ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | 'ಮಹಿಳೆಗೆ ಸಮಾನ ಹಕ್ಕು ಸಿಗಲು ಅವಕಾಶ ನೀಡಿ'

ಮಹಿಳಾ ಅಧಿಕಾರಿಗಳೇ ಜಿಲ್ಲೆಗೆ ಕೀರ್ತಿ ಹಾಗೂ ಸಮಾಜದಲ್ಲಿ ಸ್ತ್ರೀ ಸಮಾನತೆಗೆ ಸಾಕ್ಷಿ: ಶಾಸಕ ತುನ್ನೂರು
Published 12 ಮಾರ್ಚ್ 2024, 7:16 IST
Last Updated 12 ಮಾರ್ಚ್ 2024, 7:16 IST
ಅಕ್ಷರ ಗಾತ್ರ

ಯಾದಗಿರಿ: ಮಹಿಳೆ ನಮ್ಮ ತಾಯಿ, ಸಹೋದರಿ, ಪತ್ನಿ, ಸಹೋದ್ಯೋಗಿ ಯಾರೇ ಆಗಿರಲಿ ಅವರಿಗೆ ಸಮಾನ ಹಕ್ಕು ಸಿಗಲು ಎಲ್ಲರೂ ಕೊಡುಗೆ ನೀಡಬೇಕು ಮತ್ತು ಅದಕ್ಕೆ ನಾವೇ ಪ್ರತ್ಯಕ್ಷ ಉದಾಹರಣೆ ಆಗಬೇಕು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಅಂಗವಾಗಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಮಹಿಳೆಯರನ್ನು ದೇವತೆಯ ರೂಪವೆಂದು ಪರಿಗಣಿಸಲಾಗುತ್ತದೆ. ಮಹಿಳೆಯರಿಗೆ ಗೌರವ ನೀಡಬೇಕು. ಅವರ ಆಲೋಚನೆಗಳಿಗೆ ಗಮನ ಕೊಡಬೇಕು. ಜಿಲ್ಲೆಯಲ್ಲಿ ಪ್ರಮುಖ ಹುದ್ದೆ ಸೇರಿದಂತೆ ಮಹಿಳಾ ಅಧಿಕಾರಿಗಳ ಕೈಗಳಲ್ಲಿಯೇ ಜಿಲ್ಲಾಡಳಿತ ಇರುವುದು ನಮ್ಮ ಜಿಲ್ಲೆಗೆ ಕೀರ್ತಿ ಹಾಗೂ ಸಮಾಜದಲ್ಲಿ ಸ್ತ್ರೀ ಸಮಾನತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಇಂದಿನ ಯುಗದಲ್ಲಿ ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಪುರುಷರಿಗಿಂತ ಹಿಂದೆ ಬಿದ್ದಿಲ್ಲ ಎಂದರೆ ಅವರಿಗೇಕೆ ಹಲವು ತಾರತಮ್ಯ, ಇಂದಿನಿಂದ ನಾವೆಲ್ಲರೂ ಮಹಿಳೆಯರನ್ನು ಗೌರವಿಸಿ ಅವರ ಪ್ರಗತಿಗೆ ಕೈಜೋಡಿಸೋಣ ಎಂದು ಅವರು ನುಡಿದರು.

ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಮಾತನಾಡಿ, ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ, ಅವರ ಶಿಕ್ಷಣದ ಪ್ರಾಮುಖ್ಯತೆ, ಅವರ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಮಾಜದಲ್ಲಿ ಅವರ ಜೀವನ ಉತ್ತಮಗೊಳಿಸುವ ಜತೆಗೆ, ಸಮಾಜದಲ್ಲಿ ಹೆಣ್ಣುಮಕ್ಕಳ ಸ್ಥಾನ ಉತ್ತೇಜಿಸಲು ಸಹಕಾರ ನೀಡುವುದು ಬಹಳ ಮುಖ್ಯ ಎಂದರು.

ಜಿಲ್ಲೆಯಲ್ಲಿ ಬಾಲ್ಯ ವಿವಾಹ ಲಿಂಗ ಆಧರಿತ ತಾರತಮ್ಯಗಳನ್ನು ಸಂಪೂರ್ಣ ತೊಡೆದು ಹಾಕಬೇಕು. ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಮತ್ತು ಕೆಲವೊಮ್ಮೆ ಪ್ರತಿಯೊಂದು ಕ್ಷೇತ್ರದಲ್ಲೂ ಅವರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲರು ಎಂದು ನುಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪಂವಾರ್‌ ಮಾತನಾಡಿ, ನಿಮ್ಮ ಪರಿಶ್ರಮದ ಮೇಲೆಯೇ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಹೀಗಾಗಿ ಹೆಣ್ಣುಮಕ್ಕಳು ಸ್ವಾವಲಂಬಿಯಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಹೆಣ್ಣು ಮಕ್ಕಳು ತನ್ನ ಕುಟುಂಬಕ್ಕಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ, ಅದೇ ವೇಳೆ ಅವರು ತಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ವಹಿಸಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳುವ ಗುರುತರ ಜವಾಬ್ದಾರಿ ಹೆಣ್ಣು ಮಕ್ಕಳ ಮೇಲಿದೆ ಎಂದು ನುಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಮಾತನಾಡಿ, ಮಹಿಳೆ ಕುಟುಂಬವನ್ನು ನಿರ್ವಹಿಸಿದಷ್ಟೆ ಚಾತುರ್ಯದಿಂದ ಸಮಾಜವನ್ನು ಮುನ್ನಡೆಸಬಲ್ಲಳು. ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ ಅಭಿವೃದ್ಧಿಗೆ ತನ್ನದೇ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನುಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮೀಕಾಂತ ಕೆಂಗೇರಿ, ಜಿಲ್ಲಾ ಪಂಚಾಯಿತಿ ಸಿಪಿಒ ಗುರುನಾಥ ಗೌಡಪ್ಪನ್ನೋರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ಕ್ರೀಡಾ ಇಲಾಖೆ ಅಧಿಕಾರಿ ರಾಜು ಬಾವಿಹಳ್ಳಿ, ಜಿಲ್ಲಾ ನಿರೂಪಣಾಧಿಕಾರಿ ಪ್ರೇಮಮೂರ್ತಿ ಕೆ, ಯಾದಗಿರಿ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಲಾಲಸಾಬ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಭಾಂಗಣ ಮಹಿಳೆಯರಿಂದ ಭರ್ತಿಯಾಗಿತ್ತು
ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಭಾಂಗಣ ಮಹಿಳೆಯರಿಂದ ಭರ್ತಿಯಾಗಿತ್ತು

ಸಬಲ ವಿದ್ಯಾವಂತ ಅಭಿವೃದ್ಧಿಶೀಲ ರಾಷ್ಟ್ರ ನಿರ್ಮಾಣವಾಗಬೇಕಾದರೆ ಪುರುಷರಷ್ಟೆ ಸಮಾನವಾಗಿ ಮಹಿಳೆಯರ ಸಹಭಾಗಿತ್ವ ಇರಬೇಕು- ಶರಣಬಸಪ್ಪ ಕೋಟೆಪ್ಪಗೊಳ ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT