ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ನೀಡಿ ಸಂತ್ರಸ್ತರಾದ ಅನ್ನದಾತರು

3,232 ಎಕರೆ ಜಮೀನು ಭೂ ಸ್ವಾಧೀನ, ಉದ್ಯೋಗದ ಭರವಸೆಯೂ ಹುಸಿ
ಬಿ.ಜಿ.ಪ್ರವೀಣಕುಮಾರ
Published 14 ಫೆಬ್ರುವರಿ 2024, 6:04 IST
Last Updated 14 ಫೆಬ್ರುವರಿ 2024, 6:04 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಕಡೇಚೂರು ಮತ್ತು ಬಾಡಿಯಾಳ, ಶೆಟ್ಟಿಹಳ್ಳಿ ಗ್ರಾಮದಲ್ಲಿ ಕಳೆದ 2011ರಲ್ಲಿ 3,284 ಎಕರೆ ಜಮೀನು ಸುವರ್ಣ ಕಾರಿಡಾರ್ ಯೋಜನೆಗಾಗಿ ಭೂ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇಲ್ಲಿಯವರೆಗೆ ಬೃಹತ್ ಕೈಗಾರಿಕೆ ಕಂಪನಿಗಳು (ಥರ್ಮಲ್ ಮತ್ತು ಜವಳಿ ಪಾರ್ಕ್‌) ಸ್ಥಾಪನೆ ಮಾಡದೇ ಕೆಮಿಕಲ್ ಫ್ಯಾಕ್ಟರಿಗಳಿಗೆ ಮಾತ್ರ ಅನುಮತಿ ನೀಡಿದ ಪರಿಣಾಮ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

2011ರಲ್ಲಿ ಕೈಗಾರಿಕಾ ಪ್ರದೇಶವಾಗಿಸಲು ಜಮೀನು ಸ್ವಾಧೀನಪಡಿಸಿಕೊಳ್ಳಲಾಯಿತು. ಸುಮಾರು 13 ವರ್ಷಗಳಾದರೂ ಭೂಮಿ ಕಳೆದುಕೊಂಡ ಸಾವಿರಾರು ರೈತರಿಗೆ ಸೂಕ್ತ ಪರಿಹಾರ ಸರ್ಕಾರ ನೀಡಿಲ್ಲ. ಉದ್ಯೋಗವೂ ನೀಡಿಲ್ಲ. ಉದ್ಯೋಗದ ಭರವಸೆಯೂ ಹುಸಿಯಾಗಿದೆ. ಅತ್ತ ಜೀವನಕ್ಕೆ ಆಧಾರವಾಗಿದ್ದ ಭೂಮಿ ಇಲ್ಲವಾಗಿದೆ. ಹೊಲದಲ್ಲಿ ಬರುವ ಗಿಡ, ಮರ, ಬಾವಿ, ಪೈಪ್‌ಲೈನ್, ಬೋರವೆಲ್‌ಗಳಿಗೂ ಪರಿಹಾರ ನೀಡಲು ಅವಕಾಶವಿದೆ. ಆದರೆ, ಇದುವರೆಗೆ ಪರಿಹಾರ ನೀಡಿಲ್ಲ.

ಕಲ್ಯಾಣಿ ಸ್ಟಿಲ್ಸ್‌, ಕೋಕಾ ಕೋಲಾ ಕಾರ್ಖಾನೆ, ಜವಳಿ ಪಾರ್ಕ್‌, ಫಾರ್ಮಾ ಸುಟಿಕಲ್ಸ್ ಪಾರ್ಕ್‌ ಮತ್ತು ಇನ್ನಿತರ ಬೃಹತ್‌ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೂ ಇಲ್ಲಿಯವರೆಗೆ ಇವು ಭರವಸೆಯಾಗೇ ಉಳಿದಿವೆ.

ಸರ್ಕಾರದಿಂದ ಸೂಕ್ತ ಪರಿಹಾರವೂ ದೊರೆಯದೇ ರೈತರ ಜೀವನ ನಿರ್ವಹಣೆ ಕಷ್ಟವಾಗಿದೆ. ಭೂಮಿ ಕಳೆದುಕೊಂಡವರಿಗೆ ಪ್ರತಿ ಎಕರೆಗೆ ₹6 ಲಕ್ಷ ನೀಡಲಾಗಿದೆ. ಇದು ಅತ್ಯಂತ ಕಡಿಮೆ ಪ್ರಮಾಣದ ಪರಿಹಾರದ ಹಣವಾಗಿದೆ. ರಾಜ್ಯದಲ್ಲಿ ಎಲ್ಲಿಯೂ ಇಷ್ಟು ಕಡಿಮೆ ಪ್ರಮಾಣದ ಹಣ ನೀಡಿಲ್ಲ. ಆದ್ದರಿಂದ ಹೆಚ್ಚಿನ ಹಣ ನೀಡಬೇಕು ಎನ್ನುವುದು ಸಂತ್ರಸ್ತರ ರೈತರ ಆಗ್ರಹವಾಗಿದೆ.

ವಿಷಯುಕ್ತ ಗಾಳಿ: ಭೂ ಸ್ವಾಧೀನ ಮಾಡಿಕೊಂಡಿದ್ದು, ಜವಳಿ ಪಾರ್ಕ್‌ಗಾಗಿ. ಆದರೆ, ಕಡೇಚೂರು ಮತ್ತು ಬಾಡಿಯಾಳ, ಶೆಟ್ಟಿಹಳ್ಳಿ ಗ್ರಾಮದಲ್ಲಿ ವಿಷಪೂರಿತ ವಾಯುಮಾಲಿನ್ಯ ಹಾಳು ಮಾಡುವಂತ ಕೆಮಿಕಲ್ ಫ್ಯಾಕ್ಟರಿಗಳಿಗೆ ಅನುಮತಿ ನೀಡಲಾಗಿದೆ. ಇದರಿಂದ ಗಾಳಿ, ನೆಲ, ಜಲ ವಿಷಯವಾಗುತ್ತಿದೆ. ಇದರಿಂದ ಜನ ಜೀವನ ನಿರ್ವಹಣೆ ಕಷ್ಟಕರವಾಗುತ್ತಿದೆ.

ಈ ಪ್ರದೇಶದಲ್ಲಿ ರಾಸಾಯನಿಕ ಕಂಪನಿಯ ವಿಷಪೂರಿತ ಕೆಮಿಕಲ್‌ನಿಂದ ಕಡೇಚೂರು ಹಳ್ಳದಲ್ಲಿ ಈ ಹಿಂದೆ ಮೀನುಗಳು ಸತ್ತಿವೆ. ಜಾನುವಾರುಗಳ ಆರೋಗ್ಯ ಹದಗೆಟ್ಟಿದೆ. ಇದರಿಂದ ಜನತೆ ಭಯಭೀತರಾಗಿದ್ದಾರೆ. ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ಸಮಯದಲ್ಲಿ ಅಂದಿನ ಜಿಲ್ಲಾಧಿಕಾರಿ ಸಾರ್ವಜನಿಕರ ಉದ್ದೇಶಕ್ಕಾಗಿ ಹೊರತು ಖಾಸಗಿ ಉದ್ದಿಮೆದಾರರಿಗೆ ಅನುಕೂಲ ಮಡಿಕೊಡುವ ಉದ್ದೇಶಕ್ಕೆ ಅಲ್ಲ ಎಂದು ಸಭೆಯಲ್ಲಿ ತಿಳಿಸಿದ್ದರು. ಆದರೆ, ವಾಸ್ತವದಲ್ಲಿ ಎಲ್ಲವೂ ಉಲ್ಟಾಪಲ್ಟಾ ಆಗಿದೆ ಎಂದು ಗ್ರಾಮಸ್ಥರು ಹೇಳುವ ದೂರಾಗಿದೆ.

ಕೈಗಾರಿಕೆಗಳು ಇಲ್ಲದ ಕಾರಣ ಜಿಲ್ಲೆಯಲ್ಲಿ ಗುಳೆ ಹೋಗುವುದು ಇನ್ನೂ ನಿಂತಿಲ್ಲ. ಬಸ್‌, ರೈಲ್ವೆ ನಿಲ್ದಾಣದಲ್ಲಿ ವಿವಿಧ ರಾಜ್ಯ ಮತ್ತು ಮಹಾನಗರಗಳಿಗೆ ತೆರಳುವುದು ಸಾಮಾನ್ಯವಾಗಿದೆ. ಉದ್ಯೋಗ ಸೃಷ್ಟಿಯಾಗದ ಕಾರಣ ಗುಳೆ ತೆರಳುವುದು ಅನಿವಾರ್ಯವೂ ಆಗಿದೆ.

ಈಗ ಸ್ಥಾಪಿಸಿರುವ ಕಂಪನಿಯಲ್ಲಿ ಟ್ರ್ಯಾಕ್ಟರ್ ಟಿಪ್ಪರ್ ಕ್ರಷರ್ ಜೆಸಿಬಿ ಇತರೆ ಯಾವುದೇ ನಿರ್ವಹಣೆ ಕೆಲಸಗಳು ಇದ್ದರೆ ಭೂಮಿ ಕಳೆದುಕೊಂಡವರಿಗೆ ಆದ್ಯತೆ ನೀಡಬೇಕು
ದಶರಥ ಮಂತ್ರಿ, ಶೆಟ್ಟಿಕೇರಾ ಗ್ರಾಮಸ್ಥ
ಇಲ್ಲಿಯವರೆಗೆ ಬಂದಿರುವ ಕೈಗಾರಿಕೆ ಕಂಪನಿಗಳು ಪರಿಸರ ವಾಯುಮಾಲಿನ್ಯ ಮಾಡುತ್ತಿವೆ. ಮುಂದೆಯಾದರೂ ಇಂಥ ಕಾರ್ಖಾನೆಗಳಿಗೆ ಅವಕಾಶ ಕೊಡಬಾರದು. ಈಗಾಗಲೇ ಚಾಲ್ತಿಯಲ್ಲಿರುವ ಕಂಪನಿಗಳ ಪರವಾನಗಿ ರದ್ದುಪಡಿಸಬೇಕು
ಹುಸೇನಪ್ಪ, ಕಡೇಚೂರು ಗ್ರಾಮಸ್ಥ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ 8 ಘಟಕಗಳು ಆರಂಭವಾಗಿವೆ. ನಾಲ್ಕೈದು ತಿಂಗಳಲ್ಲಿ ಹೆಚ್ಚಿನ ಕಂಪನಿಗಳು ಆರಂಭವಾಗಲಿದ್ದು ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ
ರೇಖಾ ಮ್ಯಾಗೇರಿ, ಕೈಗಾರಿಕಾ ಜಂಟಿ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT