ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕೃಷಿ ಉತ್ಪನ್ನ; ಲಾಭದಾಯಕ ಬೆಲೆ ಘೋಷಿಸಿ

Last Updated 10 ಸೆಪ್ಟೆಂಬರ್ 2021, 5:17 IST
ಅಕ್ಷರ ಗಾತ್ರ

ಯಾದಗಿರಿ: ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಉತ್ತರ ಪ್ರಾಂತ ಮುಖಂಡರು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿ ಮಾತನಾಡಿದ ಸಂಘದ ಉತ್ತರ ಕರ್ನಾಟಕ ಪ್ರಾಂತ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಮನಟಗಿ, ‘ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷಗಳಾಗಿವೆ. ರೈಲ್ವೆ, ರಸ್ತೆ, ವಿದ್ಯುನ್ಮಾನ ತಂತ್ರಜ್ಞಾನ ಮುಂದಾದ ಅನೇಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿದ್ದೇವೆ. ಆದರೆ, ಜೀವನಕ್ಕೆ ಅತ್ಯಾವಶ್ಯಕವಾಗಿ ಬೇಕಿರುವ ಆಹಾರ ಉತ್ಪಾದಿಸುವ ಕೃಷಿ ಕ್ಷೇತ್ರವು ದುಸ್ಥಿತಿಯತ್ತ ಸಾಗುತ್ತಿದೆ. 90ರ ದಶಕದಿಂದ ಇಲ್ಲಿಯವರೆಗೆ ದೇಶದಲ್ಲಿ 3.5 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕದ ವಿಷಯ ಎಂದರು.

ಒಂದೆಡೆ ಆತ್ಮಹತ್ಯೆ, ಇನ್ನೊಂದಡೆ ಪ್ರತಿ ವರ್ಷ ಕೃಷಿ ತ್ಯಜಿಸಿ ದುಡಿಯಲು ಮಹಾನಗರಗಳತ್ತ ವಲಸೆ ಹೋಗುತ್ತಿದ್ದಾರೆ. ವಲಸೆ ಹೋಗುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ರೈತರು ತಾವು ಬೆಳೆದ ಬೆಳೆಗೆ ವೆಚ್ಚ ಅಧಿಕವಾಗಿ ಪ್ರಕೃತಿ ವಿಕೋಪದಿಂದ ನಷ್ಟವಾಗಿ ಜೊತೆಗೆ ಲಾಭದಾಯಕ ಬೆಲೆ ಸಿಗದ ಕಾರಣಕ್ಕೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಅವರು ದೂರಿದರು.

ಬೇರೆ ಕ್ಷೇತ್ರಗಳಲ್ಲಿ ಉತ್ಪಾದಕರು ತಾವು ಉತ್ಪಾದಿಸುವ ಉತ್ಪನ್ನಗಳಿಗೆ ತಾವೇ ದರ ನಿಗದಿ ಮಾಡುತ್ತಾರೆ. ಆದರೆ, ರೈತನಿಗೆ ಮಾತ್ರ ಇದು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕೃಷಿ ಕ್ಷೇತ್ರ ಅವನತಿಗೊಂಡು ಆಹಾರ ಅಭಾವ ಉಂಟಾಗುತ್ತದೆ. ಈ ವ್ಯವಸ್ಥೆ ಸರಿಯಾಗಬೇಕಾದರೆ, ರೈತರಿಗೆ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಲಾಭದಾಯಕ ಬೆಲೆ ಸಿಗುವಂತಾಗಬೇಕು. ರೈತರಿಗೆ ಕೇವಲ ಬೆಂಬಲ ಬೆಲೆ ಘೋಷಿಸಿದರೆ ಸಾಲದು, ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಬೇಕು. ಖರೀದಿಸುವ ಗ್ಯಾರಂಟಿ ನೀಡಬೇಕು. ಘೋಷಿತ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಬಾರದು ಎಂದು ಒತ್ತಾಯಿಸಿದರು.

ಪ್ರತಿ ವರ್ಷ ಬೆಲೆ ಘೋಷಣೆಯು ಹಣದುಬ್ಬರ ದರಕ್ಕೆ ಅನುಗುಣವಾಗಿರಬೇಕು. ಮಂಡಿ ಒಳಗೆ ಮತ್ತು ಹೊರಗೆ ಘೋಷಿತ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸಿದರೆ ಶಿಕ್ಷಾರ್ಹವಾಗಿಸಬೇಕು. ಇಂಥ ಕಠಿಣ ಕಾನೂನುಗಳನ್ನು ಜಾರಿಗೊಳಿಸಲು ಪ್ರತಿಭಟನಾ ನಿರತರು ಪ್ರಧಾನ ಮಂತ್ರಿಗಳನ್ನುಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧಲಿಂಗಯ್ಯ ಹಿರೇಮಠ, ಹುಣಸಗಿ ತಾಲ್ಲೂಕು ಅಧ್ಯಕ್ಷ ರುದ್ರಗೌಡ ಗುಳಬಾಳ, ಮುಖಂಡರಾದ ಭೀಮನಗೌಡ ದದ್ದಲ ರಾಜನಕೋಳೂರ, ಸತ್ಯನಾರಾಯಣ ಪೋಲಂಪಲ್ಲಿ ಯಾದಗಿರಿ, ಸಿದ್ದಲಿಂಗಯ್ಯಸ್ವಾಮಿ ಕಲ್ಲದೇವಹಳ್ಳಿ, ನಿತೀನ ಜಿ.ಸೈದಾಪುರ, ಪ್ರಾಣೇಶ ಕುಲಕರ್ಣಿ, ನಿಂಗನಗೌಡ ಬಿರಾದಾರ, ಅಂಬಣ್ಣ ಹಸನಾಪುರ, ಹಂಪಣ್ಣ ಹೆಮ್ಮಡಗಿ, ತಿರುಪತಿ ಕಕ್ಕೇರಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT