ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತ್ಯಾಚಾರ ಪ್ರಕರಣ ದಾಖಲಿಸಿದ್ದ ದಲಿತ ಕುಟುಂಬಕ್ಕೆ ದಿನಸಿ ನಿರಾಕರಣೆ

Published : 13 ಸೆಪ್ಟೆಂಬರ್ 2024, 22:22 IST
Last Updated : 13 ಸೆಪ್ಟೆಂಬರ್ 2024, 22:22 IST
ಫಾಲೋ ಮಾಡಿ
Comments

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ‌ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಗ್ರಾಮದ ಸವರ್ಣೀಯರು ಪರಿಶಿಷ್ಟ ಜಾತಿಯ ಕುಟುಂಬದವರಿಗೆ ಅಂಗಡಿಯಲ್ಲಿ ದಿನಸಿ ವಸ್ತುಗಳನ್ನು ಕೊಡುತ್ತಿಲ್ಲ ಎಂದು ಸಂತ್ರಸ್ತ ಬಾಲಕಿಯ ತಂದೆ ದೂರಿದ್ದಾರೆ.

ಸವರ್ಣೀಯ ಸಮುದಾಯಕ್ಕೆ ಸೇರಿದ ಯುವಕನು ಪರಿಶಿಷ್ಟ ಜಾತಿಗೆ ಸೇರಿದ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದರಿಂದ ಆಕೆ 5 ತಿಂಗಳ ಗರ್ಭಿಣಿಯಾಗಿದ್ದಳು. ಬಾಲಕಿಯ ಪೋಷಕರು ಯುವಕನ ವಿರುದ್ಧ ನೀಡಿದ ದೂರಿನಂತೆ ಆಗಸ್ಟ್‌ 12ರಂದು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಘಟನೆ ವಿವರ: ಬಾಲಕಿಯ ತಂದೆ, ತಾಯಿ ದೂರದ ಪಟ್ಟಣವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಗ್ರಾಮಕ್ಕೆ ಮರಳಿದ ಮೇಲೆ ಮಗಳ ಮೇಲೆ ಅತ್ಯಾಚಾರ ನಡೆದಿರುವ ವಿಷಯ ತಿಳಿದು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂಬ ವಿಚಾರ ಬೆಳಕಿಗೆ ಬಂದಿದೆ. 

‘ಮಾದಿಗ ಜಾತಿಯವಳಾಗಿದ್ದರಿಂದ ನಿನ್ನ ಜೊತೆ ಮದುವೆ ಮಾಡಿಕೊಳ್ಳುವುದಿಲ್ಲ. ಗರ್ಭಪಾತ ಮಾಡಿಸಿಕೊಂಡುಬಿಡು. ಈ ಬಗ್ಗೆ ಬೇರೆಯವರಿಗೆ ಹೇಳಿದರೆ ಜೀವ ತೆಗೆಯುತ್ತೇನೆ’ ಎಂದು ಯುವಕನು ಬೆದರಿಕೆ ಹಾಕಿದ್ದರಿಂದ ಬಾಲಕಿ ಯಾರಿಗೂ ಹೇಳಿರಲಿಲ್ಲ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಪ್ರಕರಣ ದಾಖಲಿಸಿರುವ ಕಾರಣಕ್ಕೆ ದಲಿತರಾಗಿರುವ ನಮಗೆ ಎರಡು ದಿನಗಳಿಂದ ಗ್ರಾಮದಲ್ಲಿ ಯಾವುದೇ ಅಂಗಡಿಯಲ್ಲೂ ದಿನಸಿ ವಸ್ತುಗಳನ್ನು ಕೊಡುತ್ತಿಲ್ಲ’ ಎಂದು ಸಂತ್ರಸ್ತ ಬಾಲಕಿಯ ತಂದೆ ದೂರಿದ್ದಾರೆ.

ಶಾಂತಿ ಸಭೆ: ಈ ವಿಚಾರ ತಿಳಿದು ತಿಳಿದು ಸುರಪುರ ಡಿವೈಎಸ್ಪಿ ಜಾವೀದ್ ಇನಾಮದಾರ್ ಅವರು ಗ್ರಾಮಕ್ಕೆ ಗುರುವಾರ ರಾತ್ರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಶುಕ್ರವಾರ ಸಂಜೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರು, ‘ಬಹಿಷ್ಕಾರ ಘಟನೆ ಆ ಗ್ರಾಮದಲ್ಲಿ ಕಂಡು ಬಂದಿಲ್ಲ. ಅಲ್ಲಿಗೆ ಭೇಟಿ ನೀಡಿದ್ದೇನೆ. ಎರಡು ಸಮುದಾಯವರು ಅಪಾರ್ಥ ಮಾಡಿಕೊಂಡಿದ್ದರು. ಎರಡು ಸಮುದಾಯಗಳನ್ನು ಕರೆಸಿ ಮಾತುಕತೆ ನಡೆಸಿದ್ದೇವೆ. ತಮ್ಮ ತಪ್ಪು ತಿದ್ದುಕೊಂಡು ಪರಸ್ಪರ ಕೂಡಿ ಬಾಳುತ್ತೇವೆ ಎಂದು ಹೇಳಿದ್ದಾರೆ’ ಎಂದು ತಿಳಿಸಿದರು.

ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಪೋಕ್ಸೊ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಯುವಕ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಛಲವಾದಿ ನಾರಾಯಣಸ್ವಾಮಿ ಖಂಡನೆ
‘ಹುಣಸಗಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಪರಿಶಿಷ್ಟ ಜಾತಿಯ ಕುಟುಂಬದವರಿಗೆ ಬಹಿಷ್ಕಾರ ಹಾಕಿ ದಿನಸಿ ವಸ್ತುಗಳನ್ನು ಕೊಡದಿರುವ ಘಟನೆ ಖಂಡನೀಯ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ‘ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮಕ್ಕೆ ಭೇಟಿ ನೀಡದಿರುವುದರಿಂದ ದಲಿತರಿಗೆ ಅವಮಾನವಾಗಿದೆ. ರಾಜ್ಯ ಸರ್ಕಾರ ದಲಿತರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದೆ. ಸೆ.17ರಂದು ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡುತ್ತೇನೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT