ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋರಾಟಗಾರರು ಸದಾ ಸ್ಮರಣೀಯರು’

ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮಾಚರಣೆ
Last Updated 17 ಸೆಪ್ಟೆಂಬರ್ 2022, 16:28 IST
ಅಕ್ಷರ ಗಾತ್ರ

ಯಾದಗಿರಿ: ಹೈದರಾಬಾದ್ ಕರ್ನಾಟಕ ಭಾಗ ಶಿಕ್ಷಣ ಆರೋಗ್ಯ, ಆರ್ಥಿಕವಾಗಿ ತೀರಾ ನಿರ್ಲಕ್ಷಿಸಲ್ಪಟ್ಟು, ಅತ್ಯಂತ ಹಿಂದುಳಿದ ಪ್ರದೇಶವಾಗಿ ರೂಪುಗೊಳ್ಳಲೂ ಕಾರಣವಾಗಿದ್ದ ನಿಜಾಮ ಆಡಳಿತ ಕಿತ್ತೊಗೆಯಲು ಹೋರಾಡಿದ ವೀರ ಮಹನೀಯರು ಸದಾ ಸ್ಮರಣೀಯರು ಎಂದು ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ಕವಾಯತ್‌ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಈ ಭಾಗದ ಹಲವು ಪ್ರದೇಶಗಳಲ್ಲಿದ್ದ ನಿಜಾಮರರ ಆಳ್ವಿಕೆಯನ್ನು ಕೊನೆಗಾಣಿಸಲು ಯಾದಗಿರಿ ಸೇರಿದಂತೆ ವಿವಿಧ ಭಾಗದ ಮಹನೀಯರು ಮಾಡಿದ ತ್ಯಾಗ ಬಲಿದಾನದ ಫಲವಾಗಿ 1948ರ ಸೆಪ್ಟೆಂಬರ್ 17 ರಂದು ಹೈದರಾಬಾದ್ ಕರ್ನಾಟಕ ಭಾಗ ವಿಮೋಚನೆಗೊಂಡಿತು ಎಂದು
ಹೇಳಿದರು.

ನಿಜಾಮನ ಆಳ್ವಿಕೆಗೊಳಪಟ್ಟ ಇಂದಿನ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯನಗರ, ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡಂತೆ ಹೈದರಾಬಾದ್ ಸಂಸ್ಥಾನದಲ್ಲಿ ನಿಜಾಮ ಉಸ್ಮಾನ್ ಅಲಿಖಾನ್ ಆಡಳಿತದಲ್ಲಿ ಪ್ರಜೆಗಳಿಗೆ ಯಾವುದೇ ಅವಕಾಶ ನೀಡಿರಲಿಲ್ಲ. ಅದರಲ್ಲೂ ಸ್ವಾತಂತ್ರ್ಯ ರಾಷ್ಟ್ರವನ್ನಾಗಿ ಉಳಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದ ಎಂದರು.

ಹೈದರಾಬಾದ್ ಕರ್ನಾಟಕ 1948 ಸೆಪ್ಟೆಂಬರ್ 17 ರಂದು ಅಂದಿನ ನಮ್ಮ ದೇಶದ ಗೃಹಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ನಿಜಾಮನ ದುರಾಡಳಿತ, ರಜಾಕಾರರ ದೌರ್ಜನ್ಯವನ್ನು ದಮನ ಮಾಡಲು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಣ ಪಡೆದ ಕೆಲವು ವಿದ್ಯಾವಂತರು, ಸಂವಿಧಾನಾತ್ಮಕ ಸುಧಾರಣೆಗೆ ಯತ್ನಿಸಿದರು
ಎಂದರು.

ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಕರ್ನಾಟಕ ಅಲೆಮಾರಿ ಅರೆಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ದೇವೇಂದ್ರನಾಥ ಕೆ.ನಾದ್, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರುದ್ರಗೌಡ ಪಾಟೀಲ, ಯಾದಗಿರಿ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಜಿಲ್ಲಾಧಿಕಾರಿ ಸ್ನೇಹಲ್ ಆರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರೇಶ ಆರ್. ನಾಯ್ಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್‌, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಸುಭಾಶ್ಚಚಂದ್ರ ಕೌಲಗಿ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಚಿವರು ಬಹುಮಾನ ವಿತರಿಸಿದರು.

ಜಿಲ್ಲೆಯಲ್ಲಿ ಇದುವರೆಗೆ ಜಲ ಜೀವನ್ ಮಿಷನ್ ಯೋಜನೆಯಡಿ ₹602.47 ಕೋಟಿ ವೆಚ್ಚದಲ್ಲಿ ಒಟ್ಟು 695 ಕಾಮಗಾರಿಗಳನ್ನು ತೆಗೆದುಕೊಂಡಿದ್ದು, ಇದರಲ್ಲಿ 600 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಇನ್ನುಳಿದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ 110 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಇಲ್ಲಿಯವರೆಗೆ 90,676 ಜನವಸತಿಗಳಿಗೆ ನಳ ನೀರು ಸಂಪರ್ಕ ಒದಗಿಸಲಾಗಿದೆ. 2022-23ನೇ ಸಾಲಿನಲ್ಲಿ ಜಿಲ್ಲೆಗೆ ಒಟ್ಟು 80514 ಮನೆಗಳಿಗೆ ಕಾರ್ಯಾತ್ಮಕ ನೀರು ಸಂಪರ್ಕ ನೀಡುವ ಗುರಿ ಹೊಂದಿದೆ ಎಂದು ಸಚಿವ ಪ್ರಭು ಚವಾಣ್‌ ಹೇಳಿದರು.

ಯಾದಗಿರಿ ಜಿಲ್ಲೆಯ ಎಲ್ಲಾ ಗ್ರಾಮಗಳ ಜನವಸತಿಗಳಿಗೆ ಮತ್ತು 3 ಪಟ್ಟಣ ಪಂಚಾಯಿತಿಗಳಿಗೆ ಪ್ರತಿಯೊಬ್ಬರಿಗೆ 55 ಎಲ್‌ಪಿಸಿಡಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ₹2,004 ಕೋಟಿ ಜಲಧಾರೆ ಯೋಜನೆ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಈ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದ್ದು, ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದರು.

ಮಹತ್ವಾಕಾಂಕ್ಷೆ ಜಿಲ್ಲೆಯಾಗಿ ಆಯ್ಕೆ ಆಗಿರುವುದರಿಂದ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು. ಆರೋಗ್ಯ ಕ್ಷೇತ್ರ ಸುಧಾರಣೆಗೆ ವಿಶೇಷ ಗಮನ ನೀಡಲು ಅಧಿಕಾರಿಗಳಿಗೆ ತಿಳಿಸಿದ ಅವರು, ಅತ್ಯಂತ ಹಿಂದುಳಿದ ಈ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ ರಾಜ್ಯದಲ್ಲಿಯೇ ಅಭಿವೃದ್ಧಿ ಹೊಂದಿದ ಮುಂಚೂಣಿ ಜಿಲ್ಲೆಯಾಗಿಸೋಣ ಎಂದು ಹೇಳಿದರು.

ನಿಜಾಮ ಸರ್ಕಾರದ ರಜಾಕಾರರ ಎಲ್ಲಾ ಕೃತ್ಯಗಳನ್ನು ವಿರೋಧಿಸಿ ಪ್ರತಿಭಟಿಸಿ ಬಂಧನಕ್ಕೊಳಗಾದ ನಮ್ಮ ಹೆಮ್ಮೆಯ ಹೈದರಾಬಾದ್‌ ಕರ್ನಾಟಕ ಹೋರಾಟಗಾರರನ್ನು ಸದಾ ಸ್ಮರಿಸಬೇಕಿದೆ

- ಪ್ರಭು ಚವಾಣ್‌, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT