ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುರುಮಠಕಲ್: ಕೋಲು ಹಿಡಿದು ನೀರು ಕೇಳಿದ ಗ್ರಾಮಸ್ಥರು!

ಸಣ್ಣ ಸಂಭರ: ನೀರು ಪೂರೈಕೆ, ಚರಂಡಿ ಸ್ವಚ್ಛತೆಗೆ ಆಗ್ರಹಿಸಿ ಪ್ರತಿಭಟನೆ
Published 20 ಫೆಬ್ರುವರಿ 2024, 5:30 IST
Last Updated 20 ಫೆಬ್ರುವರಿ 2024, 5:30 IST
ಅಕ್ಷರ ಗಾತ್ರ

ಗುರುಮಠಕಲ್: ತಾಲ್ಲೂಕಿನ ಸಣ್ಣ ಸಂಭರ ಗ್ರಾಮದಲ್ಲಿ ಸೋಮವಾರ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಹಾಗೂ ಗ್ರಾಮದ ಸ್ವಚ್ಛತೆಗೆ ಶೀಘ್ರ ಕ್ರಮ ವಹಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಖಾಲಿ ಕೊಡ ಹಾಗೂ ಕೋಲು ಹಿಡಿದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ವೇಳೆ ಸಾಮಾಜಿಕ ಹೋರಾಟಗಾರ ಉಮೇಶ ಮುದ್ಣಾಳ ಮಾತನಾಡಿ, ಸಣ್ಣ ಸಂಭರ ಗ್ರಾಮದ ಎಲ್ಲಾ ಬಡಾವಣೆಗಳಲ್ಲೂ ನೀರಿನ ಸಮಸ್ಯೆಯಿದೆ. ಜತೆಗೆ ಇಡೀ ಗ್ರಾಮವು ಗಲೀಜು, ಚರಂಡಿಗಳ ವಾಸನೆ, ಸೊಳ್ಳೆ ಕಾಟದಿಂದ ತ್ಯಾಜ್ಯದ ತೊಟ್ಟಿಯಂತೆ ಭಾಸವಾಗುತ್ತಿದೆ. ಸಂಬಂಧಿತ ಅಧಿಕಾರಿಗಳು ಸಮಸ್ಯೆಯ ಕುರಿತು ಜಾಣ ಕುರುಡು ತೋರುವುದು ಖಂಡನೀಯ ಎಂದರು.

ಜೆಜೆಎಂ ಕಾಮಗಾರಿ ಸಂಪೂರ್ಣ ವಿಫಲವಾಗಿದೆ. ಜನರ ತೆರಿಗೆ ಹಣದಲ್ಲಿ ಸರ್ಕಾರ ಜನಪರವಾಗುವ ಕೆಲಸಕ್ಕೆ ಯೋಜನೆ ರೂಪಿಸುತ್ತವೆ. ಆದರೆ, ಯೋಜನೆಗಳ ಅನುಷ್ಠಾನ ಮಾತ್ರ ಅಷ್ಟಕಷ್ಟೆ. ತಾಲ್ಲೂಕು ವ್ಯಾಪ್ತಿಯಲ್ಲಿ ಈಗಾಗಲೇ ವಾಂತಿ-ಭೇದಿ ಪ್ರಕರಣದಿಂದಾದ ಅನಾಹುತ ಇನ್ನೂ ಮಾಸಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯವಹಿಸಿ ಮತ್ತೊಂದು ಘಟನೆಗೆ ಆಸ್ಪದ ನೀಡಬಾರದು ಎಂದು ಅವರು ಆಗ್ರಹಿಸಿದರು.

ಸಣ್ಣ ಸಂಭ್ರ ಗ್ರಾಮದ ಕುಡಿಯುವ ನೀರು, ಸ್ವಚ್ಛತೆ ಸೇರಿ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು.  ಇಲ್ಲಿ ಸಮಸ್ಯೆ ಉಲ್ಬಣಿಸಲು ಕಾರಣರಾದ ಪಂಚಾಯಿತಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಎಲ್ಲರ ಮೇಲೂ ಕಠಿಣ ಕ್ರಮ ವಹಿಸಬೇಕು. ಇಲ್ಲವಾದರೆ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಗ್ರಾಮದ ಎಲ್ಲಾ ಬಡಾವಣೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು. ಅನಂತರಡ್ಡಿಗೌಡ, ಭೀಮರಾಯ ಬಟ್ಟಿಕೇರಿ, ಕಾಸಿಂ, ಮಹೇಶ, ಮೋಹನರೆಡ್ಡಿ, ಮೌನೇಶ, ಶರಣಪ್ಪ, ಅಂಜು, ರಫೀಕ್ ಪಟೇಲ್, ಬಾಬುಖಾನ್, ಸಾಹುಕಾರ, ನರಸಪ್ಪ, ಬಸವರಾಜ ಭೀಮಶೆಪ್ಪ, ವೆಂಕಟಪ್ಪ, ಬಸಮ್ಮ, ಶರಣಮ್ಮ, ದೇವಮ್ಮ, ಲಲಿತಮ್ಮ, ಕಮಲಮ್ಮ, ಅನಂತಮ್ಮ, ತಾಯಮ್ಮ, ಸಿದ್ದಮ್ಮ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಸ್ವಾತಂತ್ರದ ಅಮೃತ ಮಹೋತ್ಸವದ ಈ ಕಾಲಘಟ್ಟದಲ್ಲೂ ನಾವಿನ್ನೂ ನೀರು ಪೂರೈಕೆಗೆ ಚರಂಡಿ ಸ್ವಚ್ಛತೆಗಾಗಿ ಹೋರಾಟ ಮಾಡುವ ಸ್ಥಿತಿಯಲ್ಲಿದ್ದೇವೆ. ಇದು ನಮ್ಮ ವ್ಯವಸ್ಥೆಯನ್ನು ಅಣಕಿಸುವ ಮತ್ತು ನಾಚಿಕೆಗೇಡಿನ ವಿಷಯವಾಗಿದೆ.
ಉಮೇಶ ಮುದ್ನಾಳ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT