‘ಜನತಾದರ್ಶನದಲ್ಲಿ ಮನವಿ ಜತೆಗೆ ದಾಖಲೆ ಸಲ್ಲಿಸಿ’

ಗುರುವಾರ , ಜೂಲೈ 18, 2019
29 °C

‘ಜನತಾದರ್ಶನದಲ್ಲಿ ಮನವಿ ಜತೆಗೆ ದಾಖಲೆ ಸಲ್ಲಿಸಿ’

Published:
Updated:
Prajavani

ಯಾದಗಿರಿ: ಗ್ರಾಮ ವಾಸ್ತವ್ಯದ ಅಂಗವಾಗಿ ಹಮ್ಮಿಕೊಂಡಿರುವ ಜನತಾದರ್ಶನದಲ್ಲಿ ಮನವಿ ಸಲ್ಲಿಸುವ ಸಾರ್ವಜನಿಕರು ಪೂರಕ ದಾಖಲೆ ಲಗತ್ತಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನತಾದರ್ಶನದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಆಗಮಿಸುವ ಸಾರ್ವಜನಿಕರು ಕಡ್ಡಾಯವಾಗಿ ಮನವಿಯಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸತಕ್ಕದ್ದು. ಸರ್ಕಾರದಿಂದ ಮನೆ, ಪಿಂಚಣಿ, ಮುಖ್ಯಮಂತ್ರಿಗಳ ಪರಿಹಾರ ಇತ್ಯಾದಿ ವೈಯಕ್ತಿಕ ಸೌಲಭ್ಯಗಳು, ಸೌಲಭ್ಯಗಳ ಸಲುವಾಗಿ ತಮ್ಮ ಅರ್ಜಿಯೊಂದಿಗೆ ವಿಕಲಚೇತನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವೃದ್ಧಾಪ್ಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ (ಬಿಪಿಎಲ್) ಇತ್ಯಾದಿ ಅವಶ್ಯಕ ದಾಖಲೆಗಳ ಜಿರಾಕ್ಸ್ ಪ್ರತಿಗಳನ್ನು ಲಗತ್ತಿಸಿ, ನೋಂದಣಿ ಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಪ್ರತಿಯೊಬ್ಬರಿಗೂ ಟೋಕನ್ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ 7.30 ಗಂಟೆಗೆ ಯಾದಗಿರಿಯಿಂದ ರಸ್ತೆ ಮೂಲಕ ಗುರುಮಠಕಲ್ ತಾಲ್ಲೂಕಿನ ಚಂಡರಕಿ ಗ್ರಾಮಕ್ಕೆ ಪ್ರಯಾಣ ಮಾಡುವರು. ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಜನತಾ ದರ್ಶನ ನಡೆಸಿ, ಸಾರ್ವಜನಿಕರ ಮನವಿ ಸ್ವೀಕಾರ ಮತ್ತು ಕುಂದುಕೊರತೆ ಆಲಿಸುವರು. ಸಂಜೆ 6.30ರಿಂದ 8.30 ಗಂಟೆಯವರೆಗೆ ರೈತರಿಗೆ ಮಾಹಿತಿ, ಸ್ಥಳೀಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಹಾಗೂ ಶಾಲಾ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಭೋಜನ ಮಾಡುವರು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವರು’ ಎಂದು ವಿವರಿಸಿದರು.

‘ಜನತಾದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗಾಗಿ ಎಲ್‍ಇಡಿ ಪರದೆ ಅಳವಡಿಸಲಾಗುತ್ತಿದೆ. ಕುಡಿಯುವ ನೀರು, ಲಘು ಉಪಾಹಾರ ವ್ಯವಸ್ಥೆ ಮಾಡಲಾಗುವುದು. ಗುರುಮಠಕಲ್-ಚಂಡರಕಿ ಸಾರ್ವಜನಿಕರಿಗೆ ಉಚಿತವಾಗಿ ಪ್ರಯಾಣಿಸಲು ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮಾಧ್ಯಮ ಪ್ರತಿನಿಧಿಗಳಿಗೆ ಪಾಸ್/ಗುರುತಿನ ಚೀಟಿ ನೀಡಲಾಗುವುದು’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !