ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ‘ಕೈ’‍ ಪಾಳಯದ ಹುರುಪು ಹೆಚ್ಚಿಸಿದ ಜಯ

Published 31 ಡಿಸೆಂಬರ್ 2023, 5:58 IST
Last Updated 31 ಡಿಸೆಂಬರ್ 2023, 5:58 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಹುಣಸಗಿ ಪಟ್ಟಣ ಪಂಚಾಯಿತಿಗೆ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭೂತಪೂರ್ವ ಜಯಗಳಿಸಿದ್ದು, ಕೈ ಪಾಳೆಯದ ಹುರುಪು ಹೆಚ್ಚಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದ ಬಳಿಕ ನಡೆದ ಮೊದಲ ಚುನಾವಣೆಯೂ ಇದಾಗಿತ್ತು ಎಂಬುದು ವಿಶೇಷ.

ಹುಣಸಗಿ 2018ರಲ್ಲಿ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿತ್ತು. ಅಂದಿನಿಂದ ಚುನಾವಣೆ ನಿಗದಿಯಾಗಿರಲಿಲ್ಲ.

ಪ್ರತಿಷ್ಠೆಯಾಗಿದ್ದ ಚುನಾವಣೆ

ಪಟ್ಟಣ ಪಂಚಾಯಿತಿ ಮೊದಲ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ಪ್ರತಿಷ್ಠೆಯಾಗಿ ಪರಿಣಮಿಸಿತ್ತು. ನಾಮಪತ್ರ ಸಲ್ಲಿಸುವ ಕೊನೆ ದಿನದ ವರೆಗೆ ಅಭ್ಯರ್ಥಿಗಳ ಬಗ್ಗೆ ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಕೆಲ ವಾರ್ಡ್‌ಗಳಲ್ಲಿ 10ಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದರು. ಇವೆಲ್ಲವನ್ನು ಗಣನೆಗೆ ತೆಗೆದುಕೊಂಡು ಕಾಂಗ್ರೆಸ್‌, ಬಿಜೆಪಿ ನಾಯಕರು ಹಗಲು–ರಾತ್ರಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಮಾಜಿ ಸಚಿವರಿಗೆ ಮುಖಭಂಗ

ಚುನಾವಣಾ ಫಲಿತಾಂಶ ಬಿಜೆ‍ಪಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. 16 ಸ್ಥಾನಗಳಲ್ಲಿ ಕೇವಲ 2 ಸ್ಥಾನ ಪಡೆದಿರುವುದು ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಅವರಿಗೆ ಮುಖಭಂಗ ತರುವಂತೆ ಆಗಿದೆ. ರಾಜ್ಯದಲ್ಲಿ ಹಾಲಿ ಕಾಂಗ್ರೆಸ್‌ ಸರ್ಕಾರ ಇರುವುದರಿಂದ ಸಹಜವಾಗಿ ಆಡಳಿತ ಪಕ್ಷಕ್ಕೆ ಹೆಚ್ಚು ಸ್ಥಾನ ಬಂದಿವೆ. ಆದರೂ ಬಿಜೆ‍ಪಿಗೆ ಅತಿಕಡಿಮೆ ಸ್ಥಾನ ಸಿಕ್ಕಿರುವುದು ಮುಖಂಡರಿಗೂ ಪಾಠ ಕಲಿಸಿದಂತೆ ಆಗಿದೆ. ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆ ಇರುವುದು ಒಂದೆಡೆಯಾದರೆ, ಬಿಜೆಪಿ ಶಾಸಕ ಸ್ಥಾನ ಕಳೆದುಕೊಂಡ ನಂತರ ಸೋಲಿನ ಮೇಲೆ ಸೋಲು ಆಘಾತ ನೀಡಿದೆ.

ಮುಂದಿನ ಲೋಕಸಭೆಗೆ ಎರಡು ಪಕ್ಷಗಳು ಸಿದ್ಧವಾಗುತ್ತಿದ್ದು, ಕಾಂಗ್ರೆಸ್‌ನಲ್ಲಿ ಈಗ ಹೆಚ್ಚು ಹುರುಪು ಕಾಣಿಸಿಕೊಂಡಿದೆ.

ಹಾಲಿ ಮಾಜಿ ಶಾಸಕರ ಮಧ್ಯೆ ಚುನಾವಣೆ

ಹುಣಸಗಿ ಪಟ್ಟಣ ಪಂಚಾಯಿತಿ ಚುನಾವಣೆ ಹಾಲಿ ಮಾಜಿ ಶಾಸಕರ ಮಧ್ಯೆ ಚುನಾವಣೆ ಎಂಬಂತೆ ಬಿಂಬಿತವಾಗಿತ್ತು. ಸುರಪುರ ಮತಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾಜಿ ಸಚಿವ ನರಸಿಂಹ ನಾಯಕ(ರಾಜೂಗೌಡ) ವಾರ್ಡ್‌ಗಳಲ್ಲಿ ಸಂಚಾರ ಮಾಡಿ ಪ್ರಚಾರ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿತ್ತು. ತಮ್ಮ ಅಭ್ಯರ್ಥಿಗಳನ್ನು ಕರೆದುಕೊಂಡು ಕೆಲ ವಾರ್ಡ್‌ ಸುತ್ತಾಡಿ ಮತ ಹಾಕುವಂತೆ ಮತದಾರರನ್ನು ಮನವೊಲಿಸಿದ್ದರು. ಈ ಮೂಲಕ ಪಟ್ಟಣ ಪಂಚಾಯಿತಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ನಾಯಕರು ಶ್ರಮ ಹಾಕಿದ್ದರು.

ನಿರ್ಣಾಯಕ ಮತಗಳ ವಿಗಂಡನೆ

ಬಿಜೆಪಿ ಸೋಲಲು ನಿರ್ಣಾಯಕ ಮತಗಳು ವಿಂಗಡಣೆಯಾಗಿದ್ದೇ ಸೋಲಿಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೂ ಗೆಲ್ಲಿಸುವ ಪ್ರಯತ್ನ ಮಾಡಲಿಲ್ಲ. ಕೆಲವರಿಗೆ ಉದ್ದೇಶಪೂರ್ವಕಾಗಿ ಸೋಲಲು ಕಾರಣರಾಗಿದ್ದಾರೆ. ಕೆಲವರು ಕೆಲವೇ ಅಂತರ ಮತಗಳಿಂದ ಸೋಲು ಅನುಭವಿಸುತ್ತಿದ್ದಾರೆ. ಎಲ್ಲರೂ ಸಂಘಟನಾತ್ಮಕವಾಗಿ ಕೆಲಸ ಮಾಡಿಲ್ಲ. ಇದರಿಂದ ಬಿಜೆ‍ಪಿ ಹಿನ್ನೆಡೆಯಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ವಿಶ್ಲೇಷಿಸಿದರು. ಜಾತಿ ಲಾಬಿ ಜೋರು: ಪಟ್ಟಣ ಪಂಚಾಯಿತಿಯಾಗಿದ್ದರೂ ಜಾತಿ ಲಾಬಿ ಜೋರಾಗಿತ್ತು. ಕೆಲ ವಾರ್ಡ್‌ಗಳಲ್ಲಿ ಇಂಥವರಿಗೆ ಟಿಕೆಟ್‌ ನೀಡಿದರೆ ಗೆಲ್ಲುತ್ತಾರೆ ಎಂದು ಅವರಿಗೆ ತಪ್ಪಿಸಿ ಡಮ್ಮಿ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ ಎನ್ನುವ ಆರೋಪಗಳು ಈಗ ಬಿಜೆ‍ಪಿ ಅಂಗಳದಲ್ಲಿ ಕೇಳಿ ಬರುತ್ತಿವೆ.

ಹುಣಸಗಿ ಪಟ್ಟಣದಲ್ಲಿ ನಡೆದ ಮೊದಲ ಚುನಾವಣಾ ಫಲಿತಾಂಶದಲ್ಲಿ 16 ಸ್ಥಾನಗಳಲ್ಲಿ 14 ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದು ಅತ್ಯಂತ ಸಂತಸ ತಂದಿದೆ
ರಾಜಾ ವೇಣುಗೋಪಾಲನಾಯಕ, ಕಾಂಗ್ರೆಸ್ ಮುಖಂಡ ಹುಣಸಗಿ
ನಮ್ಮ ಲೆಕ್ಕಾಚಾರದಲ್ಲಿ 13 ಸ್ಥಾನಗಳು ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇವು. ಆದರೆ ಇನ್ನೂ ಒಂದು ಸ್ಥಾನ ಹೆಚ್ಚು ಗೆಲ್ಲಿಸುವ ಮೂಲಕ ಪಟ್ಟಣದ ಜನತೆ ಬೋನಸ್ ನೀಡಿದ್ದಾರೆ.
ಚಂದ್ರಶೇಖರ ದಂಡಿನ್, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಹುಣಸಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT