ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಬಸ್‌ ಸಮಸ್ಯೆ: ನಿತ್ಯ ಕಾಲ್ನಡಿಗೆಯಲ್ಲಿ ವಿದ್ಯಾರ್ಥಿನಿಯರ ಪ್ರಯಾಣ

ಪ್ರತಿನಿತ್ಯ 4 ರಿಂದ 5 ಕಿ.ಮೀ. ಸಂಚಾರ, ಶಾಲಾ–ಕಾಲೇಜಿಗೆ ಚಕ್ಕರ್‌
Published 22 ಫೆಬ್ರುವರಿ 2024, 4:46 IST
Last Updated 22 ಫೆಬ್ರುವರಿ 2024, 4:46 IST
ಅಕ್ಷರ ಗಾತ್ರ

ಯಾದಗಿರಿ: ನಗರ ಅಕ್ಕಪಕ್ಕದ ಗ್ರಾಮಗಳು ಮತ್ತು ತಾಲ್ಲೂಕು ಕೇಂದ್ರದಿಂದ ದೂರವಿರುವ ಗ್ರಾಮಗಳಲ್ಲಿ ಸರಿಯಾದ ಸಮಯಕ್ಕೆ ಬಸ್‌ ಸಂಚಾರ ಇಲ್ಲದ ಕಾರಣ ವಿದ್ಯಾರ್ಥಿಗಳು ತೀವ್ರ ‍ಪರದಾಡುತ್ತಿದ್ದಾರೆ.

ನಗರ ಸುತ್ತಮುತ್ತಲಿನ ಗ್ರಾಮಗಳಾದ ವರ್ಕನಳ್ಳಿ, ಬಬಲಾದಿ, ಹುಲಕಲ್‌(ಜೆ), ಗಂಗಾನಗರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಬಸ್‌ ಸೌಲಭ್ಯ ಇಲ್ಲದಿದ್ದರಿಂದ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲೇ ಶಾಲಾ–ಕಾಲೇಜಿಗೆ ಬರುವುದು ಸಾಮಾನ್ಯವಾಗಿದೆ.

ನಗರ ಹೊರವಲಯದ ಹತ್ತಿಕುಣಿ ರಸ್ತೆಯ ಹೊರ ವಲಯಲ್ಲಿರುವ ಗಂಗಾನಗರಕ್ಕೆ ಬಸ್ ನಿಲ್ಲುವುದಿಲ್ಲ. ಇಲ್ಲಿನ ಸುಮಾರು 30 ಕ್ಕೂ ಹೆಚ್ಚು ವಿದ್ಯಾರ್ಥಿ ಜೂನಿಯರ್ ಕಾಲೇಜಿನಿಂದ ಗಂಗಾನಗರಕ್ಕೆ ಪ್ರತಿದಿನ ಕಾಲ್ನಡಿಗೆಯಿಂದ ಸಂಚರಿಸುವ ಪರಿಸ್ಥಿತಿ ಹಲವು ದಿನಗಳಿಂದ ಉದ್ಭವಿಸಿದೆ.

‘ನಮ್ಮ ಮಾರ್ಗದಲ್ಲಿ ಮೊದಲೇ ಬಸ್‌ಗಳ ಕೊರತೆ ಇದೆ. ಸಮಯಕ್ಕೆ ಸರಿಯಾಗಿ ಬಸ್‌ ಬರುವುದಿಲ್ಲ. ಹೀಗಾಗಿ ಸುಮಾರು 4ರಿಂದ 5ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳುವುದು ಅನಿವಾರ್ಯವಾಗಿದೆ. ಬಸ್‌ ಉಚಿತ ಪ್ರಯಾಣ ಇದ್ದರೂ ಯಾವುದೇ ಉಪಯೋಗವಾಗುತ್ತಿಲ್ಲ’ ಎನ್ನುತ್ತಾರೆ ವಿದ್ಯಾರ್ಥಿನಿಯರಾದ ಸರೋಜನಿ, ಗೀತಾ, ಕವಿತಾ.

ಮುಖ್ಯ ರಸ್ತೆಯಿಂದ ಅನತಿ ದೂರ ಇರುವ ಗ್ರಾಮಗಳ ವಿದ್ಯಾರ್ಥಿಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ವಿದ್ಯಾರ್ಥಿಗಳ ಸಮವಸ್ತ್ರ ನೋಡಿದ ಬಸ್‌ ಚಾಲಕರು ಬಸ್‌ ನಿಲ್ಲಿಸುತ್ತಿಲ್ಲ ಎನ್ನುವ ಆರೋಪವನ್ನು ವಿದ್ಯಾರ್ಥಿಗಳು ಮಾಡುತ್ತಾರೆ.

ನಾಲ್ಕು ಡಿಪೋಗಳಲ್ಲೂ ಸಮಸ್ಯೆ:

‘ಶಕ್ತಿ’ ಯೋಜನೆ ಆರಂಭವಾದ ನಂತರ ಜಿಲ್ಲೆಯಲ್ಲಿ ಬಸ್‌ಗಳ ಸಮಸ್ಯೆ ತೀವ್ರಗಾಗಿ ಕಾಡುತ್ತಿದೆ. ಇರುವ ಬಸ್‌ಗಳನ್ನು ಹೊಂದಾಣಿಕೆ ಮಾಡುವುದರಿಂದ ವಿದ್ಯಾರ್ಥಿಗಳು ಶಾಲಾ–ಕಾಲೇಜು, ಮನೆಗೆ ತಲುಪಲು ಪರದಾಡುವಂತಾಗಿದೆ.

ನಾಲ್ಕು ಬಸ್‌ ಡಿಪೋಗಳಿದ್ದು, ಟೈರ್‌ ಸಮಸ್ಯೆಯಿಂದ ಬಸ್‌ ಸೇವೆ ಒದಗಿಸುವಲ್ಲಿ ವ್ಯತ್ಯಯವಾಗುವುದಲ್ಲದೇ ಬೆಳಿಗ್ಗೆ ಹೊತ್ತಿನಲ್ಲಿ ಶಾಲಾ ಮಕ್ಕಳಿಗೆ ಮತ್ತು ಕಚೇರಿ ಕೆಲಸಗಳಿಗೆ ತೆರಳುವ ನೌಕರರಿಗೆ, ಕೂಲಿ ಕಾರ್ಮಿಕರಿಗೆ, ರೈತರಿಗೆ ತೀವ್ರ ತೊಂದರೆ ಆಗುತ್ತಿದೆ.ಹಾಗಾಗಿ ಖಾಸಗಿ ವಾಹನಗಳಿಗೆ ಹೆಚ್ಚು ಹಣ ನೀಡಿ ಪ್ರಯಾಣಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಇತ್ತ ವಿದ್ಯಾರ್ಥಿಗಳು ಬಸ್‌ಪಾಸ್ ಹೊಂದಿದ್ದರೂ ಬಸ್‌ಗಳು ಬಾರದ ಕಾರಣ ಖಾಸಗಿ ವಾಹನಗಳಲ್ಲಿ ಪ್ರಯಾಣಿಸಿದರೇ, ಇನ್ನು ಕೆಲ ವಿದ್ಯಾರ್ಥಿಗಳು ಇದನ್ನೇ ನೆಪ ಮಾಡಿಕೊಂಡು ಶಾಲೆಗೆ ಚಕ್ಕರ್ ಹಾಕುತ್ತಿರುವುದು ಪಾಲಕರ ವಲಯದಿಂದ ಕೇಳಿಬಂದಿದೆ.

ಯಾದಗಿರಿ ನಗರ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು
ಯಾದಗಿರಿ ನಗರ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು
ಸುನಿಲ್‌ಕುಮಾರ ಚಂದರಕಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆಕೆಆರ್‌ಟಿಸಿ
ಸುನಿಲ್‌ಕುಮಾರ ಚಂದರಕಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆಕೆಆರ್‌ಟಿಸಿ

ಎಲ್ಲ ಕಡೆಯೂ ಬಸ್‌ ಸಂಚಾರ ಇದೆ. ತಿಂಥಣಿ ಮೌನೇಶ್ವರ ಜಾತ್ರೆ ಇರುವುದರಿಂದ ಹೆಚ್ಚಿನ ಬಸ್‌ ಸಂಚಾರ ಅಲ್ಲಿಗೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬಸ್‌ ಸೌಲಭ್ಯ ಕಲ್ಪಿಸಲಾಗುವುದು -ಸುನಿಲ್‌ಕುಮಾರ ಚಂದರಕಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆಕೆಆರ್‌ಟಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT