ಸೋಮವಾರ, ಮೇ 10, 2021
19 °C
ವಿಶ್ವ ಕ್ಷಯರೋಗ ಮುಕ್ತ ದಿನಾಚರಣೆಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಚಾಲನೆ

ಚಿಕಿತ್ಸೆ ಪಡೆದು, ಕ್ಷಯ ರೋಗ ಓಡಿಸಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಸಕಾಲದಲ್ಲಿ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದರೆ ಯಾವುದೇ ಕಾಯಿಲೆ ದೂರಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಹೇಳಿದರು. 

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಕ್ಷಯರೋಗ ಮುಕ್ತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಎದೆ ನೋವು, ತೂಕ ಕಡಿಮೆಯಾಗುವುದು, ಕಫದಲ್ಲಿ ರಕ್ತ ಬೀಳುವುದು, ಹಲವಾರು ದಿನಗಳಿಂದ ಕೆಮ್ಮು, ಜ್ವರದ ಬಾಧೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ನಿಯಮಿತ ಅವಧಿಯವರೆಗೆ ಚಿಕಿತ್ಸೆ ನೀಡಿದರೆ ಕ್ಷಯರೋಗದಿಂದ ಸಂಪೂರ್ಣ ಗುಣಪಡಿಸಬಹುದು ಎಂದರು. 

ಕ್ಷಯರೋಗ ಮುಕ್ತ ಮಾಡಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿರುವ ಕಾರಣ ಜಿಲ್ಲೆ 27ನೇ ಸ್ಥಾನದಿಂದ 19ನೇ ಸ್ಥಾನಕ್ಕೆ ಬರಲು ಕಾರಣವಾಗಿದೆ. ಅಲ್ಲದೆ ಕೊರೊನಾ ಲಸಿಕೆ ನೀಡಿಕೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಶ್ರಮ ಮೆಚ್ಚುವಂತದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಕ್ಷಯರೋಗ ನಿರ್ಮೂಲನೆಗೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಇತರೆ ಸ್ಥಳಗಳಲ್ಲಿ ಜಾಗೃತಿ ಅವಶ್ಯಕತೆ ಇದ್ದು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಕ್ಷಯರೋಗ ನಿರ್ಮೂಲನೆ ಶ್ರಮಿಸಬೇಕೆಂದು ಹೇಳಿದರು.

ಇದೇ ವೇಳೆ ಜಿಲ್ಲೆಯಲ್ಲಿ ಕ್ಷಯರೋಗ ಬಗ್ಗೆ ಅತ್ಯುತ್ತಮ ಸೇವೆ ಸಲ್ಲಿಸಿದ ಆರೋಗ್ಯ ಸಿಬ್ಬಂದಿಗೆ, ಕಿರಿಯ ಆರೋಗ್ಯ ಸಹಾಯಕರಿಗೆ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಕ್ಷಯರೋಗ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಅರಿವು ಜಾಥಾ: ಇದ್ದಕ್ಕೂ ಮುನ್ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ ಕ್ಷಯರೋಗ ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಚಾಲನೆ ನೀಡಿದರು.

ಕ್ಷಯರೋಗ ಗುಣಪಡಿಸಬಹುದಾದ ಕಾಯಿಲೆ, ಧೂಮಪಾನದಿಂದ ಆರೋಗ್ಯಕ್ಕೆ ಹಾನಿಕಾರಕ, ಕೆಮ್ಮುವಾಗ ಬಾಯಿಗೆ ಕರವಸ್ತ್ರ ಅಡ್ಡವಿಟ್ಟುಕೊಳ್ಳಬೇಕು. ಕ್ಷಯ ರೋಗ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತ, ಇವೇ ಮೊದಲಾದ ಭಿತ್ತಿಫಲಕಗಳನ್ನು ಹಿಡಿದು ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದರು. ಜಾಥಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಿಂದ ನಗರಸಭೆ ರಸ್ತೆಯ ಮೂಲಕ ಗಾಂಧಿ ವೃತ್ತದವರೆಗೂ ತಲುಪಿತು.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಇಂದುಮತಿ ಕಾಮಶಟ್ಟಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಲಕ್ಷ್ಮೀಕಾಂತ್, ಜಿಲ್ಲಾ ಕುಷ್ಠರೋಗ ನಿರ್ಮೂನಾಧಿಕಾರಿ ಡಾ.ಭಗವಂತ ಅನ್ವರ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ನಾಗರಾಜ ಬಿ.ಪಾಟೀಲ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮುಬಷೀರ್‌ ಸಾಜೀದ್, ಡಾ.ವಿನಿತಾ, ಐಎಂಎ ಅಧ್ಯಕ್ಷ ಡಾ.ಸಿ.ಎಂ.ಪಾಟೀಲ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು