ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಕೇರಾ: ಮೂರು ವರ್ಷ ಕಳೆದರೂ ವಿತರಣೆಯಾಗದ ಪ್ಲಾಸ್ಟಿಕ್ ಬಕೆಟ್

ಕಕ್ಕೇರಾ: ಪುರಸಭೆ ಅಧಿಕಾರಿಗಳ ಕಾರ್ಯವೈಖರಿಗೆ ಸಾರ್ವಜನಿಕರು ಬೇಸರ
Published 1 ಸೆಪ್ಟೆಂಬರ್ 2023, 4:54 IST
Last Updated 1 ಸೆಪ್ಟೆಂಬರ್ 2023, 4:54 IST
ಅಕ್ಷರ ಗಾತ್ರ

ಕಕ್ಕೇರಾ: ಪುರಸಭೆಯಿಂದ ‍ಪಟ್ಟಣದ ಪ್ರತಿ ಮನೆಗೆ ವಿತರಿಸಬೇಕಾದ ಕಸ ವಿಲೇವಾರಿಯ ಪ್ಲಾಸ್ಟಿಕ್‌ ಬಕೆಟ್‌ಗಳು ಮೂರು ವರ್ಷಗಳಿಂದ ಕೋಣೆಯೊಂದರಲ್ಲಿ ದೂಳು ತಿನ್ನುತ್ತಿವೆ.

ಪಟ್ಟಣದ ನಿವಾಸಿಗಳು ಕಸವನ್ನು ಎಲ್ಲೆಂದರಲ್ಲಿ ಬಿಸಾಕಬಾರದು ಮತ್ತು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಅನುಕೂಲವಾಗಲು ಪ್ಲಾಸ್ಟಿಕ್‌ ಬಕೆಟ್‌ಗಳನ್ನು ವಿತರಿಸಬೇಕಿತ್ತು. ಆದರೆ, ಅವುಗಳು ಹಳೆಯ ಗ್ರಾಮ ಪಂಚಾಯಿತಿಯ ಹಿಂದಿನ ಕೋಣೆಯಲ್ಲಿ ಹಾಳಾಗುತ್ತಿವೆ. ಲಕ್ಷಾಂತರ ಮೌಲ್ಯದ ಬಕೆಟ್‌ಗಳು ಇಲಿ, ಹೆಗ್ಗಣಗಳ ಪಾಲಾಗುತ್ತಿವೆ ಎಂದು ಪುರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಕೆಟ್‌ಗಳಲ್ಲಿ ಸಂಗ್ರಹಿಸುವ ಮನೆಗಳ ಕಸವನ್ನು ಪ್ರತಿದಿನ ಮನೆಯ ಬಾಗಿಲಿಗೆ ಬರುವ ಕಸದ ವಾಹನಕ್ಕೆ ಹಾಕಬೇಕು. ಮನೆ ಹಾಗೂ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡು ಯಾವುದೇ ಸಾಂಕ್ರಾಮಿಕ ರೋಗ ಬಾರದಂತೆ ಜಾಗೃತಿ ವಹಿಸುವುದು ಇದರ ಉದ್ದೇಶವಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಯೋಜನೆ ಸದ್ಬಳಕೆಯಾಗುತ್ತಿಲ್ಲ.

‘ಪಟ್ಟಣದಲ್ಲಿ 8,000 ಮನೆಗಳಿದ್ದು, ಅಂದಾಜು 35 ಸಾವಿರ ಜನಸಂಖ್ಯೆ ಇದೆ. ನಮ್ಮಲ್ಲಿ ಕೇವಲ 2,000 ಪ್ಲಾಸ್ಟಿಕ್‌ ಬಕೆಟ್‌ ಇವೆ. ಪುರಸಭೆ ವ್ಯಾಪ್ತಿಯಲ್ಲಿರುವ 23 ವಾರ್ಡ್‌ಗಳಿಗೆ ಈಗಿರುವ ಬಕೆಟ್‌ಗಳು ಸಾಲುವುದಿಲ್ಲ. ಇನ್ನೂ ಹೆಚ್ಚಿನ ಬಕೆಟ್‌ಗಳನ್ನು ಸರಬರಾಜು ಮಾಡಲು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಬಂದ ತಕ್ಷಣ ಸಾರ್ವಜನಿಕರಿಗೆ ವಿತರಿಸಲಾಗುವುದು’ ಎಂದು ಮುಖ್ಯಾಧಿಕಾರಿ ಪ್ರವೀಣಕುಮಾರ ಹೇಳುತ್ತಾರೆ.

‘ಯಾವುದೇ ಯೋಜನೆಯು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪದಿದ್ದಲ್ಲಿ ಸರ್ಕಾರದ ಹಣ ಪೋಲಾಗುತ್ತದೆ. ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಬೇಕು. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪುರಸಭೆಗೆ ಬಂದಿರುವ ಪ್ಲಾಸ್ಟಿಕ್‌ ಬಕೆಟ್‌ಗಳು ಮೂರು ವರ್ಷಗಳಿಂದ ಕೋಣೆಯೊಂದರಲ್ಲಿ ಹಾಳಾಗುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ’ ಎಂದು ಯುವ ಮುಖಂಡ ಚಂದ್ರಶೇಖರ ವಜ್ಜಲ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕಾರ್ಯನಿರ್ವಹಿಸದ ಸಿಸಿ ಕ್ಯಾಮೆರಾ: ‘ಮಹರ್ಷಿ ವಾಲ್ಮೀಕಿ ವೃತ್ತ, ಕನಕ ವೃತ್ತ, ಅಂಬೇಡ್ಕರ್ ವೃತ್ತ, ಪೊಲೀಸ್ ಠಾಣೆ ಸೇರಿದಂತೆ ವಿವಿಧೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ಕೆಲವು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ’ ಎಂದು ವ್ಯಾಪಾರಿಗಳು ಮತ್ತು ಸಾರ್ವಜನಿಕರು ಆರೋಪಿಸುತ್ತಾರೆ.

‘ಈಚಗೆ ನಮ್ಮ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಸಿ.ಸಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿದ್ದರೆ ಕಳ್ಳತನ ನಡೆಯುತ್ತಿರಲಿಲ್ಲ. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಅಧಿಕಾರಿಗಳು ಸಿ.ಸಿ ಕ್ಯಾಮೆರಾ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಪರಮಣ್ಣ ಜಂಪಾ ಮನವಿ ಮಾಡಿದ್ದಾರೆ.

ಮಳಿಗೆ ಬಾಡಿಗೆ ನೀಡಲು ಒತ್ತಾಯ: ‘ಪಟ್ಟಣದ ಪುರಸಭೆ ಮಳಿಗೆಗಳು ಉದ್ಘಾಟನೆಯಾಗಿ 2 ವರ್ಷ ಕಳೆದರೂ ಬಾಡಿಗೆ ನೀಡಲು ಕ್ರಮ ಕೈಗೊಂಡಿಲ್ಲ. ಈ ಹಿಂದಿನ ಅಧಿಕಾರಿ, ಪ್ರಸ್ತುತ ಮುಖ್ಯಾಧಿಕಾರಿ ಸೂಕ್ತ ಕ್ರಮ ಕೈಗೊಂಡಿದ್ದರೆ ಬಾಡಿಗೆ ಹಣ ಬಂದು ಕಟ್ಟಡದ ಸಂಪೂರ್ಣ ಖರ್ಚು ಬರುತ್ತಿತ್ತು. ಶೀಘ್ರವೇ ಸಭೆ ಕರೆದು ಪುರಸಭೆ ಮಳಿಗೆಗಳನ್ನು ಬಾಡಿಗೆ ಕೊಡಬೇಕು’ ಎಂದು ವ್ಯಾಪಾರಸ್ಥರಾದ ಸಂಗಣ್ಣ ಹಡಗಲ್, ಅಮರೇಶ ತೇರಿನ್, ರಾಘವೇಂದ್ರ ಮುದನೂರ, ಗಂಗಾಧರ ಪತ್ತಾರ ಒತ್ತಾಯಿಸಿದ್ದಾರೆ.

ವರ್ಷವಾದರೂ ದುರಸ್ತಿಯಾಗದ ಸಿಸಿ ಕ್ಯಾಮೆರಾ
ವರ್ಷವಾದರೂ ದುರಸ್ತಿಯಾಗದ ಸಿಸಿ ಕ್ಯಾಮೆರಾ
ವರ್ಷವಾದರೂ ದುರಸ್ತಿಯಾಗದ ಸಿಸಿ ಕ್ಯಾಮೆರಾ
ವರ್ಷವಾದರೂ ದುರಸ್ತಿಯಾಗದ ಸಿಸಿ ಕ್ಯಾಮೆರಾ

ಆದ್ಯತೆ ಮೇಲೆ ಪಟ್ಟಣದ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಈಗಿರುವ ಪ್ಲಾಸ್ಟಿಕ್‌ ಬಕೆಟ್‌ಗಳು 23 ವಾರ್ಡ್‌ಗಳಿಗೆ ಸಾಕಾಗುವುದಿಲ್ಲ. ಹೀಗಾಗಿ ವಿತರಿಸಿಲ್ಲ. ಇನ್ನು ಸಿ.ಸಿ ಕ್ಯಾಮೆರಾಗಳನ್ನು 2 ದಿನಗಳಲ್ಲಿ ದುರಸ್ತಿ ಮಾಡಲಾಗುವುದು.

-ಪ್ರವೀಣಕುಮಾರ ಪುರಸಭೆ ಮುಖ್ಯಾಧಿಕಾರಿ

ಸ್ವಚ್ಛ ಪಟ್ಟಣಕ್ಕಾಗಿ ಪ್ಲಾಸ್ಟಿಕ್ ಬಕೆಟ್ ಶೀಘ್ರ ವಿತರಿಸಬೇಕು. ನಗರದ ವಿವಿಧೆಡೆ ಅಳವಡಿಸಿರುವ ಸಿ.ಸಿ ಕ್ಯಾಮೆರಾಗಳನ್ನು ದುರಸ್ತಿಗೊಳಿಸಿ ನಿರಂತರ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ.

-ಚಂದ್ರಶೇಖರ ವಜ್ಜಲ್ ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT