ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯಲ್ಲಿ ರೈತರ ಆಕ್ರೋಶ

ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ವಿವಿಧ ಸಂಘಟನೆಗಳ ಪ್ರತಿಭಟನೆ
Last Updated 29 ಸೆಪ್ಟೆಂಬರ್ 2020, 6:45 IST
ಅಕ್ಷರ ಗಾತ್ರ

ಶಹಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಮತ್ತುಎಪಿಎಂಸಿ ಕಾಯ್ದೆಗೆ ಹೊರಡಿಸಿರುವ ತಿದ್ದುಪಡಿ ಮಸೂದೆಗಳನ್ನು ಖಂಡಿಸಿ ರೈತ ಸಂಘಟನೆ, ಎಸ್.ಡಿಪಿಐ, ಕಾರ್ಮಿಕ ಸಂಘಟನೆಗಳು ಸೋಮವಾರ ನಡೆಸಿದ ಶಹಾಪುರ ಬಂದ್ ವಿಫಲವಾಗಿ ಪ್ರತಿಭಟನೆಗೆ ಸೀಮಿತಗೊಂಡಿತು.

ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಅಟೊ, ಜೀಪು, ಟಂಟಂ, ದ್ವಿಚಕ್ರ ವಾಹನ, ರಸ್ತೆ ಬದಿಯ ಅಂಗಡಿ, ಹೋಟೆಲ್, ರಸ್ತೆ ಸಾರಿಗೆ ಸಾಮಾನ್ಯವಾಗಿತ್ತು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ(ಎಸ್ಡಿಪಿಐ)ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ, ಸಿ.ಐ.ಟಿ.ಯು ಸಂಘಟನೆಯಗಳ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಮುಖಂಡರು ನಗರದ ಎಪಿಎಂಸಿ ಆವರಣದಲ್ಲಿ ಜಮಾವಣೆಗೊಂಡು ನಗರದ ಪ್ರಮಖ ರಸ್ತೆಯಲ್ಲಿ ಭೂ ಸುಧಾರಣೆ ತಿದ್ದುಪಡಿ ಮಸೂದೆ ಹಾಗೂ ಎಪಿಎಂಸಿ ಕಾಯ್ದೆಯ ತಿದ್ದುಪಡಿಯನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಸ್ತೆಯ ಮಧ್ಯದಲ್ಲಿ ರೈತರು ದೀರ್ಘದಂಡ ಹಾಕಿ ಆಕ್ರೋಶ ಹೊರ ಹಾಕಿದರು. ನಂತರ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡರು. ಅಲ್ಲದೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಸುಬೇದಾರ ನೇತೃತ್ವದಲ್ಲಿ ಕೇಶಮುಂಡನ ಮಾಡಿಸಿಕೊಂಡು ಸರ್ಕಾರಕ್ಕೆ ಛೀಮಾರಿ ಹಾಕಿದರು.

ಹೆದ್ದಾರಿ ಮೇಲೆ ಅಡುಗೆ ಸಿದ್ಧಪಡಿಸಿ ತಿಥಿ ಊಟವೆಂದು ಸೇವನೆ ಮಾಡಿ ತಮ್ಮ ಮನದಾಳದ ಸಿಟ್ಟು ರೈತ ಮುಖಂಡರು ಹೊರ ಹಾಕಿದರು. ನಂತರ ರೈತ ಮುಖಂಡರಾದ ಭಾಸ್ಕರರಾವ ಮುಡಬೂಳ, ಶರಣಪ್ಪ ಸಲಾದಪುರ, ಆರ್.ಚೆನ್ನಬಸ್ಸು ವನದುರ್ಗ, ಸಯ್ಯದ ಖಾಲಿದ ಹುಸೇನಿ, ಭೀಮಣ್ಣ ಶಖಾಪುರ, ಮೌನೇಶ ಹಳಿಸಗರ ಮಾತನಾಡಿ, ಭೂ ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರ ಪಾಲಿಗೆ ವರವಾಗದೆ ಶಾಪವಾಗಿದೆ. ರಾಜಕೀಯವಾಗಿ ನಾವು ವಿರೋಧಿಸುತ್ತಿಲ್ಲ. ರೈತರ ಹಿತದೃಷ್ಟಿಯಿಂದ ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡುವ ದುಸ್ಥಿತಿ ಬಂದಿದೆ. ನಮಗೆ ಬೇಕಾಗಿರುವುದು ಸ್ವಾಮಿನಾಥನ್ ವರದಿ ಜಾರಿಗೆ ವಿನಃ ಭೂ ಸುಧಾರಣೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ಅಲ್ಲ ಎಂದು ತಿಳಿಸಿದರು.

ಕಾರ್ಮಿಕ ಮುಖಂಡರಾದ ಜೈಲಾಲ ತೋಟದಮನೆ, ಮಲ್ಲಯ್ಯ ಪೊಲಂಪಲ್ಲಿ ಹಾಗೂ ರೈತ ಮುಖಂಡರಾದ ಗಿರೆಪ್ಪಗೌಡ ಬಾಣತಿಹಾಳ, ನೀಲಕಂಠ ಬಡಿಗೇರ, ಶಿವಕುಮಾರ ತಳವಾರ, ಮಹಾದೇವ ದಿಗ್ಗಿ, ಶರಣಗೌಡ ಮುಡಬೂಳ, ಶಿವರಡ್ಡಿ ಸಗರ, ಅಯ್ಯಾಳಪ್ಪ ಅಚಗೇರಿ, ಶಿವರಾಜ ಕಲಕೇರಿ, ಶಾಂತರಡ್ಡಿ ಪಾಟೀಲ್, ಹೇಮರಡ್ಡಿ ಕೊಂಗಂಡಿ, ಅಮರೇಶ ನಾಯಕ ಇಟಗಿ,ಶರಣಪ್ಪ ಕನ್ಯಾಕೊಳ್ಳುರ,ಭೀಮನಗೌಡ ಹುಲಕಲ್, ಅಮರೇಶ ದೇಸಾಯಿ, ಉಮೇಶ ಮುಡಬೂಳ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT