ಬುಧವಾರ, ನವೆಂಬರ್ 13, 2019
28 °C

ಅಯೋಧ್ಯೆ ತೀರ್ಪು: ಸಾಮರಸ್ಯ ಕಾಪಾಡಲು ಡಿವೈಎಸ್ಪಿ ಸಲಹೆ

Published:
Updated:
Prajavani

ಯಾದಗಿರಿ: ‘ದೇಶದಲ್ಲಿ ಎಲ್ಲ ಧರ್ಮಗಳ ಜನತೆ ಪ್ರೀತಿ, ವಿಶ್ವಾಸ, ಸಾಮರಸ್ಯದಿಂದ ಬಾಳುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವರು ಸಮಾಜದಲ್ಲಿ ಪ್ರಚೋದನೆ ನೀಡಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಜನತೆ ಅದಕ್ಕೆ ಕಿವಿಗೊಡದೆ ಸಾಮರಸ್ಯ ಕಾಪಾಡಬೇಕು’ ಎಂದು ಡಿವೈಎಸ್ಪಿ ಶರಣಪ್ಪ ಹೇಳಿದರು.

ಗುರುವಾರ ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈದ್ ಮೀಲಾದ ಹಾಗೂ ಅಯೋಧ್ಯೆ ಬಾಬ್ರಿ ಮಸೀದಿ ಕುರಿತು ಸುಪ್ರೀಂ ಕೋರ್ಟ್‌ ನೀಡುವ ತೀರ್ಪು ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

‘ಕೋರ್ಟ್‌ ಏನೇ ತೀರ್ಪು ನೀಡಿದರೂ ಎಲ್ಲ ಸಮಾಜದವರು ಅದನ್ನು ಗೌರವಿಸಬೇಕು. ಯಾರೂ ಪಟಾಕಿ ಸಿಡಿಸಬಾರದು. ಮೆರವಣಿಗೆ ನಡೆಸಕೂಡದು’ ಎಂದು ಕಿವಿ ಮಾತು ಹೇಳಿದರು.

‘ಸಮಾಜದಲ್ಲಿರುವ ಕೆಲ ಯುವಕರು ಜನರಲ್ಲಿ ಗೊಂದಲ, ಆತಂಕ ಮೂಡಿಸಲು ಮೊಬೈಲ್ ಮೂಲಕ ಪ್ರಚೊದನೆ ನೀಡುವ ಸಂದೇಶಗಳನ್ನು ಹರಿಬಿಡುತ್ತಾರೆ. ಅದಕ್ಕೆ ಯಾರೂ ಕಿವಿಗೊಡಬಾರದು. ಇಲಾಖೆ ಎಲ್ಲರ ಮೇಲೆ ವಹಿಸುತ್ತಿದೆ. ತಪ್ಪು ಕಂಡು ಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪಿಎಸ್‍ಐ ವೀರಣ್ಣ ಮಗ್ಗಿ ಮಾತನಾಡಿ, ‘ಈದ್ ಮಿಲಾದ್‌ ಹಬ್ಬವನ್ನು ಮುಸ್ಲಿಂಮರು ಪ್ರತಿ ವರ್ಷದಂತೆ ಶಾಂತಿ, ಸಾಮರಸ್ಯದಿಂದ ಆಚರಿಸಬೇಕು’ ಎಂದು ಮನವಿ ಮಾಡಿದರು.

ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿಜಯ ಪಾಟೀಲ, ಶರಣಪ್ಪ ಸಾಹುಕಾರ ಹತ್ತಿಕುಣಿ, ನರಸಪ್ಪ ಭೀಮನಹಳ್ಳಿ, ಬಾಬು ಇನಾಮದಾರ್, ತಿಪ್ಪೆಸ್ವಾಮಿ, ತಾಯಪ್ಪ ದುಗನೂರ ಇದ್ದರು.

 

ಪ್ರತಿಕ್ರಿಯಿಸಿ (+)