ಶನಿವಾರ, ಫೆಬ್ರವರಿ 4, 2023
17 °C

ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ಆಗ್ರಹಿಸಿ ರೈತ ಸಂಘ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೇಂದ್ರ ಸರ್ಕಾರ ಹಿಂಪಡೆದ 3 ಕೃಷಿ ಕಾಯ್ದೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಡಿರುವ ವಿದ್ಯುತ್‌ ಖಾಸಗೀಕರಣ ಬಿಲ್ಲನ್ನು ಹಿಂಪಡೆಯಬೇಕು. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಕಾರ್ಯವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡಲಾಯಿತು.

ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಜಮಾಯಿಸಿದ ರೈತ ಸಂಘದ ಪದಾಧಿಕಾರಿಗಳು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡರು, ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು. ಕೂಡಲೇ ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ರೈತರ ಬೆಳೆಗಳಿಗೆ ಕಾನೂನಾತ್ಮಕವಾಗಿ ಬೆಲೆಯನ್ನು ನಿಗದಿಪಡಿಸಬೇಕು. ತರಕಾರಿ ಬೆಳೆಗೆ ಕೇರಳ ಮಾದರಿಯಲ್ಲಿ ಬೆಲೆ ನಿಗದಿಪಡಿಸಬೇಕು. ಭತ್ತ ಖರೀದಿ ಕೇಂದ್ರಗಳನ್ನು ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ಸ್ಥಾಪನೆ ಮಾಡಬೇಕು. ಸರ್ಕಾರವು ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಭತ್ತ ಮತ್ತು ಹತ್ತಿ ವ್ಯಾಪಾರಸ್ಥರು ತೂಕದಲ್ಲಿ ಮೋಸ ಮಾಡುತ್ತಿದ್ದು, ಜಿಲ್ಲೆಯ ಅಳತೆ ಮತ್ತು ಮೌಲ್ಯಮಾಪನ ಅಧಿಕಾರಿಗಳು ಪ್ರತಿಯೊಂದು ಖರೀದಿ ಕೇಂದ್ರಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಬೇಕು. ಜಿಲ್ಲೆಯಲ್ಲಿ ಮಳೆ ಹಾನಿಯಿಂದ ರೈತರು ಬೆಳೆದ ಭತ್ತಗಳಿಗೆ ಸರ್ಕಾರವು ಪರಿಹಾರಧನವನ್ನು ಪ್ರತಿ ಹೇಕ್ಟರ್‌ಗೆ ₹35 ಸಾವಿರ ನೀಡಬೇಕು ಎಂದು ಆಗ್ರಹಿಸಿದರು.

ವಿಮಾ ಕಂಪನಿಗಳು ರೈತರು ಬೆಳೆ ವಿಮೆ ಮಾಡಿಸಿಕೊಂಡು ಬೆಳೆಯ ಏಮೆ ನೀಡದೇ ಕಂಪನಿಯವರು ವಂಚನೆ ಮಾಡುತ್ತಿದ್ದಾರೆ. ಅಂತಹ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಇತ್ಯಾದಿ ಬೇಡಿಕೆ ಒಳಗೊಂಡ ಮನವಿ ಪ‍ತ್ರವನ್ನು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌ ಅವರಿಗೆ ಸಲ್ಲಿಸಲಾಯಿತು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಬಣ) ಜಿಲ್ಲಾಧ್ಯಕ್ಷ ಮಲ್ಲನಗೌಡ ಎಸ್‌ ಹಗರಟಗಿ, ರಾಜ್ಯ ಸಂಚಾಲಕ ನೂರ್‌ ಅಹಮದ್ ಯರಗೋಳ, ರಾಜ್ಯ ಕಾರ್ಯದರ್ಶಿ ಗುರುನಾಥ್ ಹದ್ದನೂರ, ಜಿಲ್ಲಾ ಗೌರವಾಧ್ಯಕ್ಷ ತಿಮ್ಮಾರೆಡ್ಡಿ ಕಂದುಕೂರ, ಉಪಾಧ್ಯಕ್ಷರಾದ ಸಂಗಣ್ಣ ಸಾಹು ಮುಡಬೂಳ, ವೆಂಕೋಬ ಕಟ್ಟಿಮನಿ, ಶಹಾಪುರ ತಾಲ್ಲೂಕು ಅಧ್ಯಕ್ಷ ದೇವೇಂದ್ರಪ್ಪ ಕೊಲಿಕರ್, ಯಾದಗಿರಿ ತಾಲ್ಲೂಕು ಅಧ್ಯಕ್ಷ ಮಹಿಪಾಲರೆಡ್ಡಿ ಕಟಗಿ ಶಹಾಪುರ, ವಡಗೇರಾ ತಾಲ್ಲೂಕು ಅಧ್ಯಕ್ಷ ಶೇಖಪ್ಪ ಕಾಡಂಗೇರ, ಸುರಪುರ ತಾಲ್ಲೂಕು ಅಧ್ಯಕ್ಷ ಹನುಮಂತರಾಯಗೌಡ ಪರಸನಹಳ್ಳಿ, ಯಾದಗಿರಿ ನಗರ ಘಟಕದ ಅಧ್ಯಕ್ಷ ಯಮನಪ್ಪ, ಕೆಂಭಾವಿ ಹೋಬಳಿ ಅಧ್ಯಕ್ಷ ಮಡಿವಾಳಪ್ಪಗೌಡ, ಜಿಲ್ಲಾ ಕೋಶಾಧ್ಯಕ್ಷ ಬಸರೆಡ್ಡಿ ಗೌಡ ಗಾಜರಕೋಟ, ಗುರುಮಠಕಲ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶರಣಪ್ಪ ಎಸ್ ಕಂದುಕೂರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು