ಸೋಮವಾರ, ನವೆಂಬರ್ 29, 2021
20 °C

ಟಗರಿನ ಕಾಳಗ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಸರ್ಕಾರ ಟಗರಿನ ಕಾಳಗ ನಿಷೇಧ ಮಾಡಿದ್ದರೂ ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಈಚೆಗೆ ಆಯೋಜನೆ ಮಾಡಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

’ಆಯೋಜಕ ಬಸವರಾಜ ಹಣಮಂತ್ರಾಯ ಪೂಜಾರಿ, ಭೀಮಣ್ಣ ಬಸಪ್ಪ ದಂಡಗೋಳ ವಿರುದ್ಧ ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿ ಕಲಂ 11 ಪ್ರಾಣಿ ಹಿಂಸೆ ತಡೆ ಕಾಯ್ದೆ -1960 ರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

‘ಸೆ.26ರ ಸಂಜೆ 5 ಗಂಟೆಯಿಂದ ಸೆ.27ರ ಬೆಳಗಿನ ಜಾವ 2 ಗಂಟೆಯವರೆಗೆ ದಿ. ತಿಮ್ಮಮ್ಮ ಗೌಡಶಾನಿ ಅಭಿಮಾನಿ ಬಳಗ ಮತ್ತು ಆರ್‌ಟಿಜೆ ಗ್ರೂಪ್ಸ್ ಕೊಡೇಕಲ್ಲ ವತಿಯಿಂದ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಮುಕ್ತ ಟಗರು ಕಾಳಗ ನಡೆಸಿದ್ದಾರೆ. ಸರ್ಕಾರವು ಪ್ರಾಣಿ ಹಿಂಸೆಯನ್ನು ನಿಷೇಧಿಸಿದ್ದರೂ ಟಗರುಗಳನ್ನು ಒಂದಕ್ಕೊಂದು ಡಿಕ್ಕಿ ಹೊಡೆಸಿ ಪ್ರಾಣಿ ಹಿಂಸೆಯಾಗುವಂತಹ ಟಗರಿನ ಕಾಳಗ ನಡೆಸಿರುವ ಅರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳ ಅಪಹರಣ ಶಂಕೆ: ಮಾನಸಿಕ ಅಸ್ವಸ್ಥ ವಶಕ್ಕೆ

ಯಾದಗಿರಿ: ನಗರದ ಬಸ್ ನಿಲ್ದಾಣದ ಹತ್ತಿರ  ವ್ಯಕ್ತಿಯೊಬ್ಬ ಮಕ್ಕಳನ್ನು ಅಪಹರಿಸಿಕೊಂಡು ಹೋಗಲು ಬಂದಿದ್ದಾನೆ ಎಂದು ಮಾಹಿತಿ ಬಂದ ಮೇರೆಗೆ ಅನುಮಾನಾಸ್ಪದ ವ್ಯಕ್ತಿಯನ್ನು ಪೊಲೀಸರು ಬಸ್ ನಿಲ್ದಾಣದ ಹತ್ತಿರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ತೋನಸಿನಳ್ಳಿ ಗ್ರಾಮದ ಸಾಹೇಬಗೌಡ ಮಾನಸಿಕ ಅಸ್ವಸ್ಥ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ತಾಯಿ ಕಾಯಿಲೆಯಿಂದ ಒಂದು ವರ್ಷದ ಹಿಂದೆ ಮೃತಪಟ್ಟಿದ್ದು, ಔಷಧಿ ಉಪಚಾರಕ್ಕಾಗಿ ಸುಮಾರು ₹15 ಲಕ್ಷ ಹಣ ಖರ್ಚು ಆಗಿರುತ್ತದೆ. ಅದನ್ನು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕವಾಗಿ ಅಸ್ವಸ್ಥಗೊಂಡು ಊರು ಬಿಟ್ಟು ಸುಮಾರು 20 ದಿನಗಳಾಗಿವೆ. ಊರು ಬಿಟ್ಟನಂತರ 8 ದಿನ ನಾಲವಾರ ಗ್ರಾಮದ ಕೋರಿ ಸಿದ್ದೇಶ್ವರ ಮಠ, ನಂತರ 12 ದಿನ ಅಬ್ಬೆತುಮಕೂರು ಮಠದಲ್ಲಿ ಇದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಪೊಲೀಸರು ಸಾಹೇಬಗೌಡ ಅಕ್ಕ ಸಿದ್ದಮ್ಮನನ್ನು ಸಂಪರ್ಕಿಸಿ ಮಾಹಿತಿ ನೀಡಿದಾಗ, ಅವರು ಬಂದು ತಮ್ಮ ತಮ್ಮನನ್ನು ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ಅಲ್ಲದೇ ಈ ವ್ಯಕ್ತಿಯಿಂದ ಯಾರಿಗಾದರೂ ತೊಂದರೆಯಾಗಿ ದೂರು ನೀಡಿದ್ದಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು