ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಸಲಹೆ -ಜಬ್ಬಾರ್ ಕರೆ

ಕಾಂಗ್ರೆಸ್‌ ಅಲ್ಪಸಂಖ್ಯಾತರ ಚಿಂತನ ಮಂಥನ ಸಭೆಯಲ್ಲಿ ಜಬ್ಬಾರ್ ಕರೆ
Last Updated 22 ಜನವರಿ 2023, 14:03 IST
ಅಕ್ಷರ ಗಾತ್ರ

ಯಾದಗಿರಿ: ಪಕ್ಷದಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷವನ್ನು ಬೇರುಮಟ್ಟದಿಂದ ಬಲಪಡಿಸಿ ಸಂವಿಧಾನದ ರಕ್ಷಣೆಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಪಣ ತೊಡಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಪ್ರಕೋಷ್ಠದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಹೇಳಿದರು.

ನಗರದ ಈಡನ್‌ ಗಾರ್ಡ್‌ನ್‌ ಬಳಿ ಭಾನುವಾರ ನಡೆದ ಕಾಂಗ್ರೆಸ್‌ ಅಲ್ಪಸಂಖ್ಯಾತರ ಚಿಂತನ ಮಂಥನ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಿವಿಧ ಧರ್ಮ ಮತ್ತು ಜಾತಿಗಳ ಜನರ ನಡುವೆ ನಿರ್ಣಾಯಕ ನೀತಿ ಅನುಸರಿಸುತ್ತಿರುವ ಬಿಜೆಪಿ ಸರ್ಕಾರದ ಕೆಟ್ಟ ಆಡಳಿತದಿಂದ ರಾಜ್ಯದ ಜನರು ಬೇಸತ್ತಿದ್ದಾರೆ. ಬಿಜೆಪಿಯು ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದೆ. ಒಂದಿಲ್ಲೊಂದು ಕಾರಣಕ್ಕಾಗಿ ಸಾರ್ವಜನಿಕ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಇತ್ತೀಚೆಗಷ್ಟೇ ಎಐಸಿಸಿ ಅಧ್ಯಕ್ಷರಾಗಿರುವ ಎಂ.ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪಕ್ಷ ಬಲಗೊಳ್ಳಲಿದೆ. ಅವರ ಪ್ರಬಲ ನಾಯಕತ್ವವು ಪಕ್ಷಕ್ಕೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಹೆಚ್ಚಿನ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲು ಉತ್ತೇಜನವನ್ನು ತರುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡ ಎ.ಸಿ.ಕಾಡ್ಲೂರು ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗುವಂತೆ ಅಲ್ಪಸಂಖ್ಯಾತರು ಎಚ್ಚರಿಕೆ ವಹಿಸಬೇಕು. ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಬೂತ್‌ನಲ್ಲಿಯೂ ಮತದಾರರ ಪಟ್ಟಿ ಪರಿಶೀಲಿಸಿಬೇಕು. ಹೊಸ ಮತದಾರರ ಸೇರ್ಪಡೆ ಮಾಡುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಬಿಜೆಪಿ ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಎಸ್ಸಿ, ಎಸ್ಟಿಗಳಿಗೆ, ಓಬಿಸಿ ವರ್ಗದವರಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸರೆಡ್ಡಿ ಅನಪುರ ಮಾತನಾಡಿ, ಬಿಜೆಪಿಯವರು ಎಲ್ಲವನ್ನು ನಾವೇ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಆರಂಭದಿಂದಲೂ ಕಾಂಗ್ರೆಸ್ ಮಾಡಿದ ಕೆಲಸಗಳನ್ನು ಬಿಜೆಪಿಯವರು ನಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. ಆದ ಕೆಲಸಗಳನ್ನು ಉದ್ಘಾಟನೆ ಮಾಡಿ ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಡಿಸಿಸಿ ಅಲ್ಪಸಂಖ್ಯಾತರ ಜಿಲ್ಲಾದ್ಯಕ್ಷ ಲಾಯಕ್ ಹುಸೇನ್ ಬಾದಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಎಂಎಲ್‌ಸಿ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಡೇವಿಡ್ ಸಿಮೆಯೋನ್, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಮರಿಗೌಡ ಹುಲಕಲ್, ಡಾ.ಶರಣಬಸಪ್ಪ ಕಾಮರೆಡ್ಡಿ, ಶರಣಪ್ಪ ಸಲಾದಪುರ, ಡಾ. ಭೀಮಣ್ಣ ಮೇಟಿ, ಬಸವರಾಜ ಜೈನ್, ರಾಜ್ಯ ಅಲ್ಪಸಂಖ್ಯಾತರ ಕಾರ್ಯದರ್ಶಿಗಳಾದ ಮಹಮ್ಮದ್ ಶಿರಾಜ್, ಅಬ್ದುಲ್ ಜಲೀಲ್ ಪೇಷಮಾಮ್, ಉಪಾಧ್ಯಕ್ಷ ಲಾಲ್ ಅಹ್ಮದ್ (ಬಾಂಬೆ ಶೇಟ್), ವಕ್ಫ್ ಜಿಲ್ಲಾಧ್ಯಕ್ಷ ಶೇಖ್ ಜಹೀರುದ್ದೀನ್, ಬ್ಲಾಕ್ ಅಧ್ಯಕ್ಷರಾದ ಸುದರ್ಶನ ನಾಯಕ, ಮರೆಪ್ಪ ಬಿಳ್ಹಾರ, ವಿನೋದ್ ಪಾಟೀಲ, ವಕ್ತಾರ ಶ್ಯಾಂಸನ್‌ ಮಾಳಿಕೇರಿ, ನಗರಸಭೆ ಸದಸ್ಯರಾದ ಖಮರುಲ್ ಇಸ್ಲಾಮ್, ಮನ್ಸೂರ್ ಅಫಘಾನ್, ಚೆನ್ನಕೇಶವ ಬಾಣತಿಹಾಳ, ಮಹೆಬೂಬ ಅಲಿ, ಮಹಮ್ಮದ್ ಬಾಬಾ, ಯಾಕೂಬ್ ಸಾಬ ದರ್ಜಿ, ಅವದ್ ಚಾವೂಸ್, ಅಬ್ದುಲ್ ಬಾಷುಮಿಯಾ ವಡಗೇರಿ ನಾಯ್ಕೋಡಿ, ಇನಾಯಿತ್ ಉರ್ ರಹೇಮಾನ್, ಸುರೇಶ್ ಜೈನ್, ವಕ್ಫ್ ಮಾಜಿ ಅಧ್ಯಕ್ಷ ಜಿಲಾನಿ ಅಫಘಾನ್ ಇದ್ದರು.
ಮುಖಂಡರಾದ ಖಾಜಿ ಇಮ್ತಿಯಾಜುದ್ದಿನ್ ಸಿದ್ದಿಕಿ ನಿರೂಪಿಸಿದರು, ಯುವ ಮುಖಂಡ ಇರ್ಫಾನ್ ಬಾದಲ್ ಸ್ವಾಗತಿಸಿದರು, ಇರ್ಫಾನ್ ಕಾಡ್ಲೂರು ವಂದಿಸಿದರು.

***

ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾಗಲಿ, ಆ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು

ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ಅಲ್ಪಸಂಖ್ಯಾತರ ಪ್ರಕೋಷ್ಠದ ರಾಜ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT