ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತ್ಯ ಕೃಷಿಯಿಂದ ಪ್ರಶಸ್ತಿ ಒಲಿದಿದೆ’

ಸಾಹಿತಿ ಚಂದ್ರಕಾಂತ ಕರದಳ್ಳಿಗೆ ಕಸಾಪ ವತಿಯಿಂದ ಸನ್ಮಾನ
Last Updated 30 ಅಕ್ಟೋಬರ್ 2019, 14:55 IST
ಅಕ್ಷರ ಗಾತ್ರ

ಯಾದಗಿರಿ: ‘ಸನ್ಮಾನ, ಬಹುಮಾನ ಮತ್ತು ಪ್ರಶಸ್ತಿಗಳು ಸಾಹಿತ್ಯ ಕೃಷಿ ಮತ್ತು ಸಮಾಜಮುಖಿ ಕೆಲಸಗಳಿಂದ ಒಲಿಯುತ್ತವೆ’ ಎಂದು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಾಹಿತಿ ಚಂದ್ರಕಾಂತ ಕರದಳ್ಳಿ ಅಭಿಪ್ರಾಯಪಟ್ಟರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಪರಿಷತ್ ಆವರಣದಲ್ಲಿ ಬುಧವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಿಜಾಮರು ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಹೆಚ್ಚು ಆಳಿದ ಕಾರಣ ಇಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಎಲ್ಲದರಲ್ಲೂ ಹಿಂದೆ ಬೀಳುವಂತಾಗಿದೆ. ಈ ಭಾಗ ಗುಲಾಮಗಿರಿಯಲ್ಲಿಯೇ ಸಾಗಿಬಂದ ಹಿನ್ನೆಲೆಯಲ್ಲಿ ಇಲ್ಲಿನ ಬದುಕು ಸಹ ದುರ್ಬರವಾಗಿತ್ತು. ಆದರೆ, ಏಕೀಕರಣದ ನಂತರ ಕನ್ನಡ ಪುನರುಜ್ಜೀವನಗೊಳ್ಳುತ್ತಿದ್ದರೂ ಅದು ತೃಪ್ತಿಕರವಾಗಿಲ್ಲ’ ಎಂದು ವಿಷಾದಿಸಿದರು.

‘ಅಂದು ಕನ್ನಡ ಭಾಷೆಗೆ ಅಷ್ಟೇ ಅಲ್ಲದೆ ಬದುಕಿಗೂ ಕುತ್ತು ಉಂಟಾಗಿದ್ದರಿಂದ ಇಂದು ಸಾಹಿತ್ಯಿಕವಾಗಿ ಈ ಭಾಗ ಹಿಂದುಳಿಯಬೇಕಾಯಿತು. ಉರ್ದು ಬೋರ್ಡ್‌ನ ಒಳಗೆ ಕನ್ನಡ ಕಲಿಸುತ್ತಾ ಬಂದ ಪರಿಣಾಮ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿ ಬೆಳೆದು ಬಂದಿದೆ. ಈ ಭಾಗದ ಹಿಂದುಳಿದ ಹಣೆ ಪಟ್ಟಿ ಕಳಚಬೇಕಿದ್ದರೆ ಇನ್ನಷ್ಟು ಕನ್ನಡ ತನ ಮೆರೆಯಬೇಕು’ ಎಂದು ಕರೆ ನೀಡಿದರು.

‘ಅಸಹನೆ, ಕಾಯಕ ಜೀವನದ ಕೊರತೆಗಳೆಲ್ಲವೂ ಈ ಭಾಗದ ಹಿಂಬೀಳುವಿಕೆಗೆ ಕಾರಣವಾಗಿವೆ ಎಂದು ವಿಶ್ಲೇಷಿಸಿದ ಅವರು, ಎಲ್ಲಕ್ಕೂ ಅಂತ್ಯ ಹಾಡಬೇಕಿದ್ದರೆ ಈ ಭಾಗದ ಜನಪ್ರತಿನಿಧಿಗಳು ಸಾಹಿತ್ಯ, ಸಂಸ್ಕೃತಿ, ಕಲೆಯ ಬೆಳವಣಿಗೆಗೆ ಸಹಕರಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಪರಿಷತ್‌ ವತಿಯಿಂದ ಚಂದ್ರಕಾತ ಕರದಳ್ಳಿ ಅವರನ್ನು ಸನ್ಮಾನಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಸುಭಾಶ್ಚಂದ್ರ ಕೌಲಗಿ, ತಾಲ್ಲೂಕು ಕಸಾಪ ಅಧ್ಯಕ್ಷ ಡಾ.ಭೀಮರಾಯ ಲಿಂಗೇರಿ, ಡಾ. ಗಾಳೆಪ್ಪ ಪೂಜಾರಿ, ಡಾ.ಎಸ್.ಎಸ್.ನಾಯಕ ಇದ್ದರು. ಪ್ರಕಾಶ್ ಅಂಗಡಿ ಕನ್ನೆಳ್ಳಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT