ಸೋಮವಾರ, ಸೆಪ್ಟೆಂಬರ್ 27, 2021
23 °C
ಮುಂಗಾರು ಹಂಗಾಮಿನ ಅಲ್ಪಾವಧಿ ಬೆಳೆ; ಕೈ ತುಂಬ ಹಣದ ಹೊಳೆ

ಯಾದಗಿರಿ ಜಿಲ್ಲೆಯಲ್ಲಿ ಭರದಿಂದ ಸಾಗಿದ ‘ಹೆಸರು’ ಕಟಾವು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯ ಮುಂಗಾರು ಅವಧಿಯ ಪ್ರಮುಖ ಅಲ್ಪಾವಧಿ ಬೆಳೆಯಾದ ಹೆಸರು ಕಟಾವಿಗೆ ಬಂದಿದ್ದು, ಜಿಲ್ಲೆಯ ವಿವಿಧೆಡೆ ರಾಶಿ ನಡೆಯುತ್ತಿದೆ.

ಜಿಲ್ಲೆಯಲ್ಲಿ ಯಾದಗಿರಿ, ಗುರುಮಠಕಲ್‌, ಶಹಾಪುರ, ವಡಗೇರಾ ತಾಲ್ಲೂಕಿನ ಕೆಲ ಭಾಗದಲ್ಲಿ ಹೆಸರು ಬೆಳೆ ಹೆಚ್ಚಾಗಿ ಬೆಳೆಯುತ್ತಾರೆ. ಉಳಿದ ಕಡೆ ಅಲ್ಪ ಸ್ವಲ್ಪ ಬೆಳೆಯಲಾಗುತ್ತಿದೆ.

19,723 ಹೆಕ್ಟೇರ್‌ನಲ್ಲಿ ಬಿತ್ತನೆ: ಜಿಲ್ಲೆಯಲ್ಲಿ ಹೆಸರು ಬೆಳೆ 19,723 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. 711 ಹೆಕ್ಟೇರ್‌ ನೀರಾವರಿ, 21,789 ಹೆಕ್ಟೇರ್‌ ಖುಷ್ಕಿ ಜಮೀನು ಸೇರಿದಂತೆ ಒಟ್ಟಾರೆ 22,500 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ 109 ಹೆಕ್ಟೇರ್‌ ನೀರಾವರಿ, 19,614 ಖುಷ್ಕಿ ಭೂಮಿ ಸೇರಿದಂತೆ 19,723 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ.

ಯಾದಗಿರಿ ತಾಲ್ಲೂಕಿನ ಬಳಿಚಕ್ರ, ಮುಂಡರಗಿ, ಸೈದಾಪುರ, ರಾಮಸಮುದ್ರ, ಕಾಳೆಬೆಳೆಗುಂದಿ, ಬಂದಳ್ಳಿ, ಹತ್ತಿಕುಣಿ, ಯರಗೋಳ, ಮುಷ್ಟೂರು, ಗುರುಮಠಕಲ್‌ ತಾಲ್ಲೂಕಿನ ಕಂದಕೂರ, ಚಿನ್ನಾಕರ, ಶಹಾಪುರ ತಾಲ್ಲೂಕಿನ ಖಾನಾಪುರ, ಗುಂಡಳ್ಳಿ, ಇಬ್ರಾಹಿಂಪುರ, ವಡಗೇರಾ ತಾಲ್ಲೂಕಿನ ನಾಯ್ಕಲ್‌, ಗುಲಸರಂ, ಬಬಲಾದ ಸೇರಿದಂತೆ ಮತ್ತಿತರರ ಕಡೆ ಹೆಚ್ಚು ಹೆಸರು ಬಿತ್ತನೆ ಮಾಡಿದ್ದಾರೆ.

ಅಲ್ಪಾವಧಿಯ ವಾಣಿಜ್ಯ ಬೆಳೆ: ಯಾದಗಿರಿ, ಗುರುಮಠಕಲ್‌ ತಾಲ್ಲೂಕುಗಳಲ್ಲಿ ಹೆಸರು ಬೆಳೆಗೆ ಭೂಮಿ ಸೂಕ್ತವಾಗಿದ್ದು, ಹೀಗಾಗಿ ಹೆಚ್ಚು ಬೆಳೆಯಲಾಗುತ್ತಿದೆ. ಶಹಾಪುರ, ವಡಗೇರಾ, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ನೀರಾವರಿ ಇರುವುದರಿಂದ ಭತ್ತ, ಹತ್ತಿ ಹೆಚ್ಚು ಬೆಳೆಯಲಾಗುತ್ತಿದೆ.

ಕೇವಲ 65ರಿಂದ 70 ದಿನಗಳಿಗೆ ಹೆಸರು ಬೆಳೆ ಕಟಾವಿಗೆ ಬರುತ್ತದೆ. ಕೆಲ ಮಾದರಿ ಹೆಸರು ಶೀಘ್ರ ಕಟಾವಿಗೆ ಬರುವ ಲಕ್ಷಣಗಳನ್ನು ಹೊಂದಿವೆ.  ಕೆಲ ಕಡೆ ತಡವಾಗಿ
ರಾಶಿಯಾಗುತ್ತವೆ.

ಒಂದು ಕ್ವಿಂಟಲ್‌ಗೆ ₹6 ಸಾವಿರಕ್ಕೂ ಹೆಚ್ಚು ಹಣ ಸಿಗುವುದರಿಂದ ರೈತರಿಗೆ ಇದು ಕೈ ತುಂಬ ಹಣ ಗಳಿಸಿಕೊಡುವ ಬೆಳೆಯಾಗಿದೆ. ಹೀಗಾಗಿಯೇ ಇದು ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿ ಗುರುತಿಸಿಕೊಂಡಿದೆ.

ಎರಡು ಬೆಳೆ ಬೆಳೆಯಲು ಅನುಕೂಲ: ಮುಂಗಾರು ಆರಂಭವಾಗುತ್ತಲೇ ಹೆಸರು ಬಿತ್ತನೆ ಮಾಡುವುದರಿಂದ ಬೇಗನೇ ಕಟಾವಿಗೆ ಬರುತ್ತದೆ. ಆ ನಂತರ ಇದನ್ನು ಕಟಾವು ಮಾಡಿ ಜೋಳ, ಶೇಂಗಾ ಬಿತ್ತನೆ ಮಾಡಲಾಗುತ್ತಿದೆ.

ಹೆಸರು ಬೆಳೆ ನಂತರ ಬಯಲು ಪ್ರದೇಶದಲ್ಲಿ ಜೋಳ, ನೀರಾವರಿ ಸೌಲಭ್ಯ ಇದ್ದವರು ಶೇಂಗಾ ಬೆಳೆಯುತ್ತಾರೆ. ಈ ಮೂಲಕ ಎರಡು ಬೆಳೆ ಬೆಳೆಯಲು ಅನುಕೂಲವಾಗುತ್ತದೆ.

ಜಿಟಿ ಜಿಟಿ ಮಳೆ ಅಡ್ಡಿ: ಕಳೆದು ಎರಡು ದಿನಗಳಿಂದ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಹೆಸರು ಕಟಾವಿಗೆ ಅಡ್ಡಿಯಾಗಿದೆ. ಜಿಟಿ ಜಿಟಿ ಮಳೆಯಿಂದ ಮತ್ತೆ ಒಂದು ವಾರ ಕಟಾವಿಗೆ ವಿಳಂಬವಾಗುತ್ತಿದೆ.

ಕಳೆದ ವರ್ಷ ಇನ್ನೇನು ಫಸಲು ಬರುತ್ತದೆ ಎನ್ನುವಾಗ ಅತಿವೃಷ್ಟಿಯಾಗಿ ಬೆಳೆ ಹಾಳಾಗಿತ್ತು. ಮಳೆ ಹೆಚ್ಚಾದ ಕಾರಣ ಹೆಸರು ಬೆಳೆ ಕಪ್ಪಾಗಿ ಬೆಲೆ ಇಲ್ಲದಂತಾಗಿತ್ತು. ಜಮೀನಿನಲ್ಲಿಯೇ ಮೊಳಕೆ ಬಂದಿತ್ತು. ಇದರಿಂದ ರೈತರು ನಷ್ಟಕ್ಕೆ ಎರವಾಗಿದ್ದರು. ಈ ಬಾರಿ ಹೆಚ್ಚು ಮಳೆ ಬಂದರೆ ಏನು ಎನ್ನುವ ಆತಂಕ ರೈತರದ್ದಾಗಿದೆ.

ಕೈ ತುಂಬ ಹಣ: ಸದ್ಯ ಮಾರುಕಟ್ಟೆಯಲ್ಲಿ ಹೆಸರು ಬೆಳೆಗೆ ಉತ್ತಮ ಬೆಲೆ ಇದೆ. ಮಂಗಳವಾರ ಯಾದಗಿರಿ ಎಪಿಎಂಸಿಯಲ್ಲಿ ಒಂದು ಕ್ವಿಂಟಲ್‌ ಹೆಸರಿಗೆ ಕನಿಷ್ಠ ₹4,409, ಗರಿಷ್ಠ ₹7,077, ಸರಾಸರಿ ₹6,122 ಬೆಲೆ ಇದೆ. ಇದರಿಂದ ಹೆಸರು ಬೆಳೆದ ರೈತರಿಗೆ ಕೈ ತುಂಬ ಹಣ
ಸಿಗುತ್ತಿದೆ.

‘ನಾಲ್ಕು ಎಕರೆಯಲ್ಲಿ ಹೆಸರು ಬಿತ್ತನೆ ಮಾಡಲಾಗಿತ್ತು. ಸಕಾಲಕ್ಕೆ ಮಳೆಯಾಗಿದ್ದರಿಂದ ಉತ್ತಮ ಇಳುವರಿ ಬಂದಿದೆ. ಹೆಚ್ಚಿನ ಲಾಭ ಪಡೆಯುವ ನಿರೀಕ್ಷೆ ಇದೆ’ ಎಂದು ರೈತ ನಾಗಪ್ಪ ರಾಯಪ್ಪ ಹೇಳುತ್ತಾರೆ.

***

ಜಿಲ್ಲೆಗೆ ಬಂದ ಕಟಾವು ಯಂತ್ರಗಳು

ಪಕ್ಕದ ತೆಲಂಗಾಣದಿಂದ ಹೆಸರು ಬೆಳೆ ರಾಶಿ ಮಾಡುವ ಯಂತ್ರಗಳು ಜಿಲ್ಲೆಗೆ ಲಗ್ಗೆ ಇಟ್ಟಿವೆ.

ಹೆಸರು ಹೆಚ್ಚು ಬೆಳೆಯುವ ಯಾದಗಿರಿ, ಗುರುಮಠಕಲ್‌ ತಾಲ್ಲೂಕಿನಲ್ಲಿ 10ರಿಂದ 15 ಯಂತ್ರಗಳು ಜಮೀನಿನಲ್ಲಿ ಸದ್ದು ಮಾಡುತ್ತಿವೆ.

ಒಂದು ಎಕರೆಗೆ ದರ ನಿಗದಿ ಮಾಡಲಾಗಿದ್ದು, ಮಾತುಕತೆಯ ಮೂಲಕ ದರ ಹೆಚ್ಚು–ಕಡಿಮೆಯಾಗುತ್ತಿದೆ.

‘ಹೆಸರು ರಾಶಿ ಮಾಡುವ ಯಂತ್ರವನ್ನು ₹21 ಲಕ್ಷಕ್ಕೆ ಖರೀದಿ ಮಾಡಿದ್ದೇನೆ. ತೆಲಂಗಾಣ ಭಾಗದಲ್ಲಿ ಇಲ್ಲಿಗೆ ಹೆಚ್ಚು ಯಂತ್ರಗಳು ಆಗಮಿಸಿವೆ. ಕೆಲ ಕಟಾವು ಮುಗಿದಿದ್ದು, ಒಬ್ಬರ ಮೂಲಕ ಮತ್ತೊಬ್ಬರು ಪರಿಚಯವಾಗಿ ರೈತರು ತಮ್ಮ ಜಮೀನುಗಳಿಗೆ ಕರೆದೊಯುತ್ತಾರೆ. ಇದರಿಂದ ಕಟಾವು ಶೀಘ್ರ ಆಗುತ್ತದೆ’ ಎಂದು ಯಂತ್ರದ ಮಾಲೀಕ ಲೋಕೇಶ್ ಮೂಡವತ್ತ ಹೇಳುತ್ತಾರೆ.

‘ಕಲ್ಲುಗಳಿಂದ ಕೂಡಿದ ಜಮೀನನಲ್ಲಿ ಯಂತ್ರಗಳು ಕೆಲಸ ಮಾಡುವುದಿಲ್ಲ. ಒಂದು ಬದಿಯನ್ನು ಹಾಗೇಯೇ ಬಿಡಲಾಗುತ್ತಿದೆ. ಇದರಿಂದ ಯಂತ್ರಕ್ಕಿಂತ ಮಾನವ ಸಂಪನ್ಮೂನ ಬಳಕೆಯಿಂದ ತಡವಾದರೂ ಪರವಾಗಿಲ್ಲ. ಎಲ್ಲ ಕಡೆ ಜಮೀನು ಹಸನನಾಗುತ್ತಿದೆ. ಯಂತ್ರದಿಂದ ಕೆಲ ಕಡೆ ಕಾಳುಗಳು ಜಮೀನಿನಲ್ಲಿ ಬೀಳುತ್ತವೆ. ಹೀಗಾಗಿ ಯಂತ್ರದ ಬಳಿ ಪರಿಶೀಲಿಸಲು ಬಂದಿದ್ದೇನೆ’ ಎಂದು ರೈತ ಆಂಜನೇಯ ಈರವ್ವನೊರ ಮಾಹಿತಿ ಹಂಚಿಕೊಂಡರು.

***

ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಳೆದ ಒಂದು ವಾರದಿಂದ ಹೆಸರು ಆವಕ ಬರುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬರುವ ನಿರೀಕ್ಷೆ ಇದೆ
ಸುಮಂಗಲಾ ಹೂಗಾರ, ಎಪಿಎಂಸಿ ಕಾರ್ಯದರ್ಶಿ

***

ನಮ್ಮ ಜಮೀನಿನಲ್ಲಿ ಬೆಳೆದ ಹೆಸರು ಕಟಾವಿಗೆ ಬಂದಿದ್ದು, ಉತ್ತಮ ಲಾಭ ಬರುವ ನಿರೀಕ್ಷೆ ಇದೆ. ಯಂತ್ರದಿಂದ ಕಟಾವು ಮಾಡಿಸಿದರೆ ಕಾಳುಗಳು ನೆಲದ ಪಾಲಾಗುತ್ತವೆ

ಆಂಜನೇಯ ಈರವ್ವನೊರ, ರೈತ

***

ಒಂದು ಎಕರೆಗೆ ₹1,600 ದರ ನಿಗದಿ ಮಾಡಿದ್ದೇವೆ. ಕೂಲಿ ಕಾರ್ಮಿಕರು ಸಿಗದವರು ಯಂತ್ರಗಳಿಂದ ಹೆಸರು ಬೆಳೆ ರಾಶಿ ಮಾಡಿಸುತ್ತಾರೆ
ಲೋಕೇಶ್ ಮೂಡವತ್ತ, ಯಂತ್ರದ ಮಾಲೀಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು