ಯಾದಗಿರಿ: ಚಳಿ,ಗಾಳಿ, ಬಿಸಿಲು, ಮಳೆ ಯಾವುದನ್ನೂ ಲೆಕ್ಕಿಸದೇ ದಿನನಿತ್ಯ ಬೆಳಗಿನ ಜಾವ ನಗರದ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರು ಸ್ವಚ್ಛತಾ ರೂವಾರಿಗಳು ಎಂದು ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತರೆಡ್ಡಿ ಹೇಳಿದರು.
ನಗರಸಭೆ ಕಚೇರಿಯಲ್ಲಿ ಸೋಮವಾರ ನಡೆದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲಿ ಸ್ವಚ್ಛತೆ ಇರುತ್ತದೋ ಅಲ್ಲಿ ಭಗವಂತ ನೆಲೆಸಿರುತ್ತಾನೆ ಎಂಬುದು ನಂಬಿಕೆಯಾಗಿದೆ. ನಾಗರಿಕರ ಆರೋಗ್ಯ ಮತ್ತು ಸ್ವಚ್ಛತೆಗೆ ಗಮನ ಕೊಟ್ಟು ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದರು.
ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಜನಿಕಾಂತ ಮಾತನಾಡಿ, ಪೌರಕಾರ್ಮಿಕರು ದಿನನಿತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ನಗರದ ನಾಗರಿಕರ ಆರೋಗ್ಯ ಕಾಪಾಡುವ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಸ್ವಂತ ಮನೆಯನ್ನು ಸ್ವಚ್ಛ ಮಾಡಲು ಕುಟುಂಬದ ಸದಸ್ಯರು ಒದ್ದಾಡುವ ಇಂಥ ದಿನಗಳಲ್ಲಿ ಇಡೀ ಊರಿನ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರ ಕಾರ್ಯ ಸದಾ ಸ್ಮರಣೀಯ ಎಂದರು.
ಸರ್ಕಾರದ ವತಿಯಿಂದ ಸೌಲಭ್ಯಗಳನ್ನು ಕಾರ್ಮಿಕರಿಗೆ ನೀಡಲಾಗಿದೆ. ಬಹುತೇಕ ಬೇಡಿಕೆಗಳನ್ನು ಸರ್ಕಾರ ಮಾಡಿಕೊಟ್ಟಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಚೇರಿ ಅಧೀಕ್ಷಕ ಅಶ್ವಿನಿ, ಕಂದಾಯ ಅಧಿಕಾರಿ ಜಗದೇವಿ, ಹಿರಿಯ ಆರೋಗ್ಯ ನಿರೀಕ್ಷಕ ಸಲೀಮೋದ್ದಿನ್, ಕಿರಿಯ ಆರೋಗ್ಯ ನಿರೀಕ್ಷಕಿ ಶರಣಮ್ಮ, ಕರ್ನಾಟಕ ರಾಜ್ಯ ಪೌರ ನೌಕರರ ಸೇವಾ ಸಂಘದ ಅಧ್ಯಕ್ಷ ರವಿ ದಾಸನ್, ಉಪಾಧ್ಯಕ್ಷೆ ಬಸಲಿಂಗಮ್ಮ ಸೇರಿದಂತೆ ಪೌರ ಕಾರ್ಮಿಕರು ಭಾಗವಹಿಸಿದ್ದರು.