ಶಿವನ ಒಲುಮೆಗೆ ಭಾವ ಶುದ್ಧಿ ಅಗತ್ಯ: ಗಂಗಾಧರ ಸ್ವಾಮೀಜಿ

7

ಶಿವನ ಒಲುಮೆಗೆ ಭಾವ ಶುದ್ಧಿ ಅಗತ್ಯ: ಗಂಗಾಧರ ಸ್ವಾಮೀಜಿ

Published:
Updated:
Prajavani

ಯಾದಗಿರಿ: ‘ಪ್ರತಿಯೊಬ್ಬರೂ ಜೀವನದಲ್ಲಿ ಭಕ್ತಿ, ಶ್ರದ್ಧೆಯಿಂದ, ಇರಬೇಕು, ಶಿವನ ಒಲುಮೆಯನ್ನು ಸಂಪಾದಿಸಿಕೊಳ್ಳಬೇಕಾದರೆ ಭಾವಶುದ್ಧಿಯಿಂದ ಆರಾಧಿಸಬೇಕಾಗುತ್ತದೆ’ ಎಂದು ಅಬ್ಬೆತುಮಕೂರು ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಹೇಳಿದರು.

ಶ್ರೀಮಠದಲ್ಲಿ ಶುಕ್ರವಾರ ವಿಶ್ವಾರಾಧ್ಯರ ಧರ್ಮಪತ್ನಿ ಬಸ್ಸಮ್ಮ ತಾಯಿಯ ಜಾತ್ರಾಮಹೋತ್ಸವದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಸಾಂಸಾರಿಕ ಜಂಜಾಟದಲ್ಲಿ ತೊಳಲಾಡುತ್ತಾ ಭವ ಬದುಕಿಗೆ ಸಿಲುಕಿಕೊಳ್ಳಬಾರದು. ನಶ್ವರವಾದ ಈ ಜೀವನದ ಜಂಜಾಟದಿಂದ ಪಾರಾಗಲೂ ಶಾಶ್ವತವಾದ ಘನಸಂಪತ್ತನ್ನು ಪಡೆಯಲು ಭಕ್ತಿ, ಶ್ರದ್ಧೆಯಿಂದ ಜೀವನವನ್ನು ನಡೆಸಬೇಕು’ ಎಂದು ಹೇಳಿದರು.

‘ವಿಶ್ವಾರಾಧ್ಯರು ಅನಂತ ಲೀಲೆಗಳಿಂದ ಜಗದೊಡೆಯನಾಗಿ ಮೆರೆದ ಮಹಿಮಪುರುಷರು. ಈ ಸಿದ್ದಿ ಪುರುಷನ ಸಾಧನೆಗೆ ಆಸರೆಯಾಗಿ ಬಸ್ಸಮ್ಮ ತಾಯಿ ನಿಂತಿದ್ದರು. ವಿರಾಟ ಪುರುಷ ವಿಶ್ವಾರಾಧ್ಯ ಒಡ್ಡುವ ಎಲ್ಲ ಸವಾಲುಗಳನ್ನು ಅತ್ಯಂತ ಧೀಶಕ್ತಿಯಿಂದ ಎದುರಿಸಿ ಗಂಡನಿಗೆ ತಕ್ಕ ಮಡದಿಯಾಗಿ ಮಹಾತ್ಮಳೆನಿಸಿಕೊಂಡರು’ ಎಂದರು.

‘ಸಾಂಸಾರಿಕ ಜೀವನದಲ್ಲಿ ಗಂಡ ಹೆಂಡತಿ ಸಮಾನರಾಗಿ ಏಕೋಭಾವದಿಂದ ಬಾಳಿ ಬದುಕಬೇಕು. ಮೇಲುಕೀಳೆಂಬ ಭಾವತೊರೆದು ಇಬ್ಬರೂ ಸಮಾನರೆಂಬ ವಿಶಾಲ ಮನೋಭಾವ ಹೊಂದಿದಾಗ ಸಾಂಸಾರಿಕ ಜೀವನ ಸುಂದರಮಯವಾಗುತ್ತದೆ’ ಎಂದು ಹೇಳಿದರು.

ಬೆಳಿಗ್ಗೆ ಬಸ್ಸಮ್ಮ ತಾಯಿಯ ಕರ್ತೃ ಗದ್ದುಗೆಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಸಂಜೆ ಶ್ರೀಮಠದಿಂದ ಅಬ್ಬೆತುಮಕೂರಿನ ಪ್ರಮುಖ ಬೀದಿಗಳಲ್ಲಿ ಬಾಜಾ ಭಜಂತ್ರಿ, ಡೊಳ್ಳು ವಾದ, ಸುಮಂಗಲಿಯರ ಕಳಸ, ಪುರವಂತರ ಸೇವೆಯೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು.

ನಂತರ ಬಸ್ಸಮ್ಮ ತಾಯಿಯ ರಥೋತ್ಸವವನ್ನು ಅತ್ಯಂತ ಭಕ್ತಿಯಿಂದ ನಡೆಸಲಾಯಿತು. ಜಾತ್ರಾಮಹೋತ್ಸವಕ್ಕೆ ಆಗಮಿಸಿದ ಸಮಸ್ತ ಭಕ್ತರಿಗೆ ಕಾಡಂಮಗೇರಾ ವಿಶ್ವಾರಾಧ್ಯ ಸೇವಾ ಸಮಿತಿವತಿಯಿಂದ ಪ್ರಸಾದ ಸೇವೆ ಜರುಗಿತು.

ಚೆನ್ನಪ್ಪಗೌಡ ಮೋಸಂಬಿ, ಡಾ.ಸುಭಾಶ್ಚಂದ್ರ ಕೌಲಗಿ, ಎಸ್.ಎನ್.ಮಿಂಚನಾಳ ಸೇರಿದಂತೆ ಅಬ್ಬೆತುಮಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಅನೇಕ ಭಕ್ತರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !