ಬುಧವಾರ, ಏಪ್ರಿಲ್ 14, 2021
31 °C
‘ಇನ್‍ಮುಂದೆ ನಮ್ಮ ನಿಮ್ಮ ನಡೆ ತೋಟಗಾರಿಕೆ ಕಡೆ’ ಮಂಥನ ಕಾರ್ಯಕ್ರಮ

ರೈತರು ಆರ್ಥಿಕ ಸಬಲತೆಗೆ ತೋಟಗಾರಿಕೆ ಮಾಡಲು ಕುಲಪತಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ತಾಲ್ಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ‘ಇನ್‍ಮುಂದೆ ನಮ್ಮ ನಿಮ್ಮ ನಡೆ ತೋಟಗಾರಿಕೆ ಕಡೆ– ಮಂಥನ ಕಾರ್ಯಕ್ರಮ’ ಕುರಿತು ರೈತರಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮುಖ್ಯಸ್ಥ ಡಾ.ರೇವಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಬೆಳೆಗಳಿಗೆ ಹೋಲಿಸಿದರೆ ತೋಟಗಾರಿಕೆಯಲ್ಲಿ 150ಕ್ಕಿಂತ ಹೆಚ್ಚು (ಹಣ್ಣು, ತರಕಾರಿ, ಹೂ, ಸಾಂಬಾರು, ತೋಟಪಟ್ಟಿ) ಬೆಳೆಗಳಿವೆ. ರೈತರು ತಮ್ಮ ವಿವಿಧ ಪರಿಸ್ಥಿತಿಗಳಿಗೆ ತಕ್ಕಂತೆ ಜಮೀನು, ಮಣ್ಣು ಮತ್ತು ನೀರಿನ ಲಭ್ಯತೆ ಪ್ರಮಾಣ, ವಿವಿಧ ತಾಲ್ಲೂಕುಗಳಲ್ಲಿರುವ ಹವಾಮಾನ, ರೈತನ ಮನೆಯಲ್ಲಿ ದುಡಿಯುವವರ ಸಂಖ್ಯೆ, ರೈತನ ಆರ್ಥಿಕತೆ ಹೀಗೆ ಹಲವಾರು ಬೇರೆ ಬೇರೆ ಪರಿಸ್ಥಿತಿಗಳಿಗೆ ಸೂಕ್ತವಾದ ತೋಟಗಾರಿಕೆ ಬೆಳೆಗಳಿವೆ. ರೈತರು ತಮಗೆ ಹೊಂದುವ ತೋಟಗಾರಿಕೆ ಬೆಳೆಯನ್ನು ಆಯ್ಕೆಮಾಡಿಕೊಳ್ಳಲು ವಿಫುಲವಾದ ಅವಕಾಶಗಳಿವೆ ಎಂದು ಹೇಳಿ ಇನ್‍ಮುಂದೆ ನಮ್ಮ ನಿಮ್ಮ ನಡೆ ತೋಟಗಾರಿಕೆ ಕಡೆ ಇರಲಿ’ ಎಂದು ಹೇಳಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಕೆ.ಎಂ.ಇಂದಿರೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಆರ್ಥಿಕವಾಗಿ ಸಬಲರಾಗಬೇಕಾದರೆ ತೋಟಗಾರಿಕೆ ಮಾಡುವುದು ಅತಿ ಅಗತ್ಯ. ಯಾದಗಿರಿಯಲ್ಲಿ ಸಾಕಷ್ಟು ನೀರಿನ ಸೌಲಭ್ಯವಿದ್ದು, ತೋಟಗಾರಿಕೆಗೆ ಬಹಳಷ್ಟು ಅವಕಾಶಗಳಿವೆ ಎಂದರು.

‘ಜಿಲ್ಲೆಗೊಂದು ಬೆಳೆ’ ಎನ್ನುವ ಕೇಂದ್ರ ಸರ್ಕಾರದ ಯೋಜನೆ ಪ್ರಕಾರ ‘ಶೇಂಗಾ ಬೆಳೆ’ ಜಿಲ್ಲೆಯ ಬೆಳೆಯೆಂದು ಈಗಾಗಲೇ ಘೋಷಣೆಯಾಗಿದೆ. ಈ ಮುಂಚೆ ಗೋಡಂಬಿ ಬೆಳೆ ಕರಾವಳಿ ಪ್ರದೇಶಕ್ಕೆ ಮಾತ್ರ ಸೂಕ್ತ ಎನ್ನುವ ಕಾಲ ಈಗ ಹೋಗಿದೆ. ಈ ಬೆಳೆಯು ಒಣ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಬೀದರ್‌ನಲ್ಲಿ ಉತ್ತಮವಾಗಿ ಬರುತ್ತಿದೆ. ಈಗಾಗಲೇ ಜಿಲ್ಲೆಯಲ್ಲೂ ಗೋಡಂಬಿ ಬೆಳೆಯುತ್ತಿದ್ದು, ಅದರ ಪ್ರದೇಶ ಹೆಚ್ಚಿಗೆ ಆಗಬೇಕಾಗಿದೆ ಎಂದರು.

ವಿವಿಯ ಸಂಶೋಧನಾ ನಿರ್ದೇಶಕ ಡಾ.ಡಿ.ಆರ್.ಪಾಟೀಲ ಮಾತನಾಡಿ, ತಮ್ಮಲ್ಲಿ 10 ಎಕರೆ ಜಮೀನಿದ್ದರೆ ಅದರಲ್ಲಿ 3-4 ಎಕರೆ ತೋಟಗಾರಿಕೆ ಬೆಳೆಗಳ ಜೊತೆಗೆ ಸಮಗ್ರ ಬೇಸಾಯ ಮಾಡಬೇಕೆಂದರು.

ಉಪಕೃಷಿ ನಿರ್ದೇಶಕ ಡಾ. ಬಾಲರಾಜ ಮಾತನಾಡಿ, ರೈತರ ನಡೆ ತೋಟಗಾರಿಕೆ ಕಡೆ ಜೊತೆಗೆ ರೈತರ ನಡೆ ನಮ್ಮ ಭೂಮಿಕಡೆ ಎಂದರೆ ತಪ್ಪಾಗಲಾರದು. ಆತ್ಮ ಯೋಜನೆಯಿಂದ ರೈತರಿಗೆ ಅನೂಕೂಲವಾಗುವಂಥ ತಾಂತ್ರಿಕತೆಗಳ ಸಂಶೋಧನೆಗೆ ಪ್ರಾಮುಖ್ಯತೆ ನೀಡಬೇಕು ಎಂದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅಜೀಮೋದ್ದೀನ್ ಇಲಾಖೆಯ ಯೋಜನೆಗಳ ಬಗ್ಗೆ ವಿವರಿಸಿದರು.

ವಿಸ್ತರಣಾ ನಿರ್ದೇಶಕ ಡಾ. ವೈ.ಕೆ.ಕೋಟಿಕಲ್ ಅಧ್ಯಕ್ಷತೆ ವಹಿಸಿದ್ದರು.

ಸಹಾಯಕ ಪ್ರಾಧ್ಯಾಪಕ ಡಾ.ಪ್ರಶಾಂತ ನಿರೂಪಿಸಿದರು. ಶರಣಪ್ಪ ಹೊಸಮನಿ ಯಡ್ಡಳ್ಳಿ ವಂದಿಸಿದರು.

ಕಾರ್ಯಕ್ರಮದಲ್ಲಿ ಡಾ.ಶರಣಪ್ಪ ಗಡೇದ್, ಭೋಜನಗೌಡ, ಸೋಮನಗೌಡ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ರವೀಂದ್ರ, ಸುಂದರೇಶ, ಪವನಕುಮಾರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು