ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಸಂಸದರ ಸಭೆ ಜನಪರವಲ್ಲ; ರಾಜಕೀಯ!

ಶಿಷ್ಟಾಚಾರದ ಪ್ರಕಾರ ಲೋಪದೋಷಗಳಿದ್ದರೇ ರಾಜಿನಾಮೆ ನೀಡುತ್ತೀರಾ? ಜಾಧವಗೆ ಕಂದಕೂರ ಪ್ರಶ್ನೆ
Last Updated 17 ಜುಲೈ 2022, 16:34 IST
ಅಕ್ಷರ ಗಾತ್ರ

ಯಾದಗಿರಿ: ಕಲಬುರಗಿ ಸಂಸದ ಡಾ.ಉಮೇಶ ಜಾಧವ ಮತ್ತು ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರ ಅವರ ನಡುವೆ ಪತ್ರಿಕಾ ಹೇಳಿಕೆಗಳ ವಾಕ್ಸಮರ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ.

ಜುಲೈ 15ರಂದು ಸಂಸದ ಡಾ.ಜಾಧವ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಭೆಯ ಬಗ್ಗೆ ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರ ಅವರು ಸಂಸದ ಜಾಧವಗೆ ದಿಶಾ ಹೊರತುಪಡಿಸಿ, ಇನ್ನಾವುದೇ ಸಭೆ ನಡೆಸುವ ಅಧಿಕಾರವಿಲ್ಲ. ಹಾಗೊಂದು ವೇಳೆ ವಿವಿಧ ಇಲಾಖೆಗಳ ಪ್ರಗತಿಗೆ ಸಂಬಂಧಿಸಿದಂತೆ ಸಭೆ ನಡೆಸಬೇಕಾದರೆ ಕ್ಷೇತ್ರದ ಶಾಸಕನಾದ ನನಗೆ ಕಡ್ಡಾಯವಾಗಿ ಮಾಹಿತಿ ಕೊಡಬೇಕು. ಇದ್ಯಾವುದು ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಜಾಧವ ಅವರು, ನನ್ನ ಸಭೆ ಜನಪರ, ಇದರಲ್ಲಿ ರಾಜಕೀಯವಿಲ್ಲ. ಶಾಸಕ ಕಂದಕೂರ ಅಪಾರ್ಥ ಮಾಡಿಕೊಳ್ಳುವುದು ಸಲ್ಲದು ಎಂದು ತಿರುಗೇಟು ನೀಡಿದ್ದರು.

ಇದಕ್ಕೆ ಪ್ರತ್ಯುತರವಾಗಿ ಮತ್ತೆ ಶಾಸಕ ಕಂದಕೂರ ಮತ್ತೊಂದು ಹೇಳಿಕೆ ನೀಡಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಚೆಗೆ ನಡೆಸಿದ್ದ ಸಭೆ ಜನಪರವಲ್ಲ; ಅದು ಕೇವಲ ರಾಜಕೀಯ ಮಾತ್ರ ಎಂದಿದ್ದಾರೆ.

ಯಾವುದೇ ಕಾರಣಕ್ಕೂ ಸಂಸದರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲು ಬರುವದಿಲ್ಲವೆನ್ನುವು ಕನಿಷ್ಠ ಸರ್ಕಾರದ ಶಿಷ್ಟಾಚಾರವನ್ನು ತಿಳಿಯದೇ ಸಭೆ ನಡೆಸಿದ್ದೀರಿ. ಕನಿಷ್ಠ ಸರ್ಕಾರದ ಅಧಿಸೂಚನೆ ನೋಡಬೇಕಾದದ್ದು ಕರ್ತವ್ಯ ಎಂದು ತಿವಿದಿದ್ದಾರೆ.

ಪತ್ರಿಕಾ ಹೇಳಿಕೆ ನೀಡುವುದರ ಮೂಲಕ ಅಧಿಕಾರಿಗಳನ್ನು ನಾನು ಹೆದರಿಸುತ್ತೇನೆಂದು ಸಂಸದರು ಹೇಳಿದ್ದಾರೆ. ಇದು ನಿಮ್ಮ ಆಷಾಢ ಭೂತ ಪ್ರದರ್ಶಿಸಿದ್ದು ಆಶ್ಚರ್ಯವಾಗುತ್ತದೆ. ನನ್ನ 35-40 ವರ್ಷಗಳ ರಾಜಕೀಯ ಜೀವನದಲ್ಲಿ ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಒಂದೇ ಒಂದು ಪ್ರಕರಣದಲ್ಲಿ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸದೇ, ಯಾವುದೇ ಒಬ್ಬ ಅಧಿಕಾರಿಗೆ ಹೆದರಿಸದೆ ಅವರ ಸಹಕಾರದಿಂದ ಅಭಿವೃದ್ಧಿಯನ್ನು ಮಾಡುತ್ತಿರುವುದು ಇತಿಹಾಸ ಎಂದಿದ್ದಾರೆ.

ತಾಲ್ಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ವಿಶ್ವಾಸವನ್ನು ಕಳೆದುಕೊಂಡ ತಮ್ಮ ಮಿತ್ರರಾದ ಬಾಬುರಾವ ಚಿಂಚನಸೂರ ಅವರಿಗಾಗಿಯೇ ಸಭೆ ಕರೆದು ಕೇಂದ್ರದ ಯೋಜನೆಗಳ ಹಾಗೂ ಗುರುಮಠಕಲ್ ಮತಕ್ಷೇತ್ರದ ಅತಿವೃಷ್ಟಿ ಹಾಗೂ ಅಭಿವೃದ್ಧಿಗಾಗಿ ಎನ್ನುವುದು ನೆಪ ಮಾತ್ರಕ್ಕೆ ಎಂದು ಹೇಳಬಹುದು. ಸಭೆಯನ್ನು ಕುರಿತು ಮಾಹಿತಿ ನೀಡಲು ನನ್ನ ಜೊತೆ ಸಂಪರ್ಕಿಸಿದ್ದೇನೆಂದು ಪತ್ರಿಕೆಯಲ್ಲಿ ಸುಳ್ಳು ಹೇಳಿಕೆ ನೀಡಿದ್ದೀರಿ. ಪುರಾವೆ ಇದ್ದರೆ ಸಾಬೀತುಪಡಿಸಿ ಎಂದು ಸವಾಲು ಹಾಕಿದ್ದಾರೆ.

ಈ ಹಿಂದೆ ನೆರೆ, ಅತಿವೃಷ್ಟಿ, ರೈತರ ಸಮಸ್ಯೆಗಳು ಅಲ್ಲದೇ ಕೊರೊನಾದಂಥ ಭೀಕರ ಸಮಸ್ಯೆಗಳಿದ್ದಾಗ ನನ್ನ ಮತಕ್ಷೇತ್ರದಲ್ಲಿ ಯಾವ ಸಭೆ ನಡೆಸಿದ್ದೀರಿ? ಅಲ್ಲದೇ ಗುರುಮಠಕಲ್ ಮತಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಯಾವ ಯೋಜನೆಗಳನ್ನು ದಯಪಾಲಿಸಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಜುಲೈ 16ರಂದು ನನ್ನ ಪತ್ರಿಕಾ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನನ್ನ ಹೇಳಿಕೆಯಲ್ಲಿ ಸರ್ಕಾರದ ಶಿಷ್ಟಾಚಾರದ ಪ್ರಕಾರ ಏನಾದರೂ ಲೋಪದೋಷಗಳಿದ್ದರೇ ನಾನು ರಾಜಿನಾಮೆ ಕೊಡಲು ಸಿದ್ಧನಿದ್ದೇನೆ. ಅದರಂತೆ ನಿಮ್ಮ ಲೋಪದೋಷಗಳಿದ್ದರೆ ನೀವು ರಾಜಿನಾಮೆ ಕೊಡುತ್ತಿರಾ? ಎಂದು ಸಂಸದರಿಗೆ ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT