ಭಾನುವಾರ, ಸೆಪ್ಟೆಂಬರ್ 19, 2021
29 °C
17,882 ವಿದ್ಯಾರ್ಥಿಗಳು ಪಾಸ್‌, ಶೇ 100ರಷ್ಟು ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶ

ಯಾದಗಿರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದವರೆಲ್ಲ ಉತ್ತೀರ್ಣ

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಜುಲೈ 19 ಮತ್ತು 22ರಂದು ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 100ರಷ್ಟು ಫಲಿತಾಂಶ ಬಂದಿದೆ.

122 ಸರ್ಕಾರಿ ಪ್ರೌಢಶಾಲೆ, 16 ಸರ್ಕಾರಿ ವಸತಿ ಪ್ರೌಢಶಾಲೆ, 17 ಅನುದಾನಿತ ಹಾಗೂ 76 ಖಾಸಗಿ ಪ್ರೌಢ ಶಾಲೆಗಳು ಸೇರಿ ಒಟ್ಟು 231 ಶಾಲೆಗಳಲ್ಲಿ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು, ಪುನರಾವರ್ತಿತ ಅಭ್ಯರ್ಥಿಗಳು, ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಸೇರಿ 17,882 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಪ್ರತಿ ವರ್ಷ ಯಾದಗಿರಿ ಜಿಲ್ಲೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೊನೆಯಲ್ಲಿ ಇರುತ್ತಿತ್ತು. ಈ ಬಾರಿ ಕೊರೊನಾ ಕಾರಣದಿಂದ ಬಹುಆಯ್ಕೆ ಪ್ರಶ್ನೆಪತ್ರಿಕೆ ನೀಡಿದ್ದರಿಂದ ಶೇ 100ರಷ್ಟು ಫಲಿತಾಂಶ ಬಂದಿದೆ. ಇದರಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶೇ 100ರಷ್ಟು ಪ್ರತಿಶತ ಬಂದಿದೆ ಎಂದು ನಿಟ್ಟಿಸುರು ಬಿಟ್ಟಿದ್ದಾರೆ. 

ನಗರ ಪ್ರದೇಶದಲ್ಲಿ 51 ಹಾಗೂ ಗ್ರಾಮೀಣ ಪ್ರದೇಶದಲ್ಲಿ 41 ಸೇರಿ 92 ಪರೀಕ್ಷಾ ಕೇಂದ್ರಗಳಲ್ಲಿ 2,400 ಸಿಬ್ಬಂದಿ ಪರೀಕ್ಷಾ ಕಾರ್ಯಕ್ಕೆ 2,400 ನೇಮಕವಾಗಿದ್ದರು.

ಪರೀಕ್ಷೆ ಬರೆದವರ ವಿವರ: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಹುಆಯ್ಕೆ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು. ಎರಡು ಪರೀಕ್ಷೆ (ತಲಾ ಮೂರು ವಿಷಯಗಳು) ಜುಲೈ 19ರ ಸೋಮವಾರ ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಸಂಗೀತ ವಿಷಯಗಳ ಪರೀಕ್ಷೆಗಳು, ಜುಲೈ 22 ರಂದು ಭಾಷೆ ವಿಷಯಗಳ ಪರೀಕ್ಷೆಗಳು ನಡೆದಿತ್ತು.

10,252 ಬಾಲಕರು, 7,630 ಬಾಲಕಿಯರು ಸೇರಿದಂತೆ ಒಟ್ಟಾರೆ 17,882 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾರೆ. ಪ್ರಥಮ ಭಾಷೆಯಲ್ಲಿ 7,475 ಬಾಲಕಿಯರು, 6,456 ಬಾಲಕರು ಉತ್ತೀರ್ಣರಾಗಿದ್ದಾರೆ.

ಪರಿಶಿಷ್ಟ ಜಾತಿಯ 1,919, ಪರಿಶಿಷ್ಟ ಪಂಗಡ 840, ಪ್ರವರ್ಗ–1ರ 1,360, 2ಎ ರ 1,588, 2 ಬಿಯ 1,054, 3ಎ ಯ 201, ಇತರೆ 39 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಪಾಸಾಗಿದ್ದಾರೆ.

ಪರಿಶಿಷ್ಟ ಜಾತಿಯ 1,440, ಪರಿಶಿಷ್ಟ ಪಂಗಡ 657, ಪ್ರವರ್ಗ–1ರ 1,114, 2ಎ ರ 1,404, 2 ಬಿಯ 1,054, 3ಎ ಯ 201, ಇತರೆ 39 ಬಾಲಕಿಯರು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.

7,079 ಬಾಲಕರು, 6,073 ಬಾಲಕಿಯರು ಸೇರಿದಂತೆ 13, 152 ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ, ಸಹಕಾರ ಶಾಲೆಗಳ ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಕಿತ್ತೂರ ರಾಣಿ ಚನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ 286 ಬಾಲಕರು, 331 ಬಾಲಕರಿಯರು ಸೇರಿದಂತೆ 617 ವಿದ್ಯಾರ್ಥಿಗಳು ಶೇ 100ರಷ್ಟು ಫಲಿತಾಂಶ ಪಡೆದಿದ್ದಾರೆ.

5,285 ಗ್ರಾಮೀಣ, 2,190 ನಗರದ ಪ್ರದೇಶದ ಬಾಲಕರು, 4223 ಗ್ರಾಮೀಣ, 2,233 ನಗರದ ಪ್ರದೇಶ ಬಾಲಕಿಯರು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಒಟ್ಟಾರ 9,508 ಗ್ರಾಮೀಣ, 4,423 ನಗರ ಪ್ರದೇಶದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರೆಲ್ಲರೂ ಉತ್ತೀರ್ಣರಾಗಿದ್ದಾರೆ.

1,480 ಕೋಣೆ ಮೀಸಲು: ಪ್ರತಿ ಒಂದು ಪರೀಕ್ಷಾ ಬ್ಲಾಕ್‌ನಲ್ಲಿ 12 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. 371 ವಲಸೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡು ಪರೀಕ್ಷೆ ಬರೆದಿದ್ದರು. 1,480 ಕೋಣೆ ಮೀಸಲಿಡಲಾಗಿತ್ತು.

ಸರ್ಕಾರಿ ವಿದ್ಯಾರ್ಥಿಗಳು ಮೇಲುಗೈ
ಪ್ರತಿಬಾರಿ ಪರೀಕ್ಷೆಯಲ್ಲಿ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗುತ್ತಿದ್ದರು. ಆದರೆ, ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮೇಲುಗೈ ಸಾಧಿಸಿದ್ದಾರೆ. 

4,967 ಸರ್ಕಾರಿ ಶಾಲೆ, ಅನುದಾನ ಸಹಿತ 563, ಅನುದಾನ ರಹಿತ 1,945 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಪಾಸಾಗಿದ್ದಾರೆ. 

ಜಿಲ್ಲೆಗೆ ಈ ಬಾರಿ ಫಲಿತಾಂಶಲ್ಲಿ 29ನೇ ಸ್ಥಾನ ಲಭಿಸಿದೆ. ಈ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ ಜಿಲ್ಲೆಯಲ್ಲಿ ಉತ್ತಮ ಸ್ಥಾನ ಪಡೆದಿದೆ. 

***

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದವರೆಲ್ಲರೂ ಉತ್ತೀರ್ಣರಾಗಿದ್ದು, ಶೇ 100ರಷ್ಟು ಫಲಿತಾಂಶ ಬಂದಿದೆ.
-ಶಾಂತಗೌಡ ಪಾಟೀಲ, ಡಿಡಿಪಿಐ

***

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎ+ ಗ್ರೇಡ್‌ನಲ್ಲಿ 589, ಎ ಗ್ರೇಡ್‌ 3,520, ಬಿ ಗ್ರೇಡ್‌ 7,820, ಸಿ ಗ್ರೇಡ್‌ನಲ್ಲಿ 2002 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
-ಡಾ. ಮಲ್ಲಪ್ಪ ಕೆ ಯರಗೋಳ, ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್‌ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.