ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೆ ಕಾಡುವ ಮೇ 12ರ ದುಸ್ವಪ್ನ

ಸಂಪೂರ್ಣ ಲಾಕ್‌ಡೌನ್‌ ವೇಳೆ 45 ದಿನ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆ
Last Updated 12 ಮೇ 2021, 5:31 IST
ಅಕ್ಷರ ಗಾತ್ರ

ಯಾದಗಿರಿ: ಅದು 2020 ರ ಮೇ 12 ರ ಬೆಳಿಗ್ಗೆ ಪೊಲೀಸರು ಮೈಕ್‌ನಲ್ಲಿ ಕೂಗಿ ಹೇಳುತ್ತಿದ್ದರು. ಜಿಲ್ಲೆಯಲ್ಲಿ ಇಬ್ಬರಿಗೆ ಕೋವಿಡ್‌ ಪತ್ತೆಯಾಗಿದೆ. ಹೀಗಾಗಿ ಎಲ್ಲರೂ ಎಚ್ಚರಿಕೆಯಾಗಿರಿ ಎಂದು ತಿಳಿಸುತ್ತಿದ್ದರು. ಕೇಂದ್ರ ಸರ್ಕಾರ ಸಂಪೂರ್ಣ ಲಾಕ್‌ಡೌನ್‌ ಹೇರಿದ್ದ ನಂತರವೂ 45 ದಿನಗಳ ಹಸಿರು ವಲಯದಲ್ಲಿ ಜಿಲ್ಲೆ ಗುರುತಿಸಿಕೊಂಡಿತ್ತು.

ಅಲ್ಲಿಯ ತನಕ ಕೊರೊನಾಕ್ಕೆ ತಡೆ ಹಾಕಿದ್ದ ಜಿಲ್ಲಾಡಳಿತ ವಿವಿಧ ಕಡೆ ಚೆಕ್‌ಪೋಸ್ಟ್‌ಗಳನ್ನು ಹಾಕಿ ಕಡಿವಾಣ ಹಾಕಿತ್ತು. ಆದರೆ, ಮುಂಬೈನಿಂದ ಬಂದ ವಲಸೆ ಕಾರ್ಮಿಕರಿಂದ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಹೆಚ್ಚುತ್ತಾ ಸಾಗಿದವು.

ಕೊಡೆ ವ್ಯಾಪಾರಿಗಳಲ್ಲಿ ಸೋಂಕು: ಗುಜರಾತ್‌ಗೆ ತೆರಳಿ ಕೊಡ ವ್ಯಾಪಾರ ಮಾಡುತ್ತಿದ್ದ ಇಬ್ಬರು ದಂಪತಿಯಲ್ಲಿ ಮೇ 12ರಂದು ಕೋವಿಡ್ ಕಾಣಿಸಿಕೊಂಡಿತ್ತು. ಲಾರಿ ಮೂಲಕ ಬಂದಿದ್ದ ದಂಪತಿ ವಿಜಯಪುರದಿಂದ ಕಾರಿನಲ್ಲಿ ಬಂದಿದ್ದರು. ಮೊದಲಿಗೆ ಯಾರೂ ಅವರನ್ನು ಆ ಬಡಾವಣೆ ಸೇರಿಸಿಕೊಂಡಿರಲಿಲ್ಲ. ಆ ನಂತರ ಕೋವಿಡ್ ಕೇರ್ ಸೆಂಟರ್‌ಗೆ ದಾಖಲು ಮಾಡಲಾಗಿತ್ತು. ಅವರ ಗಂಟಲು ಮಾದರಿ ದ್ರವ ಪರೀಕ್ಷೆ ಮಾಡಿದಾಗ ಕೋವಿಡ್ ಇರುವುದು ಪತ್ತೆಯಾಗಿತ್ತು.‌ ಅಲ್ಲಿಂದ ಶುರುವಾದ ಕೊರೊನಾ ಆರ್ಭಟ ಈಗ20ಸಾವಿರಕ್ಕೂ ಹೆಚ್ಚಾಗಿದೆ. 118ಕ್ಕೂ ಹೆಚ್ಚು ಸಾವು ಆಗಿದೆ. ಇದು ಜಿಲ್ಲೆಯ ಮಟ್ಟಿಗೆ ದುಸ್ವಪ್ನವಾಗಿ ಉಳಿದುಕೊಂಡಿದೆ.

ಮೊದಲಿಗೆ ಗುಜರಾತ್‌ನ ಅಹಮದಾಬಾದ್‌‌ ನಗರದಿಂದ ನಂತರ ಥಾಣೆ, ಮುಂಬೈ ಮುಂತಾದ ಕಡೆಯಿಂದ ಬಂದವರಿಂದ ಕೋವಿಡ್‌ ದೃಢವಾಗಿತ್ತು. ಕೆಂಪು ವಲಯ, ಹಸಿರು ವಲಯದಿಂದ ಬಂದವರನ್ನು ಒಂದೇ ಕಡೆ ಕ್ವಾರಂಟೈನ್‌ ಮಾಡಿದ್ದರಿಂದ ಕೋವಿಡ್‌ ಹೆಚ್ಚಳವಾಗಿತ್ತು.
ಮೇ 23ರಂದು ಒಂದೇ 72 ಪ್ರಕರಣಗಳು ದೃಢಪಡುವ ಮೂಲಕ ಕೋವಿಡ್‌ ಪೀಡಿತರ ಸಂಖ್ಯೆ ಹೆಚ್ಚಳವಾಗಲು ಆರಂಭಿಸಿತು.

ಕೋವಿಡ್‌ ಬಗ್ಗೆ ಕಲ್ಪನೆಯೇ ಇಲ್ಲದ ಸಮಯದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕೇವಲ 10 ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆ ನಂತರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಾ ಹೊದಂತೆ ಹೊಸ ಜಿಲ್ಲಾಸ್ಪತ್ರೆಯನ್ನೇ ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಜಿಲ್ಲೆಯ ವಿವಿಧ ಶಾಲೆ, ಕಾಲೇಜು, ವಸತಿ ನಿಲಯಗಳಲ್ಲಿ ವಲಸೆ ಬಂದ ಕಾರ್ಮಿಕರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಮೊದಲಿಗೆ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಆ ನಂತರ 21 ದಿನವೂ ಸಾಂಸ್ಥಿಕ ಬಂಧನಕ್ಕೆ ಒಳಪಡಿಸಲಾಗಿತ್ತು. ಇಲ್ಲಿ ಊಟ, ನೀರು ಸರಿ ಇಲ್ಲದೆ ಹಲವಾರು ಪ್ರತಿಭಟನೆಗಳು ನಡೆದಿದ್ದವು.

‘ಕಳೆದ ವರ್ಷ ಕೋವಿಡ್‌ ಸಂದರ್ಭದಲ್ಲಿ ಯಾವುದೇ ಸೌಲಭ್ಯಗಳು ಇಲ್ಲದಿದ್ದರೂ ಕೋವಿಡ್‌ ರೋಗಿಗಳನ್ನು ಗುಣಪಡಿಸಲಾಗಿತ್ತು. ಈಗ ಎಲ್ಲ ಸೌಲಭ್ಯಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್‌ ಬಗ್ಗೆ ಯಾರೂ ನಿರ್ಲಕ್ಷ್ಯ ವಹಿಸಬೇಡಿ. ಎಲ್ಲರೂ ಸರ್ಕಾರ ನೀಡಿರುವ ನಿಯಮಗಳನ್ನು ಪಾಲಿಸಬೇಕು. ಜಿಲ್ಲೆಯಲ್ಲಿ ಅನೇಕರು ರೋಗ ಉಲ್ಬಣವಾದಗ ಆಸ್ಪತ್ರೆಗೆ ಬರುತ್ತಿದ್ದಾರೆ. ಇದು ಸರಿಯಲ್ಲ. ಸಣ್ಣ ಲಕ್ಷಣಗಳು ಕಾಣಿಸಿಕೊಂಡರೆ ಆಸ್ಪತ್ರೆಗೆ ಬಂದು ತೊರಿಸಿಕೊಂಡರೆ ಕೋವಿಡ್‌ ಪತ್ತೆ ಹಚ್ಚ ಬಹುದು. ಎಲ್ಲ ಮೀರಿದ ಮೇಲೆ ಬಂದರೆ ಸಮಸ್ಯೆ ಆಗುತ್ತದೆ.ಈಗ ಹಳ್ಳಿ ಹಳ್ಳಿಗಳಲ್ಲಿ ಕೋವಿಡ್‌ ಹಬ್ಬಿದೆ. ಹೀಗಾಗಿ ಯಾರೂ ನಿರ್ಲಕ್ಷ್ಯ ಮನೋಭಾವ ತೋರಿಸಬೇಡಿ ಎನ್ನುತ್ತಾರೆ’ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಪಾಟೀಲ.

‘ಕಳೆದ ತಿಂಗಳು ಲಸಿಕೆ ಪಡೆಯಲು ಆರೋಗ್ಯ ಕಾರ್ಯಕರ್ತರು ಮನೆಮನೆಗೂ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದರು. ಈಗ ಲಸಿಕೆ ಪೂರೈಕೆ ಕಡಿಮೆ ಇದೆ. ಆದರೆ, ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ 200 ಆಮ್ಲಜನಕಬೆಡ್‌ಗಳ ತಯಾರಿ ಮಾಡುತ್ತಿದ್ದೇವೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ 90 ಬೆಡ್‌ ಮಾಡಲಾಗಿದೆ. ಬೆಡ್‌ ಹೆಚ್ಚಳ ಮಾಡಿದ್ದು ನಮ್ಮ ಜಿಲ್ಲೆಯಲ್ಲಿಯೇ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌., ಮಾಹಿತಿ ನೀಡುತ್ತಾರೆ.

867, 868 ರೋಗಿಗಳ ಸಂಖ್ಯೆ!

ರಾಜ್ಯದಲ್ಲಿ ಆಗಿನ್ನೂ ಹೆಚ್ಚು ಕೋವಿಡ್‌ ಹರಡಿರಲಿಲ್ಲ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೋವಿಡ್‌ ಪತ್ತೆಯಾದ ಇಬ್ಬರಿಗೆ ಪಿ-867, ಪಿ-868 ಸಂಖ್ಯೆ ನೀಡಲಾಗಿತ್ತು. ಸುರಪುರದ 33 ವರ್ಷದ ಮಹಿಳೆ ಹಾಗೂ 38 ವರ್ಷದ ಪುರುಷನಲ್ಲಿ ಕೋವಿಡ್‌ ದೃಢಪಟ್ಟಿತ್ತು.

ಒಂದೇ ಕುಟುಂಬದ ಮೂವರು ಗುಜರಾತ್‌ನ ಅಹಮದಾಬಾದ್‌ಗೆ ಮಾರ್ಚ್ 21 ರಂದು ಕೊಡೆಗಳ ಖರೀದಿಗಾಗಿ ತೆರಳಿದ್ದರು. ಲಾಕ್‌ಡೌನ್ ವೇಳೆ ಅಲ್ಲಿಯೇ ಸಿಲುಕಿದ್ದರು. ಬಸ್‌, ರೈಲು ಬಂದು ಆಗಿದ್ದರಿಂದ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಅವರು ಮೂರು ದಿನಗಳ ಕಾಲ ಲಾರಿಯಲ್ಲಿ ಪ್ರಯಾಣ ಮಾಡಿ, ಮೇ 9 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹೆದ್ದಾರಿಯಲ್ಲಿ ಬಂದು ಇಳಿದಿದ್ದರು. ಅಲ್ಲಿಂದ ಕಾರಿನ ಮೂಲಕ ಸುರಪುರ ತಾಲ್ಲೂಕು ಜ್ವರ ತಪಾಸಣಾ ಕೇಂದ್ರಕ್ಕೆ ಬಂದು ಪರೀಕ್ಷೆ ಮಾಡಿಸಿಕೊಂಡಿದ್ದರು.

*ಕಳೆದ ಒಂದು ವರ್ಷದಲ್ಲಿ ಜಿಲ್ಲಾಸ್ಪತ್ರೆಯಿಂದ ಹಿಡಿದು ಈಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಕೋವಿಡ್‌ ಚಿಕಿತ್ಸೆ ನೀಡುತ್ತಿದ್ದೇವೆ. ಜನರು ಎಚ್ಚರಿಕೆಯಿಂದ ಇರಬೇಕು

ಡಾ.ಇಂದುಮತಿ ಪಾಟೀಲ, ಡಿಎಚ್‌ಒ

*ಜನರು ಲಾಕ್‌ಡೌನ್‌ ನಿಯಮ ಪಾಲನೆ ಮಾಡಬೇಕು. ಪಾಸಿಟಿವ್ ಬಂದು ಹೋಂ ಐಸೊಲೋಷನ್‌ನಲ್ಲಿದ್ದವರು ಮನೆಯಿಂದ ಹೊರಗಡೆ ಬರಬಾರದು. ಲಸಿಕೆ ಪಡೆಯದವರು ಪಡೆಯಲಿ

ಡಾ.ರಾಗಪ್ರಿಯಾ ಆರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT