ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್‌ ಕಚೇರಿ, ಆಸ್ಪತ್ರೆ, ನಗರಸಭೆ, ಅಂಗನವಾಡಿಗೆ ಡಿಸಿ ಭೇಟಿ, ಪರಿಶೀಲನೆ

ಸಾರ್ವಜನಿಕರಿಂದ ಅಹವಾಲು ಸ್ವೀಕಾರ
Last Updated 31 ಆಗಸ್ಟ್ 2022, 5:36 IST
ಅಕ್ಷರ ಗಾತ್ರ

ಯಾದಗಿರಿ: ನಗರದಲ್ಲಿ ರಸ್ತೆಗಳು ಹದಗೆಟ್ಟಿದ್ದರಿಂದ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.

ಪ್ರತಿ ತಿಂಗಳ ಮಂಗಳವಾರ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಜಿಲ್ಲಾಧಿಕಾರಿ ಯಾದಗಿರಿ ತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ನಂತರ ನಗರದಲ್ಲಿನ ಹಳೆ ( ಹೆರಿಗೆ) ಆಸ್ಪತ್ರೆ, ಅಂಗನವಾಡಿ ಮತ್ತು ಶಾಲೆ ಹಾಗೂ ನಗರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಾಡಕಚೇರಿ, ಭೂಮಿ ಕೇಂದ್ರ, ಭೂ ಮಾಪನ, ಪಹಣಿ ಕೇಂದ್ರ, ಚುನಾವಣೆ ಕೇಂದ್ರದ ಕೊಠಡಿಗೆ ತೆರಳಿ ಅಧಿಕಾರಿಗಳಿಂದ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡರು.

ತಾಲ್ಲೂಕಿನ ಜಮೀನು ಸರ್ವೇ ಕಾರ್ಯಗಳ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ, ಇಲಾಖೆಯ ಹಾಗೂ ನೋಂದಾಯಿತ ಸರ್ವೇಯರ್‌ಗಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡಿದ ಶೀಘ್ರದಲ್ಲಿ ಪ್ರಕರಣ ಇತ್ಯರ್ಥಪಡಿಸಬೇಕು. ಅಧಿಕಾರಿಗಳು ಸರ್ವೇಯರ್‌ಗಳ ಪ್ರಗತಿಯನ್ನು ನಿರಂತರವಾಗಿ ಗಮನಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಳೆ ಜಿಲ್ಲಾಸ್ಪತ್ರೆಗೆ ಭೇಟಿ: ವೈದ್ಯರು ಸರಿಯಾದ ಸಮಯಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು. ಹಳೆ ಜಿಲ್ಲಾಸ್ಪತ್ರೆಯ ಪ್ರತಿ ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ, ಹೊರ ಮತ್ತು ಒಳ ರೋಗಿಗಳ ಹಿತರಕ್ಷಣೆ ಕಾಪಾಡಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಆಸ್ಪತ್ರೆಯ ಹೆರಿಗೆ ಕೋಣೆ, ವಿಶೇಷ ನವಜಾತ ಶಿಶು ಆರೈಕೆ ಕೇಂದ್ರ, ಮಕ್ಕಳ ಪೌಷ್ಟಿಕಾಂಶ ಮತ್ತು ಪುನರ್ವಸತಿ ಕೇಂದ್ರ, ಶಸ್ತ್ರ ಚಿಕಿತ್ಸಾ ಕೋಣೆ, ಒಳ ರೋಗಿಗಳ ಕೋಣೆ, ಪಿಎನ್‌ಸಿ ವಾರ್ಡ್, ಕ್ಷ- ಕಿರಣ ಕೋಣೆ, ರಕ್ತ ಸಂಗ್ರಹಣ ಕೇಂದ್ರ, ಚಿಕಿತ್ಸಾ ವಿಭಾಗ, ಡಯಾಲಿಸಿಸ್, ಒಪಿಡಿ, ವೈದ್ಯರ ತಪಾಸಣೆ ಕೊಠಡಿ, ಔಷಧಿ ವಿತರಣೆ ಕೊಠಡಿ, ರೋಗಿಗಳ ನೋಂದಣಿ ವಿಭಾಗ, ತುರ್ತು ಚಿಕಿತ್ಸಾ ವಿಭಾಗದ ಕೊಠಡಿಗಳಿಗೆ ಜಿಲ್ಲಾಧಿಕಾರಿ ತೆರಳಿ ಪರಿಶೀಲಿಸಿ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು.

ನಗರಸಭೆ ಕಾರ್ಯಾಲಯಕ್ಕೆ ಭೇಟಿ: ನಗರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಕಸ ವಿಲೇವಾರಿ ಸರಿಯಾದ ರೀತಿಯಲ್ಲಿ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆ ಮತ್ತು ಮೂಲಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಉಪಾಧ್ಯಕ್ಷೆ ಚಂದ್ರಕಲಾ, ಯಾದಗಿರಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ನಗರಸಭೆ ಪೌರಾಯುಕ್ತ ಶರಣಪ್ಪ, ಡಿಎಚ್ಒ ಡಾ.ಗುರುರಾಜ, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ನೀಲಮ್ಮ, ಜಿಲ್ಲಾ ಕುಷ್ಠರೋಗ ಅಧಿಕಾರಿ ಲಕ್ಷ್ಮೀಕಾಂತ ಒಂಟಿಪೀರ, ಟಿಎಚ್ಒ ಡಾ.ಹಣಮಂತರೆಡ್ಡಿ, ಯಾದಗಿರಿ ಮಹಿಳಾ ಮತ್ತು ಮಕ್ಕಳ ಇಲಾಖೆ ತಾಲ್ಲೂಕು ಅಧಿಕಾರಿ ರಾಧಾ ಮಣ್ಣೂರ, ರಾಜೀವ್ ಗಾಂಧಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಹಣಮಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT