ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗೋಳ | ಜಯತೀರ್ಥರ ಮೂಲ ಬೃಂದಾವನ ವಿಚಾರವಾಗಿ ಭಕ್ತರಿಂದ ದಿಢೀರ್ ಪ್ರತಿಭಟನೆ

Published 6 ಜುಲೈ 2023, 11:30 IST
Last Updated 6 ಜುಲೈ 2023, 11:30 IST
ಅಕ್ಷರ ಗಾತ್ರ

ಯರಗೋಳ (ಯಾದಗಿರಿ): ಜಯತೀರ್ಥರ ಮೂಲ ಬೃಂದಾವನ ಮಳಖೇಡದಲ್ಲಿದ್ದು, ಕೆಲವರು ಗೊಂದಲ ಮೂಡಿಸುತ್ತಿದ್ದಾರೆ ಎಂದು ಜಯತೀರ್ಥರ ಭಕ್ತರಿಂದ ಯಾದಗಿರಿ ತಾಲ್ಲೂಕಿನ ಯರಗೋಳದಲ್ಲಿ ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು‌.

ಜಯತೀರ್ಥರ ಕಾರ್ಯಕ್ಷೇತ್ರವಾದ ಸುಕ್ಷೇತ್ರ ಯರಗೋಳದಲ್ಲಿ ಶ್ರೀ ಜಯತೀರ್ಥರ ಪೂರ್ವ ಆರಾಧನೆಯ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದ ಭಕ್ತರು ಈ ವಿಷಯದಲ್ಲಿ ತೀವ್ರತರವಾದ ಅಸಮಾಧಾನವನ್ನು ಹೊರಹಾಕಿದರು.

ನಂತರ ಮಾತನಾಡಿದ ಭಕ್ತರು, ಜಯತೀರ್ಥರ ಮೂಲ ವೃಂದಾವನ ಕ್ಷೇತ್ರ ಕಲ್ಯಾಣ ಕರ್ನಾಟದ ಪ್ರಸಿದ್ಧ ರಾಷ್ಟ್ರಕೂಟರ ರಾಜಧಾನಿ ಮಳಖೇಡದಲ್ಲಿದೆ. 650 ವರ್ಷಗಳಿಂದಲೂ ಐತಿಹಾಸಿಕ, ಧಾರ್ಮಿಕ ಶೃದ್ಧಾ ಕೇಂದ್ರವಾಗಿದೆ. ಬಹಮನಿಶಾಹಿ, ನಿಜಾಮಶಾಹಿ ಆಡಳಿತದಿಂದಲೂ ಜಯತೀರ್ಥರ ಮೂಲ ವೃಂದಾವನದಲ್ಲಿನ ಆರಾಧನೆಯು ವೈಭವದಿಂದ ನೆರವೇರುತ್ತಿರುವುದು ಕ್ಷೇತ್ರದಲ್ಲಿನ ಇತಿಹಾಸದ ಪುಟಗಳಲ್ಲಿ ಸ್ಪಷ್ಟವಾಗಿ ದಾಖಲಿಸಲ್ಪಟ್ಟಿದೆ. ದೇಶ ಸ್ವಾತಂತ್ರವಾದ ಮೇಲೆ ಕೇಂದ್ರ ಸರ್ಕಾರದ ಗೆಜೆಟಿಯರ್, ರಾಜ್ಯ ಸರ್ಕಾರ ಮೈಸೂರು ಹಾಗೂ ಕರ್ನಾಟಕ ಗೆಜೆಟಿಯರ್ ಇದಲ್ಲದೇ ಸಾವಿರಾರು ದಾಖಲೆಗಳನ್ನು ಒಳಗೊಂಡ ಮಳಖೇಡ ಮೂಲ ವೃಂದಾವನದ ಬಗ್ಗೆ ಇಲ್ಲಸಲ್ಲದ ಅಪಾದನೆ ಮಾಡಿ ಅದನ್ನು ನವ ವೃಂದಾವನದಲ್ಲಿ ಸ್ಥಾಪಿಸಲು ಹೊರಟಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನವವೃಂದಾವನ ಗಡ್ಡೆಯಲ್ಲಿ 9 ಯತಿಗಳ ವೃಂದಾವನಗಳಿವೆ. ಈ 9 ವೃಂದಾವನಗಳಲ್ಲಿ ಶ್ರೀ ರಘುವರ್ಯ ತೀರ್ಥರ ಮೂಲವೃಂದಾವನವೂ ಒಂದು. ಶ್ರೀ ಜಯತೀರ್ಥರು ಸಮಾಧಿಯಾದ ಸುಮಾರು 200 ವರ್ಷಗಳ ಅನಂತರ ಬಂದಿರುವ ಶ್ರೀ ರಘುವರ್ಯತೀರ್ಥರ ಸಮಾಧಿ ಸ್ಥಳವನ್ನೇ ಶ್ರೀ ಜಯತೀರ್ಥರ ಮೂಲ ವೃಂದಾವನ ಎಂಬುದಾಗಿ ಬಿಂಬಿಸುತ್ತ ಅಲ್ಲಿಯೇ ಆರಾಧನೆ ಮಾಡುವುದಾಗಿ ಘೋಷಣೆಯನ್ನು ಮಾಡಿದ್ದು, ಈ ವಿಷಯ ಧಾರವಾಡದ ಹೈಕೋರ್ಟ್ ಪೀಠದಲ್ಲಿ ವಿಚಾರಣೆಗೆ ಒಳಪಟ್ಟು ಜುಲೈ 5 ರಂದು ಏಕಸದಸ್ಯ ನ್ಯಾಯಪೀಠವು ಶ್ರೀ ರಘುವರ್ಯತೀರ್ಥರ ಮಹಿಮೊತ್ಸವಕ್ಕೂ ಹಾಗೂ ಜುಲೈ 8, 9, 10 –2023 ಈ ಮೂರು ದಿನಗಳ ಕಾಲ ಶ್ರೀ ಜಯತೀರ್ಥರ ಆರಾಧನೆಯನ್ನು ಮಾಡಲು ಆದೇಶವನ್ನು ನೀಡುರುವುದು ದೇಶ ವಿದೇಶದಾದ್ಯಂತ ಶ್ರೀ ಜಯತೀರ್ಥರ ಭಕ್ತವೃಂದಕ್ಕೆ ಅಪಾರವಾದ ನೋವನ್ನುಂಟು ಮಾಡಿದೆ. 650 ವರ್ಷಗಳಿದ ಇಲ್ಲದ ಸಮಸ್ಯೆಯನ್ನು ಕೆಲವೇ ಜನರ ಕಪೋಲ ಕಲ್ಪಿತ ವಾದವನ್ನು ಪುರಸ್ಕರಿಸಿದ್ದು, ನಿಜವಾಗಿ ಸಖೇದ ಆಶ್ಚರ್ಯವನ್ನು ಉಂಟುಮಾಡಿದೆ ಎಂದು ಆರೋಪಿಸಿದರು.

ಜಯತೀರ್ಥ ಭಕ್ತವೃಂದವು ಹೈಕೋರ್ಟ್ ಮೇಲೆ ವಿಶ್ವಾಸವನ್ನು ವ್ಯಕ್ತಮಾಡುತ್ತ ಸರ್ವ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ನ್ಯಾಯ ಒದಗಿಸಿ ಕೊಡಬೇಕೆಂದು ನ್ಯಾಯಾಲಯಕ್ಕೆ ಭಕ್ತವೃಂದ ಪ್ರಾರ್ಥಿಸುತ್ತದೆ ಎಂದರು.

ಧಾರವಾಡ, ಪುಣೆ, ರಾಯಚೂರು, ಯಾದಗಿರಿ, ಕಲಬುರಗಿ, ಲಾತೂರ್, ಹೈದರಾಬಾದ್, ಮುಂಬೈ ಮುಂತಾದ ಕಡೆಯಿಂದ ಆಗಮಿಸಿದ ಶ್ರೀ ಜಯತೀರ್ಥ ಭಕ್ತವೃಂದ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪಂಡಿತರು ಇದರಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT