪಾಟೀಲರಂತಹ ನಾಯಕನ ಅಗಲಿಕೆ ನಾಡಿಗೆ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ ಎಂದು ನುಡಿದರು.

ಶಾಸಕ ವೆಂಕಟರೆಡ್ಡಿ ಗೌಡ ಮುದ್ನಾಳ ಮಾತನಾಡಿ, ವೈಜನಾಥ ಪಾಟೀಲರು ಹೋರಾಟದಿಂದ ಈ ಭಾಗಕ್ಕೆ ಪರಿಚಿತವಾದವರು. ಅವರು ಮಾಡಿದ ಹೋರಾಟದ ಫಲ ಈಗ ಕಾಣುತ್ತಿದೆ. ಹೋರಾಟವನ್ನೆ ಉಸಿರಾಗಿಸಿಕೊಂಡಿದ್ದ ಪಾಟೀಲರು ತಮ್ಮ ಬೇಡಿಕೆ ಈಡೇರದಿದ್ದರೆ ರಾಜೀನಾಮೆ ನೀಡಿ ಹೊರಬರುತ್ತಿದ್ದರು. ಅವರು ನಮ್ಮ ತಂದೆಯ ಒಡನಾಡಿಯಾಗಿದ್ದರು ಎಂದು ಸ್ಮರಿಸಿದರು. 

ಪಾಟೀಲರ ಒಡನಾಡಿ ಗುಂಡೂರಾವ್ ಪಂಚಾಯಿತಿ, ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ.ಶುಭಾಷಚಂದ್ರ ಕೌಲಗಿ, ಜೆಡಿಎಸ್ ನಗರದ ಘಟಕದ ಅಧ್ಯಕ್ಷ ವಿಶ್ವನಾಥ ಸಿರವಾರ ಮಾತನಾಡಿದರು.

ಖಂಡಪ್ಪ ದಾಸನ್, ಮಹಾದೇವಪ್ಪ ಅಬ್ಬೆತುಮಕೂರು, ಸಿದ್ದಪ್ಪ ಹೊಟ್ಟಿ, ಸುರೇಶ ಆಕಳ, ವಿಲಾಸ ಪಾಟೀಲ ಸೇರಿದಂತೆ ಅಪಾರ ಅಭಿಮಾನಿಗಳು ಇದ್ದರು. 

ಪ್ರತಿಕ್ರಿಯಿಸಿ (+)