ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾದ ಹೊರಟೂರಿಗೆ ಇನ್ನೂ ಸಿಕ್ಕಿಲ್ಲ ಶುದ್ಧ ನೀರು

ಇದ್ದೂ ಇಲ್ಲದಂತಾದ ಕುಡಿಯುವ ನೀರಿನ ಘಟಕ; ಹದಗೆಟ್ಟ ಒಳರಸ್ತೆ, ಚರಂಡಿಗಳಿಂದ ಗ್ರಾಮಸ್ಥರು
Last Updated 15 ಫೆಬ್ರುವರಿ 2022, 3:40 IST
ಅಕ್ಷರ ಗಾತ್ರ

ವಡಗೇರಾ: ಕಲುಷಿತ ನೀರು ಸೇವನೆಯಿಂದ ಅನಾರೋಗ್ಯದಿಂದ ಬಳಲಿ, ನಿತ್ಯ ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ...

ತಾಲ್ಲೂಕಿನ ಹೊರಟೂರು ಗ್ರಾಮದ ಜನರು ನೀರಿನ ಸಮಸ್ಯೆ ಕುರಿತು ಹೇಳಿದ ಮಾತುಗಳಿವು.

ಈ ಗ್ರಾಮವು ಉಳ್ಳೆಸೂಗುರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಒಂದು ಸಣ್ಣ ಗ್ರಾಮವಾಗಿದೆ. ಸುಮಾರು 300 ಮನೆಗಳು ಹಾಗೂ 1500 ಜನಸಂಖ್ಯೆ ಇರುವ ಗ್ರಾಮದಲ್ಲಿ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿದೆ.

ಗ್ರಾಮದಲ್ಲಿ ಶುದ್ಧ ನೀರು ಸಿಗುತ್ತಿಲ್ಲ. ಕಲುಷಿತ ನೀರು ಸೇವನೆಯಿಂದ ಹೊಟ್ಟೆ ನೋವು, ಕಿಡ್ನಿ ಸ್ಟೋನ್ ಸೇರಿದಂತೆ ಹಲವು ರೋಗಗಳು ಬಾಧಿಸುತ್ತಿದ್ದು, ನಿತ್ಯ ಆಸ್ಪತ್ರೆಗೆ ಅಲೆದಾಡುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.

ಗ್ರಾಮದಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆಯ ವತಿಯಿಂದ 5 ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿದ್ದಾರೆ. ನಿರ್ವಹಣೆ ಕೊರತೆಯಿಂದಾಗಿ ಅದು ಇದ್ದೂ ಇಲ್ಲದಂತಾಗಿದೆ. ಹೀಗಾಗಿ ಜನರು ಬೋರ್‌ವೆಲ್ ನೀರಿನ ಮೋರೆ ಹೋಗುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎನ್ನುತ್ತಾರೆ ಗ್ರಾಮದ ಮುಖಂಡ ಮರಿಲಿಂಗಪ್ಪ.

ಗ್ರಾಮದ ಪರಿಶಿಷ್ಟ ಜಾತಿ ಓಣಿಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಚರಂಡಿಯಲ್ಲಿ ಹರಿಯಬೇಕಾದ ಮಲಿನ ನೀರು ರಸ್ತೆ ಮೇಲೆ ಹರಿದು ದುರ್ನಾತ ಬೀರುತ್ತಿದೆ. ಇದರಿಂದ ನಿವಾಸಿಗಳು ಸೊಳ್ಳೆಗಳ ಕಾಟದಿಂದ ಸಾಂಕ್ರಾಮಿಕ ರೋಗಗಳ ಭೀತಿ ಅನುಭವಿಸುತ್ತಿದ್ದಾರೆ.

ಗ್ರಾಮದ ಒಳರಸ್ತೆಗಳು ಹಾಗೂ ಚರಂಡಿ ಸಮರ್ಪಕವಾಗಿಲ್ಲ. ಈ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.

ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಶುದ್ಧ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದುಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ರಾಹುಲ್ ತಿಳಿಸಿದರು.

*ಹೊರಟೂರು ಗ್ರಾಮದ ನೀರಿನ ಸಮಸ್ಯೆ ಕುರಿತು ಈಗಾಗಲೇ ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ.ಅವರು ಬಂದು ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. ಪಿಡಿಒ ಅವರ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸಲಾಗುತ್ತದೆ

- ಭಾಗ್ಯಶ್ರೀ ಪಾಟೀಲ, ಗ್ರಾ.ಪಂ.ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT