ಮಂಗಳವಾರ, ಅಕ್ಟೋಬರ್ 27, 2020
18 °C
ಅವೈಜ್ಞಾನಿಕ ಒಳಚರಂಡಿಗಳಿಂದ ರಸ್ತೆಗೆ ನುಗ್ಗಿದ ಕೊಳಚೆ ನೀರು

ರಾಂಪುರ; ನೈರ್ಮಲ್ಯ ಮರೀಚಿಕೆ

ಮಲ್ಲಿಕಾರ್ಜುನ.ಬಿ.ಅರಿಕೇರಕರ್ Updated:

ಅಕ್ಷರ ಗಾತ್ರ : | |

Prajavani

ಸೈದಾಪುರ: ಸಮೀಪದ ರಾಂಪುರ ಗ್ರಾಮದ ಮುಖ್ಯರಸ್ತೆಯಲ್ಲಿರುವ ಒಳಚರಂಡಿಗಳ ಕೊಳಚೆ ನೀರು ರಸ್ತೆ ಮೇಲೆ ಬಂದು ನಿಲ್ಲುತ್ತಿದ್ದು, ದುರ್ನಾತದಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಸೈದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಾಂಪೂರ ಗ್ರಾಮ ಹಲವು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ನೈರ್ಮಲ್ಯ ಸಮಸ್ಯೆಯಿಂದಾಗಿ ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳ ಭೀತಿ ಅನುಭವಿಸುವಂತಾಗಿದೆ.

ಒಳ ಚರಂಡಿಗಳಲ್ಲಿ ಕಸ- ಕಡ್ಡಿ, ಮಣ್ಣು ಇತ್ಯಾದಿ ನಿರುಪಯುಕ್ತ ವಸ್ತುಗಳೆಲ್ಲವು ತುಂಬಿಕೊಂಡು ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ರಸ್ತೆಗಳ ಮೇಲೆ ಬಂದು ನಿಲ್ಲುತ್ತಿದೆ. ಇದರಿಂದಾಗಿ ರಸ್ತೆಗಳು ಕೆಸರು ಗದ್ದೆಗಳಾಗಿವೆ. ನಿಯಮಿತವಾಗಿ ಚರಂಡಿಯ ಹೂಳೆತ್ತದೆ ಇರುವುದು ಹಾಗೂ ನೀರು ಹರಿಯಲು ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ತಗ್ಗು ಪ್ರದೇಶಗಳಲ್ಲಿ ಮಳೆ ನೀರಿನೊಂದಿಗೆ ಚರಂಡಿ ನೀರು ಸಂಗ್ರಹಗೊಳ್ಳುತ್ತಿರುವುದರಿಂದ ಗ್ರಾಮದಲ್ಲಿ ನೈರ್ಮಲ್ಯ ಮರೀಚಿಕೆಯಾಗಿ ಉಳಿದಿದೆ. ಇದರಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು, ಜನರು ಪರದಾಡುವಂತಾಗಿದೆ.

ಕೊಳಚೆ ತುಂಬಿದ ರಸ್ತೆಯಲ್ಲಿ ಸಂಚಾರ ಮಾಡುವುದು ಕಷ್ಟಕರವಾಗಿದೆ. ರಸ್ತೆಯ ಮೇಲೆಯೆ ನೀರು ಹರಿದುಕೊಂಡು ಹೋಗುತ್ತಿರುವುದರಿಂದ ವಾಹನ ಸವಾರರಿಗೆ ತಗ್ಗು ಗುಂಡಿಗಳು ಅರಿವಿಗೆ ಬರದೆ ಆಯತಪ್ಪಿ ಬಿದ್ದ ಘಟನೆಗಳು ನಡೆದಿವೆ.

ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಸ್ಪಂದನೆ ದೊರೆತಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಚರಂಡಿ ವ್ಯವಸ್ಥೆ ಸರಿಪಡಿಸಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.