ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್‌: ನಳಿನ್‌

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭ
Last Updated 20 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಯಾದಗಿರಿ: ‘ದೇಶದಲ್ಲಿ ಇಲ್ಲಿಯವರೆಗೆ 17 ಲೋಕಸಭೆ ಚುನಾವಣೆಗಳು ನಡೆದಿವೆ. ಅದರಲ್ಲಿ ಕಾಂಗ್ರೆಸ್ 7 ಬಾರಿ ಬಹುಮತ ಪಡೆದಿದೆ. ಆದರೆ, ಈಗ ಪ್ರತಿಪಕ್ಷ ಸ್ಥಾನದಲ್ಲಿ ಕೂಡಲೂ ಆಯೋಗ್ಯವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್‌ ವಾಗ್ದಾಳಿ ನಡೆಸಿದರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಡಾ.ಶರಣಭೂ‍ಪಾಲರೆಡ್ಡಿ ನಾಯ್ಕಲ್ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘135 ವರ್ಷಗಳ ಇತಿಹಾಸವಿರುವಕಾಂಗ್ರೆಸ್‌ಗೆ ಈಗ ಹಿನ್ನಡೆ ಉಂಟಾಗಿದೆ. ಅಧಿಕಾರ ಪಡೆದ ನಂತರ ರಾಷ್ಟ್ರದ ಹಿತವನ್ನು ಮರೆತಿದೆ. ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸದೆ ಸೋಲಿನ ಭಯದಿಂದ ಕೇರಳಕ್ಕೆ ಬಂದರು. ವಂಶಾಡಳಿತ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಆದರೆ, ಬಿಜೆಪಿಯಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲಾ ಘಟಕದಲ್ಲೂ ಪದಾಧಿಕಾರಿಗಳ ಬದಲಾವಣೆ ಆಗುತ್ತದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಲವು ತಿಂಗಳು ಕಳೆದರೂ ಇನ್ನೂ ನೇಮಕ ಮಾಡದಿರುವುದು ಹಾಸ್ಪಾಸ್ಪದ’ ಎಂದರು.

‘ಕಾಂಗ್ರೆಸ್‌ ಒಡೆದ ಹಡಗಾಗಿದೆ. ನಾವಿಕನಿಲ್ಲದ ಹಡಗಿನ ಪರಿಸ್ಥಿತಿ ಇದೆ. ಇದಕ್ಕಾಗಿಯೇ ಮಾಜಿ ಸಚಿವ ಬಾಬುರಾವ ಚಿಂಚನಸೂರ ಕಾಂಗ್ರೆಸ್‌ ಬಿಟ್ಟು ಬಂದರು. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್‌ ಆಗಿದೆ’ ಎಂದು ಹರಿಹಾಯ್ದರು.

ಕಣ್ಣೀರು ಒರೆಸುವ ಸಿಎಂ:‘ಎಚ್‌.ಡಿ.ಕುಮಾರಸ್ವಾಮಿ ಅಧಿಕಾರಕ್ಕೆ ಬಂದನಂತರ ಎಲ್ಲ ಕಡೆ ಅಳುತ್ತಾ ಬಂದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಮೇಲೆ ಎಲ್ಲರನ್ನು ಅಳಿಸಿದರು. ಆದರೆ, ಯಡಿಯೂರಪ್ಪ ಕಣ್ಣೀರು ಒರೆಸುವ ಮುಖ್ಯಮಂತ್ರಿಯಾಗಿ ಇನ್ನೂ ಮೂರು ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರ ನಡೆಸುತ್ತಾರೆ’ ಎಂದರು.

ಭಿನ್ನಾಭಿಪ್ರಾಯ ಬೇಡ:ಬಿಜೆಪಿಯಲ್ಲಿ ಸಂಘಟನಾತ್ಮಕವಾಗಿ 37 ಜಿಲ್ಲೆಗಳಿವೆ. ಮಂಡಲ ಅಧ್ಯಕ್ಷರು, ಜಿಲ್ಲಾ ಘಟಕದ ಅಧ್ಯಕ್ಷರು ಆಯ್ಕೆ ಮಾಡಲಾಗಿದೆ.ಅಧ್ಯಕ್ಷರು ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕು. ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ಅದನ್ನು ಮೆಟ್ಟಿನಿಂತು ಮುನ್ನಡೆಸಿಕೊಂಡು ಹೋಗಬೇಕು ಎನ್ನುವ ಮೂಲಕ ಜಿಲ್ಲೆಯಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯದ ಬಗ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದನೂತನ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್ ಮಾತನಾಡಿ, ‘ಜಿಲ್ಲೆಯ ಎಲ್ಲ ಕಾರ್ಯಕರ್ತರನ್ನು ಒಟ್ಟಿಗೆ ಕರೆದೊಯ್ಯುತ್ತೇನೆ. ಪ್ರತಿಯೊಂದು ಬೂತ್‌ಗೆ ಭೇಟಿ ನೀಡುತ್ತೇನೆ. ‌ಎರಡು ಬಾರಿ ಜಿಲ್ಲಾಧ್ಯಕ್ಷನಾಗಿದ್ದೇನೆ. ಎಲ್ಲರನ್ನು ಮುನ್ನಡೆಸಿಕೊಂಡು ಹೋಗುತ್ತೇನೆ’ ಎಂದರು.

ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಮಾತನಾಡಿ, ‘ಪಕ್ಷದಲ್ಲಿ ಇದು ಅಧಿಕಾರ ಅಲ್ಲ. ಜವಾಬ್ದಾರಿ. ಇದನ್ನು ಮುನ್ನಡೆಸಿಕೊಂಡು ಹೋಗಬೇಕು’ ಎಂದರು.

ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಬೀದರ್ ಸಂಸದ ಭಗವಂತ ಖೂಬಾ ಮಾತನಾಡಿ, ದೇಶ ಬಲಿಷ್ಠವಾಗಲು ರೈತ ಪರ ಹಲವಾರು ಯೋಜನೆಗಳನ್ನು ಕೇಂದ್ರ, ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇವುಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು. ಸಿಎಎ ವಿರುದ್ಧ ವಿರೋಧ ಪಕ್ಷಗಳು ಅಲ್ಲೋಲ ಕಲ್ಲೋಲ ಉಂಟು ಮಾಡುತ್ತಿವೆ. ಇವುಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದು ತಿಳಿಸಿದರು.

ಬೈಕ್ ರ್‍ಯಾಲಿ:ಇದಕ್ಕೂ ಮುಂಚೆ ನಗರದ ಪದವಿ ಕಾಲೇಜಿನಿಂದ ಸಮಾರಂಭ ನಡೆಯುವ ವಿದ್ಯಾಮಂಗಲ ಕಾರ್ಯಾಲಯದವರೆಗೆ ತೆರೆದ ಜೀಪಿನಲ್ಲಿ ರಾಜ್ಯ ಘಟಕದ ಅಧ್ಯಕ್ಷರು, ಜಿಲ್ಲಾ ಘಟಕದ ಅಧ್ಯಕ್ಷರು ಸೇರಿದಂತೆ ವಿವಿಧ ಮುಖಂಡರ ಅದ್ದೂರಿ ಮೆರವಣಿಗೆ ನಡೆಯಿತು. ಬಿಜೆಪಿ ಅಭಿಮಾನಿಗಳಿಂದ ಬೈಕ್ ರ್‍ಯಾಲಿ ನಡೆಯಿತು.

ಗೈರು:ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ರಾಜೂಗೌಡ ಅಧಿವೇಶನ ಇರುವ ಕಾರಣ ಗೈರಾಗಿದ್ದರು.

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ನಾಗರತ್ನ ಕುಪ್ಪಿ, ಶಶೀಲ್ ಸಮೋಶಿ, ಗುರುಪಾಟೀಲ ಶಿರವಾಳ, ದೇವೇಂದ್ರ ನಾದ, ದೇವರಾಜ ನಾಯ್ಕ, ಸಾಯಬಣ್ಣ ಬೋರಬಂಡ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT