ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್‌: 600 ವರ್ಷಗಳ ಇತಿಹಾಸ; ಕಲಾ ಶ್ರೀಮಂತಿಕೆಯ ತಾಣ ಖಾಸಾಮಠ

ಗಡಿನಾಡಿನಲ್ಲಿ ಕನ್ನಡ ಕಂಪು ಪಸರಿಸುತ್ತಿರುವ ಕೇಂದ್ರ
Last Updated 28 ಫೆಬ್ರುವರಿ 2021, 1:49 IST
ಅಕ್ಷರ ಗಾತ್ರ

ಗುರುಮಠಕಲ್: ಪಟ್ಟಣದ ಹೊರವಲಯಲ್ಲಿರುವ ಖಾಸಾಮಠವು ಅಪೂರ್ವ ವಾಸ್ತುಶಿಲ್ಪ ಮತ್ತು ಗಡಿನಾಡಿನಲ್ಲಿ ಕನ್ನಡ ಕಂಪು ಪಸರಿಸಲು ಕೈಗೊಂಡಿರುವ ಚಟುವಟಿಕೆಗಳಿಂದ ಪ್ರಸಿದ್ಧಿ ಪಡೆದಿದೆ.

600 ವರ್ಷಗಳ ಹಿಂದೆ ಚಿತ್ರದುರ್ಗದ ಮುರುಘಾ ಶರಣರ ಶಿಷ್ಯ ಶಾಂತವೀರ ಸ್ವಾಮೀಜಿ ಧರ್ಮ ಪ್ರಸಾರಕ್ಕಾಗಿ ಪರ್ಯಟನೆ ಮಾಡುತ್ತಾ ನಾಣ್ಯಪುರ (ಪಟ್ಟಣದ ಈಗಿನ ನಾಣಾಪುರ ಬಡಾವಣೆ) ಗ್ರಾಮದ ಹೊರವಲಯದ ಕಾಡಿನಲ್ಲಿ ತಪಸ್ಸಿಗೆ ಕುಳಿತರು. ನಂತರ ಭಕ್ತರು ಬರುವುದು, ಸಮಸ್ಯೆಗಳನ್ನು ಹೇಳಿಕೊಳ್ಳುವುದು ಆರಂಭವಾದ ನಂತರ ಮಠವನ್ನು ಕಟ್ಟಿಸಿದರು.

ತುಂಬಾ ದಿನಗಳಾದರೂ ತಮ್ಮ ಶಿಷ್ಯ ಹಿಂದಿರುಗಿ ಬರದ ಕಾರಣ ಅವರನ್ನು ಹುಡುಕಿಕೊಂಡು, ಆಂಧ್ರದ ಶ್ರೀಶೈಲಂ ಕ್ಷೇತ್ರದತ್ತ ಸಾಗಿದ್ದ ಚಿತ್ರದುರ್ಗ ಮುರುಘಾ ಸಂಸ್ಥಾನದ ಜಗದ್ಗುರು ಗುರುಪಾದ ಮುರುಘಾ ಶರಣರು ಇಲ್ಲಿನ ಮಠವನ್ನು ನೋಡಿ ‘ಇದು ಚಿತ್ರದುರ್ಗದ ಶಾಖಾಮಠವಲ್ಲ, ಇದೇ ಖಾಸಾ (ಸ್ವಂತ) ಮಠ’ ಎಂದು ಹರ್ಷೋದ್ಘಾರ ಮಾಡಿದರು. ಕಾಲಾಂತರದಲ್ಲಿ ಇದೇ ಮಠದಲ್ಲಿ ಶಿವೈಕ್ಯರಾದರು. ಮುರುಘಾ ಮಠದ ಜಗದ್ಗುರು ಕರೆದಂತೆ ಮಠಕ್ಕೆ ಖಾಸಾಮಠ ಎನ್ನುವ ಹೆಸರೇ ಕಾಯಂ ಆಗಿದೆ.

ವಾಸ್ತುಶಿಲ್ಪಗಳ ಕಲಾವೈಭವ: ಖಾಸಾಮಠದಲ್ಲಿ ಹುಡುಕಿದಷ್ಟು ಕಲಾ ಶ್ರೀಮಂತಿಕ ಅನಾವರಣಗೊಳ್ಳುತ್ತದೆ. ಮಠದ ಗೋಡೆಗಳಲ್ಲಿ ಉಬ್ಬು ಚಿತ್ರಗಳ ಕೆತ್ತನೆಗಳಿವೆ. ಪೌರಾಣಿಕ ಘಟನೆಗಳು ಶಿಲ್ಪಿಗಳ ಕೈಯಲ್ಲಿ ಜೀವ ಪಡೆದುಕೊಂಡಿವೆ. ಮಹಾದ್ವಾರಗಳಲ್ಲಿರುವ ಸೂಕ್ಷ್ಮ ಕುಸುರಿ ಕೆತ್ತನೆಗಳು ಜನರನ್ನು ಆಕರ್ಷಿಸುತ್ತವೆ. ಮಠದ ಮಹಾದ್ವಾರದ ಮೇಲಿನ ಬಿಸಿಲು ಮಚ್ಚಿನ ಎರಡೂ ಬದಿಗಳಲ್ಲಿ ಏಕಶಿಲೆಯಲ್ಲಿ ನಡುವೆ ತಿರುಗುವ ಕಲ್ಲಿನ ಚೆಂಡು ಉಳಿಯುವಂತೆ ಕೆತ್ತಿದ ಕಂಬಗಳು ಶಿಲ್ಪಿಗಳ ಪ್ರಾವೀಣ್ಯತೆಗೆ ಸಾಕ್ಷಿಯಾಗಿವೆ. ನಿಜಾಮರ ಕಾಲದಲ್ಲಿ ಎಡಭಾಗದ ಕಂಬವನ್ನು ತೆಗೆದುಕೊಂಡು ಹೋಗಲಾಗಿತ್ತು. ಈಗ ಅದು ಹೈದರಾಬಾದ್ ನಗರದ ವಸ್ತುಸಂಗ್ರಹಾಲಯದಲ್ಲಿದೆ.

ಕಟ್ಟಡದ ವಾಸ್ತು ತುಂಬಾ ವಿಶಿಷ್ಟವಾಗಿದ್ದು, ಮೂರು ಹಂತಗಳಲ್ಲಿ ಮಠದ ನಿರ್ಮಾಣವಾಗಿದೆ. ಭೂಮಟ್ಟಕ್ಕಿಂತಲೂ ಕೆಳಗೆ, ಭೂಮಿಯ ಮಟ್ಟದಲ್ಲಿ ಮತ್ತು ಮೊದಲ ಅಂತಸ್ತುಗಳನ್ನು ಮಠ ಹೊಂದಿದ್ದು, ಇಡೀ ಮಠವು ಹಂತ, ಹಂತವಾಗಿ ಮೇಲೆ ಹತ್ತುವ ವಿಶಿಷ್ಟ ರೀತಿಯ ಕಾರ್ಯತಂತ್ರವನ್ನು ಅಳವಡಿಸಿ ಕಟ್ಟಲಾಗಿದೆ.

ಕನ್ನಡದ ಕೆಲಸ: ಮಠದ ಮೊದಲ ಪೀಠಾಧಿಪತಿ ಶಾಂತವೀರ ಸ್ವಾಮೀಜಿ ಅವಧಿಯಿಂದಲೂ ಖಾಸಾಮಠ ಗಡಿನಾಡಿನಲ್ಲಿ ಕನ್ನಡ ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಮೂಲಕ ಗಡಿ ಭಾಗದಲ್ಲಿ ಕನ್ನಡವನ್ನು ಬೆಳೆಸುವ ಕಾರ್ಯ ಮಾಡುತ್ತಿದೆ.

ವಚನ ಸಾಹಿತ್ಯದ ಪ್ರಸಾರ, ಧರ್ಮ ಪ್ರಚಾರದ ಮೂಲಕ ತೆಲುಗು, ಉರ್ದು ಪ್ರಬಲವಾಗಿದ್ದ ಈ ಭಾಗದಲ್ಲಿ ಮಠದ ಪರಂಪರೆಯ ಜೊತೆಗೆ ಕನ್ನಡದ ಸಂಸ್ಕೃತಿ ಬೆಳೆಸುವ ಕೆಲಸವನ್ನು ಮಠ ಇಂದಿಗೂ ಮುಂದುವರೆಸಿಕೊಂಡು ಬಂದಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಮೊದಲುಗೊಂಡಂತೆ ಕನ್ನಡದ ಕೆಲಸಕ್ಕೆ ಖಾಸಾಮಠವೇ ಕೇಂದ್ರಸ್ಥಾನವಾಗಿದೆ. ಪ್ರತಿವರ್ಷ ನವೆಂಬರ್ 8ರಂದು ಮಠದ ಪೀಠಾಧಿಪತಿಗಳಾಗಿದ್ದ ಲಿಂ.ಸಂಗಮೇಶ್ವರ ಸ್ವಾಮೀಜಿ ಪುಣ್ಯಸ್ಮರಣೆ ದಿನದಂದು ‘ಗಡಿನಾಡ ಕನ್ನಡ ರಾಜ್ಯೋತ್ಸವ’ ಆಚರಿಸಿಕೊಂಡು ಬರಲಾಗುತ್ತಿದೆ.

***

ಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಮೌಢ್ಯಗಳ ವಿರುದ್ಧ ಜಾಗೃತಿಯ ಜತೆಗೆ ಕನ್ನಡ ಭಾಷೆ ಕಟ್ಟುವ ಕೆಲಸವನ್ನು ಮಾಡಲಾಗುತ್ತಿದೆ

- ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಖಾಸಾಮಠದ ಪೀಠಾಧಿಪತಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT