ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಜಿಲ್ಲೆಯಲ್ಲಿ ‘ಜೀವಹನಿ’ಗೆ ಪರದಾಟ

ರೆಡ್‌ ಕ್ರಾಸ್‌ ರಕ್ತ ನಿಧಿ ಬಂದ್‌, ತಾಲ್ಲೂಕಿನ ರಕ್ತ ಸಂಗ್ರಹ ಕೇಂದ್ರಗಳಲ್ಲೂ ರಕ್ತಕ್ಕಾಗಿ ಹುಟುಕಾಟ
Published 29 ಮೇ 2023, 15:32 IST
Last Updated 30 ಮೇ 2023, 1:34 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಒಂದೆಡೆ ಏರಿದ ತಾಪಮಾನ, ಮತ್ತೊಂದೆಡೆ ರೋಗಿಗಳು ರಕ್ತಕ್ಕಾಗಿ ಪರದಾಡುವುದು ಸಾಮಾನ್ಯವಾಗಿದೆ.

ಚುನಾವಣಾ ವರ್ಷವಾಗಿದ್ದರಿಂದ ಕಳೆದ ಎರಡು ತಿಂಗಳಿಂದ ರಕ್ತದಾನ ಶಿಬಿರಗಳು ಸಮರ್ಪಕವಾಗಿ ನಡೆದಿಲ್ಲ. ಇದರಿಂದ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಹಳೆ ಜಿಲ್ಲಾಸ್ಪತ್ರೆ) ಆವರಣದಲ್ಲಿರುವ ರೆಡ್‌ ಕ್ರಾಸ್‌ ಸಂಸ್ಥೆಯಲ್ಲಿ ರಕ್ತನಿಧಿ ಕೇಂದ್ರವೂ ಬಂದ್‌ ಆಗಿದೆ.

ತುರ್ತು ರಕ್ತ ಬೇಕಾಗಿದ್ದವರು ಖಾಸಗಿ ರಕ್ತನಿಧಿ, ಆಸ್ಪತ್ರೆಗಳಲ್ಲಿ ದುಬಾರಿ ಬೆಲೆ ನೀಡಿ ಖರೀದಿ ಮಾಡುವ ಪರಿಸ್ಥಿತಿ ಏರ್ಪಟ್ಟಿದೆ. ಬಡವರು ಅಷ್ಟು ದುಬಾರಿ ಹಣ ನೀಡಿ ಖರೀದಿಸಲು ಅಶಕ್ತರಾಗಿದ್ದಾರೆ.

ನಗರದಲ್ಲಿ ರೆಡ್‌ಕ್ರಾಸ್‌ ರಕ್ತ ನಿಧಿ, ಶಹಾಪುರ, ಸುರಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಸಂಗ್ರಹ ಕೇಂದ್ರವಿದೆ. ಆದರೆ, ಎಲ್ಲಿಯೂ ಸಮರ್ಪಕ ರಕ್ತ ಸಂಗ್ರಹವಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.

ವೈದ್ಯರೊಂದಿಗೆ ವಾಗ್ವಾದ:

ನಗರದ ಹಳೆ ಜಿಲ್ಲಾಸ್ಪತ್ರೆಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಿಂಗಳಲ್ಲಿ ನೂರಾರು ಶಸ್ತ್ರ ಚಿಕಿತ್ಸೆಗಳು ಆಗುತ್ತವೆ. ರಕ್ತ ಕಡಿಮೆ ಇರುವವರಿಗೆ ಹೆಚ್ಚುವರಿ ರಕ್ತ ಬೇಕಾಗುತ್ತದೆ. ಆಗ ವೈದ್ಯರು ರೋಗಿಯ ಸಂಬಂಧಿಕರಿಗೆ ರಕ್ತದ ವ್ಯವಸ್ಥೆ ಮಾಡಲು ಹೇಳಿದರೆ ವಾಗ್ವಾದಗಳು ನಡೆಯುವುದು ಸಾಮಾನ್ಯವಾಗಿದೆ.

‘ಗರ್ಭಿಣಿಗೆ ರಕ್ತ ಬೇಕಾಗಿದೆ ಎಂದು ಸುಮ್ಮನೆ ಹೇಳುತ್ತೀರಿ. ರೆಡ್‌ಕ್ರಾಸ್‌ನಲ್ಲಿ ರಕ್ತ ಸಂಗ್ರಹವಿಲ್ಲ. ಖಾಸಗಿಯಾಗಿ ತರಬೇಕಾದರೆ ದುಬಾರಿ ಬೆಲೆ ತೆರಬೇಕಾಗುತ್ತದೆ’ ಎಂದು ವೈದ್ಯರ ಜೊತೆಗೆ ರೋಗಿಯ ಸಂಬಂಧಿಕರು ವಾಗ್ವಾದ ಮಾಡುತ್ತಿದ್ದಾರೆ ಎಂದು ವೈದ್ಯರೊಬ್ಬರು ಹೇಳಿದರು.

‘ಈಚೆಗೆ ನಮ್ಮ ಸಂಬಂಧಿಕರೊಬ್ಬರಿಗೆ ತುರ್ತು ರಕ್ತ ಬೇಕಾಗುತ್ತಿತ್ತು. ಸುರಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಂಗ್ರಹವಿಲ್ಲ ಎಂದು ಹೇಳಿದರು. ಆಗ ಅವರರಿವರನ್ನು ಹಿಡಿದುಕೊಂಡು ಶಹಾಪುರದಿಂದ ರಕ್ತದ ವ್ಯವಸ್ಥೆ ಮಾಡಿಸಿಕೊಂಡು ರಕ್ತ ಏರಿಸಬೇಕಾಯಿತು. ರಕ್ತ ಸಿಗದಿದ್ದರೆ ಇಲ್ಲದಿದ್ದರೆ, ಜೀವಕ್ಕೆ ಅಪಾಯವಾಗುತ್ತಿತ್ತು’ ಎಂದು ಕಾಸಿಂಸಾಬ್‌ ಪಟೇಲ್‌ ಹೇಳಿದರು.

ಈ ಬಾರಿ ಬೇಸಿಗೆಯ ಬಿಸಿಲು ಹೆಚ್ಚಿದ್ದರಿಂದ ಮತ್ತು ಚುನಾವಣೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ರಕ್ತದಾನಕ್ಕೆ ಯಾರು ಮುಂದೆ ಬಂದಿಲ್ಲ. ಹೀಗಾಗಿ ರಕ್ತ ಸಂಗ್ರಹವಿಲ್ಲ ಎಂದು ವೈದ್ಯರು ಹೇಳುವ ಮಾತಾಗಿದೆ.

‘ಕಳೆದ ಮೂರ್ನಾಲ್ಕು ದಿನಗಳಿಂದ ರಕ್ತಕ್ಕಾಗಿ ಹುಟುಕಾಟ ನಡೆಸಿದ್ದೇವೆ. ಎಲ್ಲಿಯೂ ಸಿಗುತ್ತಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆ, ರಕ್ತನಿಧಿ ಕೇಂದ್ರಗಳಲ್ಲಿ ಜೀವಹನಿಗಾಗಿ ಹುಟುಕಾಟ ನಡೆದಿದೆ’ ಎಂದು ಯುವ ಮುಖಂಡ ಹಣಮಂತ ಬಂದಳ್ಳಿ ಹೇಳಿದರು.

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿರುವ ರೆಡ್‌ ಕ್ರಾಸ್‌ ರಕ್ತ ನಿಧಿ ಕೇಂದ್ರದಲ್ಲಿ ರಕ್ತ ಲಭ್ಯವಿಲ್ಲದ ಕುರಿತು ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ವೈದ್ಯಕೀಯ ಕಾಲೇಜಿನಲ್ಲಿ ರಕ್ತನಿಧಿ ಕೇಂದ್ರ ಸ್ಥಾಪನೆ ಮಾಡುವ ಸಾಧ್ಯತೆ ಇದೆ
–ಡಾ.ರಿಜ್ವಾನ, ಜಿಲ್ಲಾ ಶಸ್ತ್ರಚಿಕಿತ್ಸಕಿ
ಚುನಾವಣೆ ಇದ್ದ ಕಾರಣ ರೆಡ್‌ಕ್ರಾಸ್‌ ರಕ್ತನಿಧಿಯಲ್ಲಿ ಶಿಬಿರಗಳನ್ನು ಆಯೋಜನೆ ಮಾಡಲು ಸಾಧ್ಯವಾಗಿಲ್ಲ. ಅಲ್ಲದೇ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ರಕ್ತನಿಧಿ ಕೇಂದ್ರವೂ ಕಾರ್ಯನಿರ್ವಹಿಸುತ್ತಿಲ್ಲ.
- ಡಾ. ಶರಣಭೂಪಾಲರೆಡ್ಡಿ, ಅಧ್ಯಕ್ಷ ರೆಡ್‌ಕ್ರಾಸ್‌ ಸಂಸ್ಥೆ
ತುರ್ತು ರಕ್ತ ಬೇಕಾಗಿದ್ದವರು ಸರ್ಕಾರಿ ಆಸ್ಪತ್ರೆಯಲ್ಲಿ ಎಡತಾಕಿದರೆ ಇಲ್ಲ ಎನ್ನುವ ಉತ್ತರ ಬರುತ್ತದೆ. ಇದರಿಂದ ಖಾಸಗಿ ಆಸ್ಪತ್ರೆ ರಕ್ತ ನಿಧಿ ಕೇಂದ್ರಗಳಲ್ಲಿ ಕಾಡಿಬೇಡಿ ದುಬಾರಿ ಬೆಲೆಗೆ ಜೀವಹನಿ ಖರೀದಿಸಬೇಕಿದೆ.
- ಹಣಮಂತ ಬಂದಳ್ಳಿ, ಯುವ ಮುಖಂಡ
ಪಾಯಿಂಟ್‌ ರಕ್ತ ಇದೆ. ರಕ್ತದಾನ ಮಾಡಲು ವೈದ್ಯರು ಸೂಚಿಸಿದ್ದರಿಂದ ರೆಡ್‌ಕ್ರಾಸ್‌ ರಕ್ತನಿಧಿಗೆ ಬಂದಿದೆ. ಆದರೆ ಯಾರೂ ಇರಲಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗೆ ತೆರಳುವೆ
–ಮಲ್ಲಪ್ಪ ಚಿಂತನಹಳ್ಳಿ‌, ರಕ್ತ ನೀಡಲು ಬಂದವರು

14ರಂದು ವಿಶ್ವ ರಕ್ತದಾನ ದಿನಾಚರಣೆ

ಪ್ರತಿ ವರ್ಷ ಜೂನ್‌ 14ರಂದು ವಿಶ್ವ ರಕ್ತದಾನ ದಿನಾಚರಣೆ ಆಚರಿಸಲಾಗುತ್ತಿದೆ.  ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತದಾನ ಮಾಡುವುದು ಪ್ರತಿ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ರೋಗಿಗಳನ್ನು ಹಾಗೂ ಗಾಯಾಳುಗಳನ್ನು ಬದುಕಿಸಲು ಸಾಧ್ಯ ಎಂದು ವಿವಿಧ ಸಂಸ್ಥೆಗಳು ಜಾಗೃತಿ ಮೂಡಿಸುತ್ತಿದೆ.

ದಾನಿಗಳು ಒಮ್ಮೆ ರಕ್ತ ದಾನ ಮಾಡಿದರೆ ಮುಂದಿನ ಮೂರು ತಿಂಗಳವರೆಗೆ ದಾನ ಮಾಡಬಾರದು. ರಕ್ತದಾನ ಮಾಡುವುದರಿಂದ ದೇಹದಲ್ಲಿಹೊಸ ರಕ್ತ ಉತ್ಪತ್ತಿ ಆಗುತ್ತದೆ. ಅಲ್ಲದೆ ಉತ್ತಮ ಆರೋಗ್ಯ ಹೊಂದಬಹುದು. ಇದರಿಂದ ದಾನಿಯ ಕಾರ್ಯತತ್ಪರತೆ ಹಾಗೂ ಜ್ಞಾಪಕಶಕ್ತಿ ಹೆಚ್ಚುತ್ತದೆ. ದೇಹದಲ್ಲಿಕೊಬ್ಬಿನ ಅಂಶ ಕಡಿಮೆ ಮಾಡುವ ಮೂಲಕ ಹೃದಯಾಘಾತ ಆಗುವುದನ್ನು ಶೇ 80ರಷ್ಟು ಕಡಿಮೆ ಮಾಡುತ್ತದೆ. ರಕ್ತದ ಒತ್ತಡ ಮಧುಮೇಹದಂತಹ ರೋಗಗಳನ್ನು ತಡೆಯಲು ಕೂಡ ರಕ್ತದಾನ ಸಹಕಾರಿ. ಅಲ್ಲದೆ ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ನೋವು ಆಗುವುದಿಲ್ಲ.

ಕೇವಲ 20 ನಿಮಿಷ ವಿಶ್ರಾಂತಿ ಪಡೆದರೆ ಸಾಕು. 48 ಗಂಟೆಗಳಲ್ಲಿ ಅಷ್ಟೇ ಪ್ರಮಾಣದ ರಕ್ತ ಉತ್ಪತ್ತಿಯಾಗುತ್ತದೆ ಹಾಗೂ ಒಂದೆಡರು ವಾರಗಳಲ್ಲಿ ರಕ್ತದಲ್ಲಿನ ಎಲ್ಲ ಅಗತ್ಯ ಅಂಶಗಳು ಸೇರ್ಪಡೆಯಾಗುತ್ತವೆ ಎನ್ನುತ್ತಾರೆ ವೈದ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT