ಹತ್ತಿಕುಣಿ (ಯರಗೋಳ): ಇಲ್ಲಿನ ನಾಡ ಕಚೇರಿಗೆ ಕಳೆದ ಒಂದು ವಾರದಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಕಚೇರಿಗೆ ವಿವಿಧ ಪ್ರಮಾಣ ಪತ್ರ ಪಡೆಯಲು ಬರುತ್ತಿರುವ ಸಾರ್ವಜನಿಕರು ಮತ್ತು ಸಿಬ್ಬಂದಿಗೆ ಸಾಕಷ್ಟು ತೊಂದರೆ ಉಂಟಾಗಿದೆ.
ಗ್ರಾಮದ ಹೊರ ವಲಯದ ನಾಡ ಕಚೇರಿ ಹಲವು ಸಮಸ್ಯೆಗಳಿಂದ ಆವೃತ್ತವಾಗಿದೆ. ಕಚೇರಿ ವ್ಯಾಪ್ತಿಗೆ 32 ಕಂದಾಯ ಗ್ರಾಮಗಳು ಒಳಗೊಂಡಿದೆ. ಮಕ್ಕಳ ಶಾಲಾ– ಕಾಲೇಜು ದಾಖಲಾತಿ, ಜಮೀನು ಪತ್ರ ಸೇರಿದಂತೆ ಇತರೆ ಪ್ರಮಾಣ ಪತ್ರಕ್ಕಾಗಿ ನೂರಾರು ಜನರು ಭೇಟಿ ನೀಡಿ ಬರಿಗೈಲ್ಲಿ ಮರಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.
ಅತಿ ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರಕ್ಕಾಗಿ ವಾರದ ಹಿಂದೆ ಅರ್ಜಿ ಸಲ್ಲಿಸಿದ್ದೆ. ಇನ್ನೂ ಪ್ರಮಾಣ ಪತ್ರ ಕೈಸೇರಿಲ್ಲ. ಕಚೇರಿ ಸಿಬ್ಬಂದಿಗೆ ಕೇಳಿದರೆ ‘ಇಂಟರ್‌ನೆಟ್ ಸರಿಯಿಲ್ಲ, ಸರ್ವರ್ ಡೌನ್ ಆಗಿದೆ. ವಿದ್ಯುತ್ ಕಡಿತವಾಗಿದೆ’ ಎಂದು ನೆಪ ಹೇಳುತ್ತಾರೆ ಎಂದು ನೆರೆಯಬೆಳಗೇರಾ ಗ್ರಾಮದ ಹೊನ್ನೇಶ ಪೂಜಾರಿ ಹೇಳಿದರು.
ಕಚೇರಿಯ ಮುಂದೆ ನಿತ್ಯ ನೂರಾರು ಜನರು ಜಮಾಯಿಸುತ್ತಿದ್ದಾರೆ. ಇದರಲ್ಲಿ ಬಹುತೇಕರು ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲಾತಿಗೆ ಸಂಬಂಧಿಸಿದ ಪೋಷಕರೆ ಇರುತ್ತಾರೆ. ಬಿಸಿಲು, ಮಳೆ ಲೆಕ್ಕಿಸದೆ ಕಾದು–ಕಾದು ಬೈರಿಗೈಲಿ ವಾಪಸ್ ಹೋಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರಿದರು.
'15 ದಿನಗಳಿಂದ ಅಂಗವಿಕಲಕರ ಪ್ರಮಾಣ ಪತ್ರಕ್ಕಾಗಿ ಅಲೆಯುತ್ತಿದ್ದೇನೆ. ಸಿಬ್ಬಂದಿ ವಿದ್ಯುತ್ ಪೂರೈಕೆಯ ನೆಪ ಹೇಳಿ ಹಿಂದಕ್ಕೆ ಕಳುಹಿಸುತ್ತಿದ್ದಾರೆ ಎಂದು ಹೋರುಂಚ ಗ್ರಾಮದ ಹಣಮಂತ ತೊದಲುನೂರು ಅಲವತ್ತುಕೊಂಡರು.
ಕಲ್ಯಾಣ ಕರ್ನಾಟಕ, ವಾಸ ಸ್ಥಳ ಪ್ರಮಾಣ ಪತ್ರದ ಅರ್ಜಿ ಸಲ್ಲಿಸಿ 15 ದಿನ ಕಳೆದಿವೆ. ‘ವಿದ್ಯುತ್ ಸಂಪರ್ಕ ಇಲ್ಲ. ಈಗ ಪ್ರಮಾಣ ಪತ್ರ ಕೊಡಲು ಆಗುವುದಿಲ್ಲ’ ಎಂದು ಸಿಬ್ಬಂದಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎನ್ನುತ್ತಾರೆ ಗುಲಗುಂದಿ ತಾಂಡಾದ ಕಾಲೇಜು ವಿದ್ಯಾರ್ಥಿ.
ಜಾತಿ, ಮರು ವಿವಾಹ, ನಿವಾಸಿ, ವಾಸ ಸ್ಥಳ, ಕೃಷಿ ಕುಟುಂಬದಪತ್ರ, ಭೂರಹಿತ, ಸಣ್ಣ ರೈತ, ಕೃಷಿ ಕಾರ್ಮಿಕ, ವಿಶ್ವಾಸರ್ಹ, ಸಾಲ ಪಾವತಿ ದೃಢೀಕರಣ ಸಾಮರ್ಥ್ಯ, ಜನ ಸಂಖ್ಯಾ, ಆದಾಯ, ಕೆನೆ ಪದರರಹಿತ, ಅನುಕಂಪದ ಆದಾಯ, ಒಬಿಸಿ, ಜೀವಂತ, ಸರ್ಕಾರಿ ಕೆಲಸ, ನಿರುದ್ಯೋಗ, ವಿಧವಾ, ಕಲ್ಯಾಣ ಕರ್ಣಾಟಕ ಸೇರಿದಂತೆ ಹಲವು ಪ್ರಮಾಣ ಪತ್ರಗಳು ನಾಡ ಕಚೇರಿಯಲ್ಲಿ ನೀಡಲಾಗುತ್ತದೆ.
ಈಚೆಗೆ ಸುರಿದ ಗಾಳಿ ಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರ ದುರಸ್ತಿ ಕಾರ್ಯ ನಡೆಯುತ್ತಿದೆ. ಆದರಿಂದ ವಿದ್ಯುತ್ ಪೂರೈಕೆಯ ಸಮಸ್ಯೆ ಆಗುತ್ತದೆ. ಕೆಲವು ದಿನಗಳಲ್ಲಿ ನಾಡ ಕಚೇರಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಜೆಸ್ಕಾಂಯಾದಗಿರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ಪ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.