ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ದೀಪಾವಳಿ ಹಬ್ಬಕ್ಕೆ ಬೆಲೆ ಏರಿಕೆ ಮಧ್ಯೆಯೂ ಖರೀದಿ ಭರಾಟೆ

ಹಬ್ಬಕ್ಕೆ ಪೂಜೆ ಸಾಮಗ್ರಿಗಳ ದರ ಹೆಚ್ಚಳ, ಚೆಂಡು ಹೂವಿಗೆ ಹೆಚ್ಚು ಬೇಡಿಕೆ
Last Updated 15 ನವೆಂಬರ್ 2020, 1:58 IST
ಅಕ್ಷರ ಗಾತ್ರ

ಯಾದಗಿರಿ: ದೀಪಾವಳಿ ಅಂಗವಾಗಿ ನಗರದ ಗಾಂಧಿ ವೃತ್ತದಲ್ಲಿ ವ್ಯಾಪಾರ ವಹಿವಾಟು ಶನಿವಾರ ಜೋರಾಗಿ ನಡೆಯಿತು. ಅಲ್ಲದೆ ನಗರದ ವಿವಿಧ ಪ್ರಮುಖ ವೃತ್ತಗಳಲ್ಲಿಯೂ ಹಣತೆ, ಹೂವು, ಹಣ್ಣು ವ್ಯಾಪಾರ ಭರ್ಜರಿಯಾಗಿ ನಡೆಯಿತು.

ಹಬ್ಬಕ್ಕೆ ಬೇಕಾಗಿರುವ ಸಾಮಗ್ರಿಗೆ ಗಣನೀಯವಾಗಿ ಬೆಲೆ ಏರಿಕೆಯಾಗಿದ್ದು, ಇದನ್ನು ಲೆಕ್ಕಿಸದೆ ಗ್ರಾಹಕರು ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.

ಭಾನುವಾರ ದೀಪಾವಳಿ ಅಮ್ಯಾವಾಸೆ ಇದ್ದು, ಪೂಜೆಗಾಗಿ ಶನಿವಾರವೂ ಭರ್ಜರಿ ಖರೀದಿ ನಡೆದಿತ್ತು. ಗಾಂಧಿ ವೃತ್ತದಲ್ಲಿ ಕೋವಿಡ್‌ ನಿಯಮ ಗಾಳಿಗೆ ತೂರಿ, ಪರಸ್ಪರ ಅಂತರ ಮರೆತು ಖರೀದಿಯಲ್ಲಿ ಗ್ರಾಹಕರು, ವ್ಯಾಪಾರಿಗಳು ತೊಡಗಿಸಿಕೊಂಡಿದ್ದರು. ಬಹುತೇಕ ಜನ ಮಾಸ್ಕ್‌ ಧರಿಸಿರಲಿಲ್ಲ.

ಸಂಚಾರ ದಟ್ಟಣೆ: ಗಾಂಧಿ ವೃತ್ತದಿಂದ ಮಹಾತ್ಮಗಾಂಧಿ ಮಾರುಕಟ್ಟೆವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ದ್ವಿಚಕ್ರ ವಾಹನಗಳನ್ನುಎಲ್ಲೆಂದರೆಲ್ಲೆ ನಿಲ್ಲಿಸಿದ್ದರಿಂದ ವ್ಯಾಪಾರಿಗಳು, ಗ್ರಾಹಕರು ಪರದಾಡಿದರು.

ಚೌಕಾಶಿಗೆ ಇಳಿದ ಗ್ರಾಹಕರು: ಹಬ್ಬದ ಅಂಗವಾಗಿ ಅಗತ್ಯ ವಸ್ತು ಸೇರಿದಂತೆ ಪೂಜೆ ಸಾಮಗ್ರಿಗಳು ಬೆಲೆ ಏರಿಕೆಯಾಗಿದ್ದವು. ಪ್ರಮುಖವಾಗಿ ಹೂವು, ಹಣ್ಣು, ಬಾಳೆ ದಿಂಡು, ಹಣತೆ ಖರೀದಿಸುವವರು ಚೌಕಾಶಿಗೆ ಇಳಿದಿದ್ದರು. ಬೆಲೆ ಕಡಿಮೆ ಮಾಡುವಂತೆ ಗ್ರಾಹಕರು ವ್ಯಾಪಾರಿಗಳಿಗೆ ದುಂಬಾಲು ಬೀಳುವುದು ಕಂಡು ಬಂತು.

ಹೂ, ಕಾಯಿಗೆ ಬೇಡಿಕೆ: ಹೂವಿಗೆ ತುಂಬಾ ಬೇಡಿಕೆ ಬಂದಿದೆ. ಅದರಲ್ಲೂ ಚೆಂಡು ಹೂವು ಕೆ.ಜಿಗೆ ₹200ಗೆ ಮಾರಾಟವಾಗುತ್ತಿದೆ. ಶುಕ್ರವಾರ ಇದೇ ಹೂವು ₹150ಗೆ ಕೆ.ಜಿ ಇತ್ತು. ಭಾನುವಾರ ಮತ್ತಷ್ಟು ಬೆಲೆ ಹೆಚ್ಚಾಗುವ ಸಂಭವವಿದೆ ಎಂದು ವ್ಯಾಪಾರಿ ಮಹಮ್ಮದ್‌ ಖಾಜಾ ತಿಳಿಸಿದರು.

ಮಲ್ಲಿಗೆ ಹೂವು ಕೆ.ಜಿ ₹1,200 ಇದ್ದು, ₹40ರಿಂದ ₹50ಗೆ ಒಂದು ಮೊಳ ಇದೆ.

ತೆಂಗಿನಕಾಯಿಗೂ ಹೆಚ್ಚಿನ ಬೇಡಿಕೆ ಇದೆ. ಸಣ್ಣ ಗಾತ್ರದ ಕಾಯಿಗೆ ₹20 ಇದ್ದು, ಗ್ರಾಹಕರು ಖರೀದಿಗೆ ಮುಗಿ ಬಿದ್ದಿದ್ದರು. ಬಾಳೆ ದಿಂಡು ಅನ್ನು ಗಾಂಧಿ ವೃತ್ತದ ಸುತ್ತಮುತ್ತ ವ್ಯಾಪಾರಕ್ಕೆ ಇಡಲಾಗಿತ್ತು. ಸಣ್ಣಗಾತ್ರದ ತೆಂಗಿನಕಾಯಿ ₹70, 50ಗೆ ಒಂದು ಮಾರಾಟವಾದವು. ತೆಂಗಿನ ಗರಿ ಜೋಡಿಗೆ ₹200 ರಂತೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರು. ಮಾವಿನ ಎಲೆ ಎರಡು ಚಿಕ್ಕ ಕೊಂಬುಗಳಿಗೆ ₹20 ಜೋಡಿಯಂತೆ ಮಾರಾಟ ಮಾಡುತ್ತಿದ್ದರು.ಬಾಳೆಹಣ್ಣು ಡಜನ್‌ಗೆ ₹40 ದರ ಇದೆ.

ನಗರದ ಸುಭಾಷ ಚಂದ್ರ ಬೋಸ್‌ ವೃತ್ತದ ಸಮೀಪದ ಬಾಳೆ ದಿಂಡು ಹಾಗೂ ತೆಂಗಿನ ಗರಿಗಳನ್ನು ಗುಡ್ಡೆಹಾಕಿ ವ್ಯಾಪಾರಕ್ಕೆ ಇಡಲಾಗಿತ್ತು.

ಸಿಹಿ ತಿನಿಸಿಗೂ ಬೇಡಿಕೆ: ಹಬ್ಬದ ಅಂಗವಾಗಿ ಸಿಹಿ ತಿನಿಸಿಗೂ ಬೇಡಿಕೆ ಹೆಚ್ಚಾಗಿದೆ. ಹೆಚ್ಚಾಗಿ ಪೇಡಾ ಮಾರಾಟವಾಗುತ್ತಿದ್ದು, ಕೆ.ಜಿಗೆ ₹400 ದರ ಇದೆ. ಇದರ ಜೊತೆಗೆ ಜೀಲೆಬಿಯೂ ಮಾರಾಟವಾಗುತ್ತಿದೆ. ಬೂಂದಿ ₹100 ಕೆ.ಜಿ, ಕಾರಾ ₹100 ಕೆ.ಜಿ ಇದೆ. ಖಾರಾ ಪದಾರ್ಥ ₹240ಗೆ ಕೆ.ಜಿ ಇದೆ.

***

ಚೆಂಡೂ ಹೂವು ನೆರೆಯ ಕಲಬುರ್ಗಿ, ವಿಜಯಪುರದಿಂದ ತಂದಿದ್ದೇವೆ. ದಿನದಿಂದ ದಿನಕ್ಕೆ ದರದಲ್ಲಿ ಏರಿಕೆಯಾಗುತ್ತಿದೆ
ಮಹಮದ್ ಖಾಜಾ, ಹೂವಿನ ವ್ಯಾಪಾರಿ

***

ನಿನ್ನೆ, ಮೊನ್ನೆಗಿಂತ ಶನಿವಾರ ವ್ಯಾಪಾರ ಚೆನ್ನಾಗಿದೆ. ಗ್ರಾಹಕರು ಮಣ್ಣಿನ ಹಣತೆ ತೆಗೆದುಕೊಂಡು ಹೋಗುತ್ತಿದ್ದಾರೆ ಮಹಾದೇವಮ್ಮ, ‌ಹಣತೆ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT