ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಥಲಸ್ಸೇಮಿಯಾ’ ಗೆದ್ದ ಯಶೋಧಾ

Published 18 ಜನವರಿ 2024, 5:07 IST
Last Updated 18 ಜನವರಿ 2024, 5:07 IST
ಅಕ್ಷರ ಗಾತ್ರ

ಸುರಪುರ: ಮಾರಣಾಂತಿಕ ಮತ್ತು ಅಪರೂಪದ ‘ಥಲಸ್ಸೇಮಿಯಾ’ ಕಾಯಿಲೆಯಿಂದ ಬಳಲುತ್ತಿದ್ದ ಯಶೋಧಾ ಬೆಂಗಳೂರಿನ ಅಂತರರಾಷ್ಟ್ರೀಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾಳೆ.

ತಾಲ್ಲೂಕಿನ ವಾಗಣಗೇರಾ ಗ್ರಾಮದ ಪರಿಶಿಷ್ಟ ಜಾತಿಯ ಮಲ್ಲಿಕಾರ್ಜುನ ಕಟ್ಟಿಮನಿ ಮತ್ತು ರೇಣುಕಾ ದಂಪತಿಯ ಮಕ್ಕಳಾದ ಹರಿಶ್ಚಂದ್ರ (11) ಮತ್ತು ಯಶೋಧಾ (9) ‘ಥಲಸ್ಸೇಮಿಯಾ’ ಕಾಯಿಲೆಯಿಂದ ಬಳಲುತ್ತಿದ್ದರು. ಬಡವರಾಗಿದ್ದ ದಂಪತಿಗೆ ಚಿಕಿತ್ಸೆ ಕೊಡಿಸುವ ಆರ್ಥಿಕ ಶಕ್ತಿ ಇರಲಿಲ್ಲ.

ಈ ಕುರಿತು 2022ರ ಅಕ್ಟೋಬರ್ 29ರಂದು ‘ಪ್ರಜಾವಾಣಿ’ ವಿಶೇಷ ಲೇಖನ ಪ್ರಕಟಿಸಿತ್ತು. ಶಾಸಕರಾಗಿದ್ದ ರಾಜೂಗೌಡ ತಕ್ಷಣ ಸ್ಪಂದಿಸಿದ್ದರು. ಅ.30ರಂದು ಕಲಬುರಗಿಗೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಟ್ಟಿಮನಿ ಕುಟುಂಬವನ್ನು ಭೇಟಿ ಮಾಡಿಸಿ ಚಿಕಿತ್ಸೆಗೆ ₹20 ಲಕ್ಷ ಮಂಜೂರು ಮಾಡಿಸಿದ್ದರು.

ಚಿಕಿತ್ಸೆಗೆ ಒಟ್ಟು ಬೇಕಾಗಿದ್ದು ₹40 ಲಕ್ಷ. ಇತರೆ ಖರ್ಚು ₹5 ಲಕ್ಷ ಸೇರಿ ₹25 ಲಕ್ಷ ಕಡಿಮೆ ಬಿತ್ತು. ಅಷ್ಟೂ ಹಣವನ್ನು ರಾಜೂಗೌಡ ನೆರವು ನೀಡಿ ಮಾನವೀಯತೆ ಮೆರೆದರು.

ಕೆಲ ದಿನಗಳ ನಂತರ ಬೆಂಗಳೂರಿನ ಅಂತರರಾಷ್ಟ್ರೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಕ್ರಿಯೆ ಆರಂಭಗೊಂಡಿತು. ಒಂದು ವರ್ಷ ಎರಡು ತಿಂಗಳ ನಂತರ ಯಶೋಧಾಳಿಗೆ ಇದೇ ಜನವರಿ 3ರಂದು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಚಿಕಿತ್ಸೆ ಯಶಸ್ವಿಯಾಗಿದ್ದು ಮಗು ಆರೋಗ್ಯವಾಗಿದೆ. ಓಡಾಡುತ್ತಿದ್ದು, ಮಗು ತನಗೆ ಇಷ್ಟವಾದ ಚಿತ್ರಕಲೆಯಲ್ಲಿ ತೊಡಗುತ್ತಿದೆ. ಇನ್ನು 15 ದಿನದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ.

‘ಥಲಸ್ಸೇಮಿಯಾ’ ಮೂಳೆ ಮಜ್ಜೆ ಕಾಯಿಲೆ. ರೋಗಿಗಳಲ್ಲಿ ಹಿಮೋಗ್ಲೋಬಿನ್ ಕೊರತೆ ಇರುತ್ತದೆ. ಪ್ರತಿ ತಿಂಗಳು ಇಲ್ಲವೇ 15 ದಿನಕ್ಕೆ ಒಮ್ಮೆ ರಕ್ತ ಬದಲಿಸಬೇಕು. ಮಕ್ಕಳು ಜನಿಸಿದ ಎರಡು ಮೂರು ವರ್ಷಗಳ ನಂತರ ರೋಗ ಪತ್ತೆಯಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಪಾಲಕರು ರಕ್ತ ಬದಲಾವಣೆ ಮಾಡಿಸಿಕೊಂಡು ಬರುತ್ತಿದ್ದಾರೆ. ಈ ರೋಗಕ್ಕೆ ಮೂಳೆ ಮಜ್ಜೆ ಕಸಿಯೊಂದೆ ಪರಿಹಾರ. ರೋಗಿಗೆ ಹೊಂದಾಣಿಕೆಯಾಗುವ ಆರೋಗ್ಯವಂತ ವ್ಯಕ್ತಿಯಿಂದ ಮೂಳೆ ಮಜ್ಜೆ ದಾನ ಪಡೆದು ರೋಗಿಗೆ ಅಳವಡಿಸಲಾಗುತ್ತದೆ.

ಇಬ್ಬರೂ ಮಕ್ಕಳಿಗೆ ತಂದೆ ಮಲ್ಲಿಕಾರ್ಜುನ ಅವರ ಮಜ್ಜೆ ಹೊಂದಾಣಿಕೆಯಾಗಿದ್ದು ಅವರೇ ದಾನ ಮಾಡುತ್ತಿದ್ದಾರೆ. ಮಗಳು ಯಶೋಧಾಗೆ ದಾನ ನೀಡಿದ್ದಾರೆ. ಮಗ ಹರಿಶ್ಚಂದ್ರ ನಿಗೆ ಆರು ತಿಂಗಳ ನಂತರ ಶಸ್ತ್ರಚಿಕಿತ್ಸೆಗೆ ಸಮಯ ನೀಡಿದ್ದಾರೆ. ದಾನ ನೀಡಿದ ತಂದೆ ಮಲ್ಲಿಕಾರ್ಜುನ ಅವರೂ ಈಗ ಆರೋಗ್ಯದಿಂದ ಇದ್ದಾರೆ. ಮಗಳ ಚೇತರಿಕೆ ಕುಟುಂಬದಲ್ಲಿ ಉತ್ಸಾಹ ಮೂಡಿಸಿದೆ.

‘ಊಟಕ್ಕೂ ತೊಂದರೆ ಪಡುತ್ತಿರುವ ನಾವು ಮಕ್ಕಳ ಚಿಕಿತ್ಸೆಗೆ ಸಾಕಷ್ಟು ಸಾಲ ಮಾಡಿದ್ದೆವು. ಮಕ್ಕಳು ಬದುಕುತ್ತವೆ ಎಂಬ ಆಸೆಯೇ ನಮಗಿರಲಿಲ್ಲ. ದೇವರಂತೆ ಬಂದ ರಾಜೂಗೌಡರು ಮಾಡಿದ ಸಹಾಯ ಎಂದೂ ಮರೆಯುವಂತಿಲ್ಲ. ಚಿಕಿತ್ಸೆ ನೀಡಿ ನಮ್ಮ ಮಗುವಿಗೆ ಪುನರ್ಜನ್ಮ ನೀಡಿದ ಡಾ. ಸ್ಟಾಲಿನ್ ರಾಮಪ್ರಕಾಶ, ಡಾ. ರಘುರಾಮ ಸಿ.ಪಿ., ಡಾ. ಸೋಮಾ ಅವರಿಗೆ ನಮ್ಮ ಕುಟುಂಬ ಚಿರಋಣಿ’ ಎನ್ನುತ್ತಾರೆ ಮಲ್ಲಿಕಾರ್ಜುನ.

ಅಪರೂಪದ ಸ್ನೇಹಿತ

ಮಲ್ಲಿಕಾರ್ಜುನ ಕುಟುಂಬ ಹತಾಶರಾಗಿದ್ದಾಗ ಅವರ ನೆರವಿಗೆ ಬಂದವರು ಬಾಲ್ಯ ಸ್ನೇಹಿತ ಶಿವರಾಜ ಪಾಟೀಲ. ರಾಜೂಗೌಡ ಅವರಿಗೆ ಆಪ್ತರಾಗಿರುವ ಶಿವರಾಜ ಗಂಭೀರತೆಯನ್ನು ಮನವರಿಕೆ ಮಾಡಿ ಚಿಕಿತ್ಸೆಗೆ ಹಣ ಬಿಡುಗಡೆ ಮಾಡಿಸಲು ಶ್ರಮಿಸಿದರು.

ಆಸ್ಪತ್ರೆ, ಚಿಕಿತ್ಸೆ, ಖರ್ಚು, ವೆಚ್ಚ ಎಲ್ಲದರಲ್ಲೂ ಜೊತೆಗಿದ್ದು ಮಲ್ಲಿಕಾರ್ಜುನ ಕುಟುಂಬಕ್ಕೆ ಮಾನಸಿಕ ಧೈರ್ಯ ತುಂಬಿದರು. ಸ್ನೇಹಿತ ಶಿವರಾಜ ಅವರ ಬಗ್ಗೆ ಹೇಳುವಾಗ ಮಲ್ಲಿಕಾರ್ಜುನ ಅವರ ಕಣ್ಣಾಲಿಗಳು ತೇವವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT