ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ | ಮೆಣಸಿನಕಾಯಿ ಬೆಳೆ ಒಣಗುವ ಭೀತಿ

ವಿವಿಧ ಜಲ ಮೂಲಗಳತ್ತ ಮುಖ ಮಾಡುತ್ತಿರುವ ರೈತರು
ಭೀಮಸೇನರಾವ ಕುಲಕರ್ಣಿ
Published 7 ಜನವರಿ 2024, 6:24 IST
Last Updated 7 ಜನವರಿ 2024, 6:24 IST
ಅಕ್ಷರ ಗಾತ್ರ

ಹುಣಸಗಿ: ತಾಲ್ಲೂಕಿನಲ್ಲಿ ವಿವಿಧ ತಳಿಯ ಮೆಣಸಿನಕಾಯಿ ಬೆಳೆದ ರೈತರು ನೀರಿನ ಸಮಸ್ಯೆಯಿಂದಾಗಿ ಸಾಕಷ್ಟು ಪರದಾಟ ನಡೆಸುತ್ತಿದ್ದು, ಹಲವಾರು ಜಲಮೂಲಗಳ ಹುಡುಕಾಟದತ್ತ ಮೊರೆ ಹೋಗುತಿದ್ದಾರೆ.

ತಾಲ್ಲೂಕಿನ ರಾಜನಕೋಳೂರು ಗ್ರಾಮ ಒಂದರಲ್ಲಿಯೇ ಸುಮಾರು 200ಕ್ಕೂ ಹೆಚ್ಚು ಎರಕರೆ ಪ್ರದೇಶದಲ್ಲಿ ಸಿಜೆಂಟಾ, ಇಂಡೋ 5, ಬ್ಯಾಡಗಿ, ಕಡ್ಡಿ ಸೇರಿದಂತೆ ಇತರ ತಳಿಗಳ ಮೆಣಸಿನಕಾಯಿ ಬೆಳೆಯಲಾಗಿದ್ದು, ಸದ್ಯ ನೀರಿನ ಕೊರತೆಯಿಂದಾಗಿ ಮೆಣಸಿನಕಾಯಿ ಬೆಳೆದ ರೈತರು ಕಣ್ಣೀರು ಸುರಿಸುವಂತಾಗಿದೆ.

ರಾಜನಕೋಳುರು ಗ್ರಾಮದ ಸುರಂಗ ಮಾರ್ಗದ ಬಳಿ ಕಾಲುವೆಯಲ್ಲಿ ಅಲ್ಪ ಪ್ರಮಾಣದ ನೀರು ಇದ್ದು, ಈ ಪ್ರದೇಶ ಜಮೀನುಗಳ ರೈತರು ಕಾಲುವೆ ಪಕ್ಕದಲ್ಲಿ ಆಳದ ಬಾವಿ ಕೊರೆದು ಅಲ್ಲಿಂದ ಬಸಿ ನೀರನ್ನು ತಮ್ಮ ಹೊಲಗಳಿಗೆ ಹರಿಸುವ ಹರಸಾಹಸ ಪಡುತ್ತಿದ್ದಾರೆ.

ಜಮೀನುಗಳ ರೈತರು ಬಾವಿಯಿಂದ ಮತ್ತೆ ಚಿಕ್ಕ ಕಾಲುವೆಗೆ ನೀರನ್ನು ಹರಿಸಿ ಮೆಣಸಿನಕಾಯಿಗೆ ನೀರು ಕೊಡುವ ಪ್ರಯತ್ನದಲ್ಲಿದ್ದರೂ ನೀರು ಲಭ್ಯವಾಗುತ್ತಿಲ್ಲ.

ಜಲಮೂಲ ಲಭ್ಯವಿಲ್ಲದಿರುವ ರೈತರು ಬೆಳೆಯನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರು ಹರಿಸಲು ಮುಂದಾಗಿದ್ದಾರೆ. ಈಗಾಗಲೇ ಹುಣಸಗಿ ಪಟ್ಟಣದಲ್ಲಿ ಒಬ್ಬ ರೈತ 10ಕ್ಕೂ ಹೆಚ್ಚು ಟ್ಯಾಂಕರ್‌ಗಳ ಮೂಲಕ ತಮ್ಮ ಮೆಣಸಿನಕಾಯಿ ಹೊಲಕ್ಕೆ ನೀರು ಹರಿಸಿ ಬೆಳೆ ರಕ್ಷಣೆಗೆ ಮುಂದಾಗಿದ್ದಾರೆ. ಇನ್ನೂ ರಾಜನಕೋಳೂರು ಗ್ರಾಮದಲ್ಲಿ 4 ಎಕರೆ ಪ್ರದೇಶದಲ್ಲಿ ಬೆಳದಿರುವ ಮೆಣಸಿನಕಾಯಿಗೆ ನಿತ್ಯ ಹತ್ತಾರು ಟ್ಯಾಂಕರ್‌ಗಳ ನೀರನ್ನು ಹರಿಸುತ್ತಿರುವುದಾಗಿ ರೈತ ಯಂಕನಗೌಡ ವಠಾರ ಹೇಳಿದರು.

ಕಾಲುವೆ ನೀರನ್ನು ನಂಬಿಕೊಂಡು ಆಗಸ್ಟ್‌ ಮೊದಲ ವಾರದಲ್ಲಿಯೇ ಸುಮಾರು 200 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಕೃಷಿ ಮಾಡಲು ಮುಂದಾದೆವು. ಅದರಂತೆ ಜೂನ್ ಕೊನೆಯ ವಾರದಲ್ಲಿಯೇ ಸಸಿಗಾಗಿ ಸಿದ್ಧತೆ ಮಾಡಿಕೊಂಡು ಆಗಸ್ಟ್‌ ಮೊದಲ ವಾರದಲ್ಲಿ ಕಾಲುವೆಗೆ ನೀರು ಬಂದ ತಕ್ಷಣ ಎರೆ ಭೂಮಿಯಲ್ಲಿ ಮೆಣಸಿನಕಾಯಿ ಕೃಷಿ ಮಾಡಲಾಗಿದೆ. ಸದ್ಯ ನೀರಿನ ಕೊರತೆ ಎದುರಾಗಿದೆ. ಬೀಜ, ಗೊಬ್ಬರ, ಕಳೆ ತೆಗೆಯುವುದು, ಕ್ರಿಮಿನಾಶಕ ಸಿಂಪಡಣೆ ಹೀಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಇನ್ನೇನು ಎರಡು ಬಾರಿ ನೀರು ಹರಿಸಿದರೇ ಎಲ್ಲ ಬೆಳೆ ನಮ್ಮ ಕೈಗೆ ಬರಲಿದೆ. ನೀರಿಲ್ಲದಿದ್ದಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಲಿದೆ ಎಂದು ಅಲವತ್ತುಕೊಂಡರು.

ಆರಂಭದಿಂದ ಇಲ್ಲಿಯವರೆಗೂ ನಮ್ಮ ಜಮೀನುಗಳಲ್ಲಿ ಬೆಳೆಯಲಾಗಿರುವ ಮೆಣಸಿನಕಾಯಿ ಚೆನ್ನಾಗಿ ಬಂದಿದೆ. ಧಾರಣೆ ಕೂಡ ಚೆನ್ನಾಗಿದೆ. ನೀರು ಲಭ್ಯವಾದಲ್ಲಿ ಎಕರೆಗೆ 10 ರಿಂದ 15 ಕ್ವಿಂಟಲ್ ಇಳುವರಿ ಬರುತ್ತದೆ. ಆದರೆ ನೀರಿಲ್ಲದಿದ್ದರೆ ಕೇವಲ 2 ರಿಂದ 3 ಕ್ವಿಂಟಲ್ ಮಾತ್ರ ಬರಲಿದೆ ಎಂದು ಗುರಣ್ಣಗೌಡ ಸಾಲವಾಡಗಿ ನೊಂದು ನುಡಿದರು.

ಯಂಕನಗೌಡ ವಠಾರ
ಯಂಕನಗೌಡ ವಠಾರ
ತಿಂಗಳಲ್ಲಿ ಎರಡು ಮೂರು ದಿನ ನೀರು ಬಂದರೂ ನಮ್ಮ ಮೆಣಸಿನಕಾಯಿ ಬೆಳೆ ಕೈ ಸೇರಲಿದೆ. ಇಲ್ಲದಿದ್ದಲ್ಲಿ ಲಕ್ಷಾಂತರ ರೂಪಾಯಿ ಹಾನಿಯಾಗಲಿದೆ
ಯಂಕನಗೌಡ ವಠಾರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT