ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭ್ರಷ್ಟಾಚಾರದಿಂದ ಕೂಡಿದ ಬಿಜೆಪಿ ಸರ್ಕಾರ’

ಕೋವಿಡ್‌ ಹೆಸರಲ್ಲಿ ಕೋಟಿ ಕೋಟಿ ಹಣ ಲೂಟಿ: ಪ್ರಿಯಾಂಕ್ ಖರ್ಗೆ
Last Updated 19 ಡಿಸೆಂಬರ್ 2020, 3:39 IST
ಅಕ್ಷರ ಗಾತ್ರ

ಯಾದಗಿರಿ: ‘ರಾಜ್ಯದ ಬಿಜೆಪಿ ಸರ್ಕಾರ ಪ್ರತಿಯೊಂದು ಕೆಲಸಕ್ಕೂ ಕಮಿಷನ್‌ ನಿಗದಿ ಮಾಡಿದೆ. ಪಿಸಿಯಿಂದ ಡಿಸಿವರೆಗೆ ವಸೂಲಿ ಮಾಡುತ್ತಿದೆ’ ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ ನಡೆದ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ ನಾಯಕ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ನೆರೆಯ ಕಲಬುರ್ಗಿ ಜಿಲ್ಲೆಯಲ್ಲಿ ಶೇ 10ರಷ್ಟು ಕಮಿಷನ್‌ ಕೊಡದಿದ್ದರೆ ಬಿಜೆಪಿ ಶಾಸಕರು ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ಮಾಡುವುದಿಲ್ಲ’ ಎಂದು ಆರೋಪಿಸಿದರು.

ಯಾರ ಸರ್ಕಾರ ನಡೆಯುತ್ತಿದೆ?:

‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಬಹುಮತವಿಲ್ಲ. ಬೇರೆ ಪಕ್ಷದಿಂದ ಆಪರೇಷನ್‌ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಯಾರ ಸರ್ಕಾರ ನಡೆಯುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ಒಂದು ಕಡೆ ಆರ್‌ಎಸ್‌ಎಸ್‌, ಬಿಜೆಪಿ, ಮುಖ್ಯಮಂತ್ರಿ, ಮೂವರು ಡಿಸಿಎಂ, ವಿಜಯೇಂದ್ರ ಹೀಗೆ ಇವರಲ್ಲಿ ಯಾರು ಅಧಿಕಾರ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

‘ಕೋಟಿ ಕೋಟಿ ಹಣವನ್ನು ಕೋವಿಡ್‌ ಹೆಸರಲ್ಲಿ ಲೂಟಿ ಹೊಡೆದಿದ್ದಾರೆ. ಇದೊಂದು ಲಜ್ಜೆಗಟ್ಟೆ ಸರ್ಕಾರ. ಕೊರೊನಾ ಹೆಣದ ಮೇಲೆ ಹಣ ಮಾಡಿ ಲೂಟಿ ಮಾಡಿದ್ದಾರೆ. ಪ್ರಧಾನಿ ಮೋದಿ ರಾತ್ರಿ 8 ಗಂಟೆಗೆ ಟಿವಿ ಪರದೆ ಮೇಲೆ ಬಂದರೆ ಭಯಪಡುವಂತಹ ವಾತಾವರಣ ಇದೆ. ಕೋವಿಡ್‌ ಹೊಡೆದೋಡಿಸಲು ದೀಪ ಹಚ್ಚಿ, ಗಂಟೆ, ಜಾಗಟೆ ಬಾರಿಸಿ ಎಂದರು. ಜನರು ಅದನ್ನೇ ಮಾಡಿದರು. ಆದರೆ, ಅವೈಜ್ಞಾನಿಕ ಕ್ರಮದಿಂದ ವಿಶ್ವದಲ್ಲಿಯೇ ಕೋವಿಡ್‌ ಸೋಂಕಿತರಲ್ಲಿ ಭಾರತ ಎರಡನೇಯ ಸ್ಥಾನದಲ್ಲಿದೆ’ ಎಂದರು.

ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತ‌ನಾಡಿ, ‘ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ. ಪ್ರತಿಭಟನಕಾರರು ರೈತರೇ ಅಲ್ಲ ಎಂದರೆ ಅವರು ಯಾರು?’ ಎಂದು ಪ್ರಶ್ನಿಸಿದರು.

ಡಿಸಿಸಿ ಅಧ್ಯಕ್ಷ ಮರಿಗೌಡ ಪಾಟೀಲ ಹುಲಕಲ್ ಮಾತನಾಡಿ, ‘70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಯವರು ಆಗಾಗ ಕೇಳುತ್ತಾರೆ. ಕಾಂಗ್ರೆಸ್‌ನವರು ಮಾಡಿದ ಕೆಲಸಗಳನ್ನು ತಮ್ಮ ಕೆಲಸಗಳು ಎಂದು ಬಿಜೆಪಿಯವರು ಬಿಂಬಿಸಿಕೊಳ್ಳುತ್ತಾರೆ. ರಸ್ತೆ, ನೀರಾವರಿ ಯೋಜನೆಗಳು, 371( ಜೆ ), ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಹಲವಾರು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಆದರೆ, ಬಿಜೆಪಿಯಿಂದ ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ’ ಎಂದು ಟೀಕಿಸಿದರು.

ವಿಧಾನ ಪರಿಷತ್‌ ಮಾಜಿ ಚನ್ನಾರೆಡ್ಡಿ ಪಾಟೀಲ ತುನ್ನೂರ ಮಾತನಾಡಿ, ‘ಮೋದಿ ಸರ್ಕಾರ 100 ಸುಳ್ಳು ಹೇಳಿ ಅದನ್ನು ಸತ್ಯ ಮಾಡುತ್ತದೆ’ ಎಂದರು.

ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ ನಾಯಕ ಪ್ರಸ್ತಾವಿಕ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮರಿಗೌಡ ಪಾಟೀಲ ಹುಲಕಲ್, ಎ.ಸಿ.ಕಾಡ್ಲೂರು, ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರು, ಮುಖಂಡರಾದ ಲಾಯಕ್ ಹುಸೇನ್ ಬಾದಲ್, ಶರಣಪ್ಪ ಮಲ್ಹಾರ ಮಾತನಾಡಿದರು.

ಮುಖಂಡರಾದ ಮಾಣಿಕರೆಡ್ಡಿ ಕುರಕುಂದಿ, ಶಿವಲಿಂಗಪ್ಪ ಪುಟಗಿ, ಬಸ್ಸುರೆಡ್ಡಿ ಬಿಳ್ಹಾರ, ರಾಘವೇಂದ್ರ ಮಾನಸಗಲ್, ಚಿದಾನಂದಪ್ಪ ಕಾಳಬೆಳಗುಂದಿ, ಸಿದ್ದಲಿಂಗರೆಡ್ಡಿ ಬಿಳ್ಹಾರ, ವಿಶ್ವನಾಥ್ ನೀಲಳ್ಳಿ, ಹನುಮೇಗೌಡ ಮರಕಲ್, ಮಲ್ಲಣ್ಣ ದಾಸನಕೇರಿ ಇದ್ದರು.

***

ಕೆಕೆಆರ್‌ಡಿಬಿ‌ಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಮುಖ್ಯಮಂತ್ರಿ ಬಳಿ ತೆರಳಿ ಅನುದಾನ‌ ಬಿಡುಗಡೆ ಮಾಡಿಸುವ ತಾಕತ್ತು ಬಿಜೆಪಿಯ ಯಾವ ಶಾಸಕರಿಗೂ ಇಲ್ಲ

- ‌ಪ್ರಿಯಾಂಕ್‌ ಖರ್ಗೆ, ಚಿತ್ತಾಪುರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT