ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಸೇವನೆಯಿಂದ ಆರೋಗ್ಯ ಹಾಳು

ವಿಶ್ವ ತಂಬಾಕು ನಿಷೇಧ ದಿನಾಚರಣೆ; ಕಾನೂನು ಅರಿವು-ನೆರವು ಕಾರ್ಯಕ್ರಮ
Last Updated 31 ಮೇ 2019, 14:47 IST
ಅಕ್ಷರ ಗಾತ್ರ

ಯಾದಗಿರಿ: ತಂಬಾಕಿನಿಂದ ವ್ಯಕ್ತಿಯ ಆರೋಗ್ಯ ಹಾಳಾಗುವುದಲ್ಲದೇ, ಆತನ ಕುಟುಂಬದ ಆರ್ಥಿಕ ಪರಿಸ್ಥಿತಿ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರಾಚಪ್ಪ ಕೆ.ತಾಳಿಕೋಟಿ ಹೇಳಿದರು.

ನಗರದ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟ್ ಸೇದುವುದರಿಂದ ಅವರ ಜೊತೆಗೆ ಸುತ್ತಮುತ್ತಲಿನವರ ಆರೋಗ್ಯ ಹಾಳಾಗುತ್ತದೆ. ಇಂತಹ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಸೇವಿಸಿದರೆ ದಂಡ ವಿಧಿಸಲಾಗುತ್ತದೆ. ಆದರೆ, ಬಹಳಷ್ಟು ಜನರಿಗೆ ಸಾರ್ವಜನಿಕ ಸ್ಥಳ ಎಂದರೆ ಯಾವುದು ಎಂಬುದೇ ತಿಳಿದಿರುವುದಿಲ್ಲ. ಹಾಗಾಗಿ, ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೊಡೆ ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಸಂವಿಧಾನದ ಅನುಚ್ಛೇಧ 21ರ ಪ್ರಕಾರ ಆರೋಗ್ಯಯುತ ಜೀವನ ನಡೆಸುವುದು ಪ್ರತಿಯೊಬ್ಬರ ಹಕ್ಕಾಗಿದೆ ಎಂದು ಹೇಳುತ್ತದೆ. ಅದರಂತೆ ತಂಬಾಕು ರಹಿತ ಜೀವನ ಸಾಗಿಸಿದರೆ ಕುಟುಂಬದ ಆರ್ಥಿಕ ಪ್ರಗತಿ ಜೊತೆಗೆ ದೇಶ ಪ್ರಗತಿ ಹೊಂದುತ್ತದೆ. ಅಲ್ಲದೆ, ಆರೋಗ್ಯವಂತ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.

‌ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹಬೀಬ್ ಉಸ್ಮಾನ್ ಪಟೇಲ್ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಬೀಡಿ, ಸಿಗರೇಟ್, ಗುಟ್ಕಾ ದಾಸರಾಗುವುದರಿಂದ ಆರೋಗ್ಯದ ಜೊತೆಗೆ ಹಣವೂ ಹಾಳಾಗುತ್ತದೆ. ಆರೋಗ್ಯ ಚೆನ್ನಾಗಿದ್ದರೆ ಯಾವುದೇ ಕೆಲಸ ನಿರ್ವಹಿಸಲು ಸಾಧ್ಯ. ರೋಗಗಳು ಬರುವ ಮೊದಲೇ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ, ಆರೋಗ್ಯಯುತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಭಗವಂತ ಅನವಾರ ಮಾತನಾಡಿ, 1560ರಲ್ಲಿ ಫ್ರಾನ್ಸ್‌ನ ಜಾನ್ ನಿಕೋಟ್ ಎಂಬ ಸಾಮಾನ್ಯ ವ್ಯಕ್ತಿ ತಂಬಾಕನ್ನು ಪರಿಚಯಿಸಿದ. ಈ ವ್ಯಕ್ತಿಯಿಂದ ತಂಬಾಕಿನಲ್ಲಿರುವ ’ನಿಕೋಟೀನ್’ ರಾಸಾಯನಿಕ ಪದಾರ್ಥಕ್ಕೆ ಹೆಸರು ಬಂದಿದ್ದು. ’ನಿಕೋಟಿನ್’ ರಾಸಾಯನಿಕ ಅಂಶವೇ ತಂಬಾಕು ವ್ಯಸನಿಗಳನ್ನಾಗಿಸುತ್ತದೆ. ಅತಿಹೆಚ್ಚು ತಂಬಾಕು ವ್ಯಾಪಾರ ನಡೆಯುವುದರಿಂದ ಇದಕ್ಕೆ ’ಕಂದು ಚಿನ್ನ’ ಎಂತಲೂ ಕರೆಯಲಾಗುತ್ತದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿವೇಕಾನಂದ ಟೆಂಗೆ ಮಾತನಾಡಿ, ಜಗತ್ತಿನಲ್ಲಿ ಸುಮಾರು 26 ಕೋಟಿ ಜನ ಧೂಮಪಾನ ಮಾಡುತ್ತಾರೆ. 19 ಕೋಟಿ ಜನರು ಗುಟ್ಕಾದಂತಹ ತಂಬಾಕು ಉತ್ಪನ್ನಗಳ ಸೇವನೆ ಮಾಡುತ್ತಾರೆ. ಇದರಿಂದ ಪ್ರತಿ ವರ್ಷ ಸುಮಾರು 6 ಕೋಟಿ ಜನ ಸಾವನ್ನಪ್ಪುತ್ತಿದ್ದಾರೆ. 2030ರವರೆಗೆ ಪ್ರತಿ ವರ್ಷ ಸಾವನ್ನಪ್ಪುವ ಜನರ ಸಂಖ್ಯೆ 8 ಕೋಟಿಗೆ ಏರಿಕೆಯಾಗಲಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ನಾಮದೇವ ಕೆ.ಸಾಲಮಂಟಪಿ, ಸಿವಿಲ್ ನ್ಯಾಯಾಧೀಶ ಲೋಕೇಶ್ ಧನಪಾಲ ಹವಲೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸ್ಮೀತಾ ಮಾಲಗಾಂವೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸರಾವ್ ಕುಲಕರ್ಣಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಸಿ.ಎಸ್. ಮಾಲಿಪಾಟೀಲ್, ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕರಾದ ರಘುವೀರಸಿಂಗ್ ಠಾಕೂರ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಸುರೇಶ ಬಾಬು ಕಲಾಲ್ ಉಪಸ್ಥಿತರಿದ್ದರು.

ವಕೀಲರಾದ ಕೆ.ಬಿ.ಅಂಗಡಿ ಪ್ರಾರ್ಥಿಸಿದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಶಾಂತಪ್ಪ ಎಸ್.ಖಾನಹಳ್ಳಿ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ಭೀಮರಾಯ ಅಚೋಲಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT