ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕೀಯದಲ್ಲಿ ಅಂಬೆಗಾಲು, ನನ್ನ ಮುನ್ನಡೆಸಿ’

ಯಾದಗಿರಿ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅಭ್ಯರ್ಥಿ ಕುಮಾರ ನಾಯಕ ಮನವಿ
Published 27 ಮಾರ್ಚ್ 2024, 16:25 IST
Last Updated 27 ಮಾರ್ಚ್ 2024, 16:25 IST
ಅಕ್ಷರ ಗಾತ್ರ

ಯಾದಗಿರಿ: ‘ನನಗೆ ಸಾರ್ವಜನಿಕ ಜೀವನದಲ್ಲಿ 35 ವರ್ಷಗಳ ಅನುಭವವಿದೆ. ಆದರೆ, ರಾಜಕೀಯದಲ್ಲಿ ಈಗ ಅಂಬೆಗಾಲು ಇಡುತ್ತಿದ್ದೇನೆ. ಹೀಗಾಗಿ ಇಲ್ಲಿಯ ಕಾರ್ಯಕರ್ತರು ನನ್ನನ್ನು ಮುನ್ನಡೆಸಬೇಕು’ ಎಂದು ರಾಯಚೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಿ.ಕುಮಾರ ನಾಯಕ ಮನವಿ ಮಾಡಿದರು.

ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಗಳಿದ್ದರೂ ಪ‍ಕ್ಷ ನನ್ನನ್ನು ಗುರುತಿಸಿದೆ. ಮೂರು ವರ್ಷಗಳ ಕಾಲ ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಮೈಸೂರು ಜಿಲ್ಲೆಯಲ್ಲಿ ಮೂರು ವರ್ಷ, ಅಲ್ಲದೇ ಬೇರೆ ಕಡೆ 15–20 ವರ್ಷ ಕೆಲಸ ಮಾಡಿದ್ದೇನೆ. 2023ರ ಸೆಪ್ಟೆಂಬರ್‌ ತಿಂಗಳಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದೇನೆ. ಜನರ ಸೇವೆ ಸಲ್ಲಿಸಲು ರಾಜಕೀಯಕ್ಕೆ ಧುಮುಕಿದ್ದೇನೆ’ ಎಂದು ತಿಳಿಸಿದರು.

‘ಕಾಂಗ್ರೆಸ್‌ ಪಕ್ಷವು ದೇಶವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದ್ದು, ಬಿಜೆಪಿ ವಿಭಜಿಸುವ ಕಾರ್ಯ ಮಾಡುತ್ತಿದೆ’ ಎಂದು ಅವರು ಟೀಕಿಸಿದರು.

‘ಐದು ವರ್ಷಗಳ ಕಾಲ ಒಬ್ಬರಿಗೆ ಅಧಿಕಾರ ಕೊಡಬೇಕಾದರೆ ಮತದಾರರು ತಮ್ಮ ಹಕ್ಕುಗಳ ಬಗ್ಗೆ ತುಂಬಾ ಜಾಗರೂಕರಾಗಬೇಕಿದೆ. ಜಿಲ್ಲೆಯಲ್ಲಿ ಕೃಷಿ, ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಅಲ್ಲದೇ, ಕೈಗಾರಿಕಾ ವಲಯ ನಿರ್ಮಾಣ ಮಾಡಲಾಗುವುದು. ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

‌ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ‘ರೈತರು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳ ಧ್ವನಿಯಾಗಿ ಕಾಂಗ್ರೆಸ್‌ ಸರ್ಕಾರ ಕೆಲಸ ಮಾಡುತ್ತಿದೆ. ಆದರೆ, ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ ಕೇವಲ ಭಾಷಣ ಮಾಡಿದೆ. ಜೊತೆಗೆ ಜಾತಿ, ಧರ್ಮಗಳ ನಡುವೆ ಬಿರುಕು ಉಂಟು ಮಾಡಿದೆ’ ಎಂದು ಟೀಕಿಸಿದರು.

‘ಬಿಜೆಪಿಯವರು ಮಾತ್ರ ರಾಮಮಂದಿರ ಕಟ್ಟಿಲ್ಲ. ನಾವೂ ಕಟ್ಟಿದ್ದೇವೆ. ಆದರೆ, ಕಾಂಗ್ರೆಸ್‌ ಉದ್ದೇಶ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಬೇಕು ಎನ್ನುವುದಾಗಿದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ. ಸಹಕಾರ ಸಂಘದಲ್ಲಿ ಬಡ್ಡಿ ಮನ್ನಾ ಮಾಡಲಾಗಿದೆ’ ಎಂದರು.

‘ಜಿಲ್ಲೆಯಿಂದ ಇಬ್ಬರು ಸಂಸದರನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿದೆ. ಹೀಗಾಗಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರು ಮಾತನಾಡಿ, ‘ಬಿಜೆಪಿಯವರು ಬಂದರೆ ಉಳಿಗಾಲವಿಲ್ಲ. ಸಂವಿಧಾನ ಬದಲಾವಣೆ ಮಾತನ್ನಾಡಿದ್ದಾರೆ. ಮುಂದಿನ ಬಾರಿ ಚುನಾವಣೆ ಇರುವುದಿಲ್ಲ. ಇಂಥ ವಾತಾವರಣವನ್ನು ಬಿಜೆಪಿಯವರು ತಂದಿಡಲಿದ್ದಾರೆ.’ ಎಂದು ಎಚ್ಚರಿಸಿದರು.

‘ಯಾದಗಿರಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಬೇಕು’ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸರೆಡ್ಡಿ ಅನಪುರ ಮಾತನಾಡಿ, ‘ರಾಜ್ಯದಲ್ಲಿ ಎಲ್ಲ ವರ್ಗದವರಿಗೆ ಕಾಂಗ್ರೆಸ್‌ ಯೋಜನೆಗಳು ತಲುಪಿವೆ. ಬಿಜೆಪಿ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ. ಕಪ್ಪು ಹಣ ವಾಪಸ್‌ ಬಂದಿಲ್ಲ. ರಾಜ್ಯದಲ್ಲಿ ಬರಗಾಲವಿದ್ದರೂ ನಯಾಪೈಸೆ ಕೇಂದ್ರದಿಂದ ಬಿಡುಗಡೆ ಮಾಡಿಲ್ಲ’ ಎಂದು ದೂರಿದರು.

ಮುಖಂಡರಾದ ಮರಿಗೌಡ ಪಾಟೀಲ ಹುಲಕಲ್‌, ಲಾಯಕ್‌ ಬಾದಲ್ ಹುಸೇನ್‌, ನೀಲಕಂಠ ಬಡಿಗೇರ ಮಾತನಾಡಿದರು.

ಇದೇ ವೇಳೆ ನಗರಸಭೆಯ ಕಾಂಗ್ರೆಸ್‌ ಸದಸ್ಯರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಸನ್ಮಾನಿಸಿದರು.

ಯಾದಗಿರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುದರ್ಶನ ನಾಯಕ ಸ್ವಾಗತಿಸಿದರು. ಕಾಂಗ್ರೆಸ್‌ ವಕ್ತಾರ ಸ್ಯಾಂಸನ್‌ ಮಾಳಿಕೇರಿ ನಿರೂಪಿಸಿದರು. ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಮರೆಪ್ಪ ಬಿಳ್ಹಾರ ವಂದಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕ ಭೀಮಣ್ಣ ಮೇಟಿ, ಮುಖಂಡರಾದ ಮಲ್ಲಣ್ಣ ದಾಸನಕೇರಿ, ರಾಘವೇಂದ್ರ ಮಾನಸಗಲ್‌, ಎ.ಸಿ.ಕಾಡ್ಲೂರ್‌, ಶ್ರೇಣಿಕಕುಮಾರ ದೋಖಾ, ಮಂಜುಳಾ ಗೂಳಿ, ಶರಣಪ್ಪ ಸದಲಾಪುರ, ಚಿದಾನಂದಪ್ಪ ಕಾಳೆಬೆಳೆಗುಂದಿ, ವಿನಾಯಕ ಮಾಲಿಪಾಟೀಲ, ಹೊನ್ನೇಶ ದೊಡ್ಡಮನಿ, ವಿನೋದಗೌಡ ಪಾಟೀಲ, ಬಾಷುಮಿಯಾ ವಡಗೇರಾ ಸೇರಿದಂತೆ ಮುಂಚೂಣಿ ಘಟಕದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಕಾಂಗ್ರೆಸ್‌ ಅಭಿಮಾನಿಗಳು ಭಾಗವಹಿಸಿದ್ದರು.

ಯಾದಗಿರಿ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಿ.ಕುಮಾರ ನಾಯಕ ಮಾತನಾಡಿದರು
ಯಾದಗಿರಿ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಿ.ಕುಮಾರ ನಾಯಕ ಮಾತನಾಡಿದರು
ಯಾದಗಿರಿ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು
ಯಾದಗಿರಿ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT