ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಉತ್ತಮ ಮಳೆ, ಗರಿಗೆದರಿದ ಕೃಷಿ ಚಟುವಟಿಕೆ

Published 7 ಜೂನ್ 2024, 6:27 IST
Last Updated 7 ಜೂನ್ 2024, 6:27 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನಲ್ಲಿ ಮೇ ತಿಂಗಳು ಎರಡು ಮೂರು ಬಾರಿ ಉತ್ತಮ ಮಳೆ ಸುರಿದಿದೆ. ಮುಂಗಾರು ಪೂರ್ವದ ಮಳೆಯ ಸಿಂಚನದಿಂದ ಕಳೆದ ಬಾರಿ ಅನಾವೃಷ್ಟಿಯಿಂದ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಜೋರು ಪಡೆದುಕೊಂಡಿವೆ. ಕೊಟ್ಟಿಗೆಯಲ್ಲಿದ್ದ ಎತ್ತುಗಳು, ಉಳುಮೆ ಸಾಮಗ್ರಿಗಳು ಜಮೀನಿನಲ್ಲಿ ಕಾಣತೊಡಗಿವೆ. ಬಿಸಿಲು ಮತ್ತು ಧಗೆ ಇನ್ನೂ ಇರುವುದರಿಂದ ರೈತರು ನಸುಕಿನಲ್ಲೆ ಹೊಲಕ್ಕೆ ತೆರಳಿ ಬೇಸಾಯದಲ್ಲಿ ತೊಡಗುತ್ತಿದ್ದಾರೆ.

ಒಣ ಬೇಸಾಯಿ (ಖುಷ್ಕಿ) ಜಮೀನುಗಳಲ್ಲಿ ಈಗಾಗಲೇ ಶೇ 80ರಷ್ಟು ಹದಗೊಳಿಸುವ ಕಾರ್ಯ ಪೂರ್ಣಗೊಂಡಿವೆ. ಜಮೀನಿನ ಅಲ್ಲಲ್ಲಿ ಬೆಳೆದಿದ್ದ ಕಳೆಯನ್ನು ತೆಗೆದಿರುವ ರೈತರು ಭೂಮಿಯನ್ನು ಅಂದವಾಗಿಸಿದ್ದಾರೆ.

ಇನ್ನೊಂದು ಉತ್ತಮಮಳೆ (ಹಸಿ ಮಳೆ) ಬಂದರೆ ಬಿತ್ತನೆ ಆರಂಭವಾಗುತ್ತದೆ. ಈಗಾಗಲೇ ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಪೂರೈಕೆ ನಡೆದಿದೆ. ಖಾಸಗಿ ವರ್ತಕರಲ್ಲೂ ಬಿತ್ತನೆ ಬೀಜದ ವ್ಯಾಪಾರ ನಡೆದಿದೆ.

ವಾಡಿಕೆಯಂತೆ ಜನವರಿಯಿಂದ ಮೇ ಅಂತ್ಯದವರೆಗೆ 53.68 ಮಿ.ಮೀ ಮಳೆ ಬರಬೇಕು. ಈ ಸಮಯದಲ್ಲಿ ಶೇ 90.28 ಮಳೆ ಸುರಿದಿದ್ದು. ಇದು ವಾಡಿಕೆಗಿಂತ ಶೇ 46.60 ಹೆಚ್ಚು. ಹವಾಮಾನ ಮುನ್ಸೂಚನೆಯಲ್ಲೂ ಉತ್ತಮ ಮಳೆಯ ವರದಿ ಇರುವುದರಿಂದ ರೈತ ಹರ್ಷ ಚಿತ್ತನಾಗಿದ್ದಾನೆ.

ಮುಂಗಾರು ಹಂಗಾಮಿಗೆ 1,55,763 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಭತ್ತ 60,703 ಹೆಕ್ಟೇರ್, ಹೆಸರು 4,295 ಹೆಕ್ಟೇರ್, ತೊಗರಿ 23,645 ಹೆಕ್ಟೇರ್, ಹತ್ತಿ 61,500 ಹೆಕ್ಟೇರ್, ಸಜ್ಜೆ 4,300 ಹೆಕ್ಟೇರ್ ಅಂದಾಜು ಬಿತ್ತನೆ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

‘ಮುಂಗಾರು ಹಂಗಾಮಿನಲ್ಲಿ ಎಲ್ಲ 5 ರೈತ ಸಂಪರ್ಕ ಕೇಂದ್ರಗಳಲ್ಲಿ 20.8 ಕ್ವಿಟಲ್ ಹೆಸರು, 329.4 ಕ್ವಿಟಲ್‌ ತೊಗರಿ ಬಿತ್ತನೆ ಬೀಜಗಳು ದಾಸ್ತಾನುಗೊಂಡಿವೆ. ಬೀಜ ವಿತರಣೆ ಪ್ರಗತಿಯಲ್ಲಿದ್ದು, ಯಾವುದೇ ಕೊರತೆ ಆಗುವುದಿಲ್ಲ’ ಎಂದು ಸಹಾಯಕ ಕೃಷಿ ನಿರ್ದೇಶಕ ಭೀಮರಾಯ ಹವಾಲ್ದಾರ್ ತಿಳಿಸಿದ್ದಾರೆ.

‘ಯೂರಿಯಾ 15,863 ಟನ್, ಡಿಎಪಿ 6,678 ಟನ್, ಕಾಂಪ್ಲೆಕ್ಸ್ 15,730 ಟನ್, ಎಂಎಪಿ 666 ಟನ್ ದಾಸ್ತಾನು ಲಭ್ಯವಿದ್ದು, ಖಾಸಗಿ ಪರವಾನಗಿ ಪಡೆದ ವರ್ತಕರ ಮೂಲಕ ಮಾರಾಟ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಸರ್ಕಾರದಿಂದ ಆಗಾಗ ಬರುವ ತಾಡಪಾಲ, ಕೃಷಿ ಪರಿಕರಗಳನ್ನು ರಿಯಾಯತಿ ದರದಲ್ಲಿ ಪೂರೈಸಲಾಗುತ್ತದೆ. ರೈತರು ತಪ್ಪದೇ ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ಸಲಹೆ ಬೇಕಾದಲ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು’ ಎಂದು ಸಲಹೆ ನೀಡಿದ್ದಾರೆ.

ರೈತರು ಅಧಿಕೃತ ಮಾರಾಟಗಾರರಲ್ಲಿ ಬಿತ್ತನೆ ಬೀಜ ರಸಗೊಬ್ಬರ ಕ್ರಿಮಿನಾಶಕ ಖರೀದಿಸಿ ಕಡ್ಡಾಯವಾಗಿ ಮೂಲ ರಸೀದಿಯನ್ನು ಪಡೆದುಕೊಳ್ಳಬೇಕು
-ಭೀಮರಾಯ ಹವಾಲ್ದಾರ್, ಸಹಾಯಕ ಕೃಷಿ ನಿರ್ದೇಶಕ ಸುರಪುರ
ಸರ್ಕಾರ ಕೃಷಿ ಸೌಲಭ್ಯಗಳನ್ನು 4 ಎಕರೆಗಿಂತ ಮೇಲ್ಪಟ್ಟು ಭೂಮಿ ಹೊಂದಿದ ರೈತರಿಗೂ ವಿಸ್ತರಿಸಬೇಕು. ರೈತರ ಸಂಕಷ್ಟ ಪರಿಹರಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಬೇಕು
-ವಿಶ್ವರಾಜ ಒಂಟೂರ, ರೈತ ಚಂದಲಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT