ಗುರುವಾರ , ಮಾರ್ಚ್ 4, 2021
18 °C
ಹಳ್ಳಿಗಳಲ್ಲಿ ತಿಳಿವಳಿಕೆ, ನೀರಿನ ಕೊರತೆ; ನಗರದಲ್ಲಿ ಜಾಗದ ಸಮಸ್ಯೆ, ಘೋಷಣೆಗೆ ಸೀಮಿತ

‘ಬಯಲು’ ಶೌಚಾಲಯ ಮುಕ್ತವಾಗದ ಜಿಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯು 2018ರ ಅಕ್ಟೋಬರ್‌ನಲ್ಲಿ ‘ಬಯಲು’ ಶೌಚಾಲಯ ಮುಕ್ತ ಜಿಲ್ಲೆಯಾಗಿದೆ. ಆದರೆ ಇದು ಘೋಷಣೆಗೆ ಸೀಮಿತವಾಗಿದೆಯೇ ಹೊರತು ವಾಸ್ತವದಲ್ಲಿ ಆಗಿಲ್ಲ.

ಹಳ್ಳಿಗಳಲ್ಲಿ ಇಂದಿಗೂ ಜನರು ಶೌಚಕ್ಕೆ ಬಯಲನ್ನೇ ಆಶ್ರಯಿಸಿದ್ದಾರೆ. ಸಮರ್ಪಕ ನಿರ್ವಹಣೆ ಕೊರತೆಯಿಂದ ಶೌಚಾಲಯಗಳು ಬಾಗಿಲು ಮುಚ್ಚಿವೆ. ಹಲವು ಬಳಕೆಗೆ ಯೋಗ್ಯವಿಲ್ಲದಂತಾಗಿವೆ. ಜಿಲ್ಲೆಯಲ್ಲಿ ನೀರಿನ ಕೊರತೆಯಿಂದ ಬಯಲನ್ನೇ ನೆಚ್ಚಿಕೊಂಡಿದ್ದಾರೆ. 

ನಗರ ಪ್ರದೇಶಗಳಲ್ಲಿ ಜಾಗದ ಕೊರತೆಯಿಂದ ವೈಯಕ್ತಿಕ ಶೌಚಾಲಯ ನಿರ್ಮಾಣ ಸಾಧ್ಯವಾಗಿಲ್ಲ. ಹಳ್ಳಿಗಳಲ್ಲಿ ಈಗಲೂ ತಿಳಿವಳಿಕೆ ಕೊರತೆಯಿಂದ ಶೌಚಾಲಯ ನಿರ್ಮಾಣ ಮಾಡಿಕೊಂಡಿಲ್ಲ. ಇದಕ್ಕೆ ಪೂರಕವಾಗಿ ನೀರಿಲ್ಲದಿರುವುದು ಕೂಡ ಸಮಸ್ಯೆಯಾಗಿದೆ. ಯಾದಗಿರಿಯಲ್ಲಿ 8ರಿಂದ 10 ವಾರ್ಡ್‌ಗಳು ಗುಡ್ಡ ಪ್ರದೇಶದಲ್ಲಿ ಇರುವುದರಿಂದ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಮಸ್ಯೆಯಾಗಿದೆ. ಕೋಟೆ ಪ್ರದೇಶ ಹಾಗೂ ಬಯಲನ್ನೇ ನೆಚ್ಚಿಕೊಂಡಿದ್ದಾರೆ.

ನಗರದಲ್ಲಿ ಇಂದಿಗೂ ಮೂಢನಂಬಿಕೆಯಿಂದ ಶೌಚಾಲಯ ಬಳಕೆ ಮಾಡುತ್ತಿಲ್ಲ. ದೇವಸ್ಥಾನ ಪಕ್ಕದಲ್ಲಿದೆ. ಹೀಗಾಗಿ ನಾವು ಹೊರಗಡೆಯೇ ತೆರಳುತ್ತೇವೆ ಎಂದು ಹೇಳುತ್ತಾರೆ. ಅಲ್ಲದೆ ಕಟ್ಟಿರುವ ಶೌಚಾಲಯಗಳಲ್ಲಿ  ಸೌಕರ್ಯವಿಲ್ಲದೆ ಬಹಿರ್ದೆಸೆಗೆ ಬಯಲಿಗೇ ತೆರಳಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ. 

ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಮಹಿಳೆಯರು ಇಂದಿಗೂ ಸೂರ್ಯ ಮುಳುಗುವುದನ್ನೇ ಎದುರು ನೋಡುತ್ತಾರೆ. ಪುರುಷರು ರಸ್ತೆ ಬದಿಯಲ್ಲಿಯೇ ಶೌಚ ಮಾಡಿ ಗಲೀಜು ಮಾಡುತ್ತಾರೆ. ಇದು ಪ್ರಯಾಣಿಕರಿಗೆ ತೀವ್ರ ಮುಜುಗರ ಉಂಟು ಮಾಡುತ್ತಿದೆ.

ಶಹಾಪುರ ತಾಲ್ಲೂಕಿನಲ್ಲಿ 41, ಸುರಪುರ ತಾಲ್ಲೂಕಿನಲ್ಲಿ 42, ಯಾದಗಿರಿ ತಾಲ್ಲೂಕಿನಲ್ಲಿ 40 ಸೇರಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ 123 ಗ್ರಾಮ ಪಂಚಾಯಿತಿಗಳಿವೆ. ಯಾದಗಿರಿ ತಾಲ್ಲೂಕಿನಲ್ಲಿ 151 ಗ್ರಾಮ, ಶಹಾಪುರ ತಾಲ್ಲೂಕಿನಲ್ಲಿ 144, ಸುರಪುರ ತಾಲ್ಲೂಕಿನಲ್ಲಿ 171 ಗ್ರಾಮಗಳಿವೆ.  ಜಿಲ್ಲೆಯಲ್ಲಿ ಒಟ್ಟಾರೆ ಸಾಧನೆ ಶೇಕಡ 33. ಜಿಲ್ಲೆಯಲ್ಲಿ 1.23 ಲಕ್ಷ ಶೌಚಾಲಯಗಳಿದ್ದು, ಜಿಲ್ಲೆಗೆ 30ನೇ ರ್‍ಯಾಂಕ್ ಬಂದಿದೆ. 

ಯಾದಗಿರಿ ನಗರಸಭೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ 4, 776 ಅರ್ಜಿಗಳು ಬಂದಿವೆ. ಇದರಲ್ಲಿ 2,527 ಅರ್ಜಿ ಪರಿಶೀಲನೆಯಾಗಿದೆ. 1,858 ಅನುಮೋದಿಸಲಾಗಿದೆ. 175 ಅರ್ಜಿಗಳಿಗೆ ದಾಖಲೆಗಳು ಇಲ್ಲ. 380 ತಿರಸ್ಕಾರ ಮಾಡಲಾಗಿದೆ. 1,691 ಪರಿಶೀಲನೆಯಾಗಿಲ್ಲ. 1,726 ಉಪಯೋಗವಾಗುತ್ತಿವೆ. 

ಸುರಪುರದಲ್ಲಿ ಶೇಕಡ 20, ಗ್ರಾಮೀಣ ಪ್ರದೇಶದಲ್ಲಿ ಶೇಕಡ 80 ಬಯಲನ್ನೆ ಆಶ್ರಯಿಸಿದ್ದಾರೆ. ಇಲ್ಲಿ ಗುಡ್ಡ ಪ್ರದೇಶವಿದ್ದು, ಇಲ್ಲಿಗೆ ಹೆಚ್ಚಿನ ಜನರು ತೆರಳುತ್ತಾರೆ. ಅಲ್ಲದೆ ಮಹಿಳೆಯರು ಬಟ್ಟೆ ಶೌಚಾಲಯ ಉಪಯೋಗಿಸುತ್ತಾರೆ. 

ಶಹಾಪುರ ತಾಲ್ಲೂಕಿನಹಳ್ಳಿ ಪ್ರದೇಶ ಶೇಕಡ 60, ನಗರ ಪ್ರದೇಶದಲ್ಲಿ ಶೇಕಡ 50 ರಷ್ಟು ಬಯಲನ್ನೆ ಅವಲಂಬಿಸಿದ್ದಾರೆ. ರಸ್ತೆ ಬದಿ ಮತ್ತು ಬಯಲು ಪ್ರದೇಶವೇ ಶೌಚಾಲಯವಾಗಿದೆ. ನೀರಿದ್ದಲ್ಲಿ ನಿರ್ವಹಣೆ ಕೊರತೆ, ಕಟ್ಟವಿದ್ದಲ್ಲಿ ತಿಳಿವಳಿಕೆ ಕಡಿಮೆ ಇದೆ. 

ಕೆಂಭಾವಿ ಪುರಸಭೆಯಲ್ಲಿ ಒಟ್ಟು 2,588 ವೈಯಕ್ತಿಕ ಶೌಚಾಲಯಗಳಿವೆ. ಅದರಲ್ಲಿ 1,324 ಕಟ್ಟಡ ಮುಗಿದಿವೆ. ಉಳಿದವು ಹಣದ ಕೊರತೆಯಿಂದ ಸ್ಥಗಿತಗೊಂಡಿವೆ. ಸುಸಜ್ಜಿತ ಶೌಚಾಲಯಗಳು ಕಾಮಗಾರಿ ಮುಗಿದಿದ್ದು, ಪುರಸಭೆಗೆ ಹಸ್ತಾಂತರವಾಗಿಲ್ಲ. ನೀರು ಇಲ್ಲ. ಇದರಿಂದ ಬಯಲು ಶೌಚಾಲಯ ಈಗಲೂ ಬಳಕೆಯಲ್ಲಿದೆ.

ಕಕ್ಕೇರಾ ಪಟ್ಟಣದ 23 ವಾರ್ಡ್‌ಗಳಲ್ಲಿ ಒಟ್ಟು 687 ಶೌಚಾಲಯ ನಿರ್ಮಿಸಲಾಗಿದೆ. ಪ್ರತಿಯೊಂದು ಶೌಚಾಲಯವನ್ನು ಉಪಯೋಗಿಸುತ್ತಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಆದಪ್ಪ ಸುರಪುರಕರ್ ತಿಳಿಸಿದ್ದಾರೆ. 

ಗುರುಮಠಕಲ್ ಪುರಸಭೆಯಿಂದ 850 ವೈಯಕ್ತಿಕ ಶೌಚಾಲಯಗಳ ನಿರ್ಮಾಣಗೊಂಡಿವೆ. 36 ವೈಯಕ್ತಿಕ ಶೌಚಾಲಯಗಳ ಕಾಮಗರಿ ನಡೆಯುತ್ತಿದೆ. ಪಟ್ಟಣದಲ್ಲಿ ಸಮುದಾಯ ಶೌಚಾಲಯ 22, ಸಾರ್ವಜನಿಕ ಶೌಚಾಲಯ 2 ಇವೆ. ಇದರಲ್ಲಿ 15 ಸಮುದಾಯ ಶೌಚಾಲಯ, 2 ಸಾರ್ವಜನಿಕ ಶೌಚಾಲಯ ಕಾರ್ಯ ನಿರ್ವಹಿಸುತ್ತವೆ.

3,677 ಒಟ್ಟು ಮನೆಗಳಿವೆ. ಶೌಚಾಲಯಗಳಿಲ್ಲದ 886 ಮನೆಗಳನ್ನು ಗುರುತಿಸಿ ಪುರಸಭೆಯಿಂದ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಮಾಡುವ ಗುರಿ ಹೊಂದಲಾಗಿತ್ತು. ಈಗಾಗಲೇ 850 ಶೌಚಾಲಯಗಳ ಕಾಮಗಾರಿ ಪೂರ್ಣಗೊಂಡಿದೆ. 36 ಶೌಚಾಲಯಗಳ ಕೆಲಸ ನಡೆಯುತ್ತಿದೆ.

ಪ್ರತಿ ವಾರ್ಡ್‌ನಲ್ಲಿ ಒಂದರಂತೆ 22 ಸಮುದಾಯ ಶೌಚಾಲಯಗಳಿವೆ. ಒಂದು ಆರ್ಟಿಸಿ, ಒಂದು ಪುರಸಭೆಯ ಪಬ್ಲಿಕ್ ಶೌಚಾಲಯಗಳು ಸೇರಿ ಒಟ್ಟು 24 ಶೌಚಾಲಯಗಳಿವೆ. ಒಟ್ಟಾರೆಯಾಗಿ ನೋಡಿದಾಗ ಜಿಲ್ಲೆಯೂ ಬಯಲು ಶೌಚಾಲಯ ಮುಕ್ತವಾಗಿಲ್ಲ ಎಂದು ತಿಳಿದು ಬರುತ್ತಿದೆ.

*
ಯಾದಗಿರಿ ಗುಡ್ಡ ಪ್ರದೇಶವಿದ್ದರಿಂದ ಶೌಚಾಲಯ ನಿರ್ಮಾಣ ಸವಾಲಾಗಿದೆ. ಹಂತ ಹಂತವಾಗಿ ಶೌಚಾಲಯ ನಿರ್ಮಾಣ ಮಾಡಲಾಗುವುದು.
–ಸಂಗಮೇಶ ಪನಿಶೆಟ್ಟಿ, ಪರಿಸರ ಎಂಜಿನಿಯರ್, ನಗರಸಭೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು