ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿಯಲ್ಲಿ ಫ್ಲೆಕ್ಸ್, ಬ್ಯಾನರ್ ಹಾವಳಿ; ನಗರಸಭೆ ಪರವಾನಗಿ ಇಲ್ಲದೇ ಅಳವಡಿಕೆ

Last Updated 30 ಮೇ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಫ್ಲೆಕ್ಸ್, ಬ್ಯಾನರ್‌ಗಳಿಗೆ ಕಡಿವಾಣ ಬಿದ್ದಿಲ್ಲ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಎದುರಾಗಿದೆ.

ನಗರದ ಪ್ರಮುಖ ವೃತ್ತ, ರಸ್ತೆ ವಿಭಜಕಗಳ ಮೇಲೆ ಆಳೆತ್ತೆರದ ಫ್ಲೆಕ್ಸ್, ಬ್ಯಾನರ್‌ ಅಳವಡಿಸುತ್ತಿದ್ದು, ರಸ್ತೆ ತಿರುವಿನಲ್ಲಿ ವಾಹನ ಸವಾರರು ಎದುರಿನ ವಾಹನ ಕಾಣದೆ ತೊಂದರೆ ಅನುಭವಿಸುತ್ತಿದ್ದಾರೆ.

ಪ್ರತಿಯೊಂದು ಕಾರ್ಯಕ್ರಮಕ್ಕೂ ಜಾಹೀರಾತು ಅಳವಡಿಸುವ ಪರಿಪಾಠ ನಗರದಲ್ಲಿ ಬೆಳೆದುಬಂದಿದೆ. ಫ್ಲೆಕ್ಸ್‌ಗಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ತಮ್ಮ ನಾಯಕರನ್ನು ಮೆಚ್ಚಿಸುವ ಕೆಲಸವನ್ನು ಹಿಂಬಾಲಕರು ಮಾಡುತ್ತಿದ್ದಾರೆ.

ಜಾತ್ರೆ, ರಾಜಕೀಯ ಸಮಾರಂಭ, ರಾಜಕೀಯ ನಾಯಕರ ಜನ್ಮದಿನ, ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ನಗರಕ್ಕೆ ಆಗಮಿಸುವಾಗ ಹಾಗೂ ವಿವಿಧ ರಾಜಕೀಯ ಪಕ್ಷಗಳ ಸಮಾವೇಶದ ವೇಳೆ ಅತಿ ಹೆಚ್ಚು ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಅನೇಕರಿಗೆ ಕಿರಿಕಿರಿಯಾಗುತ್ತಿದೆ.

ಅಕ್ರಮಕ್ಕಿಲ್ಲ ಕಡಿವಾಣ: ನಗರ ಪ್ರದೇಶ ಗಳಲ್ಲಿ ಪರವಾನಗಿ ಇಲ್ಲದೇ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುವುದು ಸಾಮಾ ನ್ಯವಾಗಿದೆ. ಜಾಹೀರಾತು ಫಲಕಗ ಳಿಂದ ಬರುವ ಆದಾಯವನ್ನು ಖಾಸಗಿ ವ್ಯಕ್ತಿಗಳೇ ಪಡೆಯುತ್ತಿದ್ದಾರೆಯೇ ಹೊರತು ತೆರಿಗೆ ಪಾವತಿಸುತ್ತಿಲ್ಲ. ಅಲ್ಲದೇ ಇದರಿಂದ ಆಯಾ ಸ್ಥಳೀಯ ಸಂಸ್ಥೆಗಳಿಗೆ ಬರ ಬೇಕಾದ ವರಮಾನವೂ ಇಲ್ಲದಂತೆ ಆಗಿದೆ.

ನಗರಸಭೆ ಬಜೆಟ್‌ ಮಂಡಿಸು ವಾಗ ಜಾಹೀರಾತಿನಿಂದ ಲಕ್ಷಾಂತರ ಆದಾಯ ನಿರೀಕ್ಷಿಸಿದರೆ, ಅಧಿಕಾರಿ ಗಳ ನಿರ್ಲಕ್ಷ್ಯದಿಂದ ಸಾವಿರ ರೂಪಾಯಿ ಲೆಕ್ಕದಲ್ಲಿ ಹಣ ಬರುತ್ತಿರುವು ದರಿಂದ ಆದಾಯಕ್ಕೆ ಕೊಕ್ಕೆ ಬಿದ್ದಂತೆ ಆಗಿದೆ.

ನಗರ ಸೌಂದರ್ಯಕ್ಕೆ ಧಕ್ಕೆ: ಪ್ರಸ್ತುತ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ಅವರು ನಗರ ಸೌಂದರ್ಯೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಆದರೆ, ಎಗ್ಗಿಲ್ಲದೇ ನಡೆಯುತ್ತಿರುವ ದಂಧೆ ಯಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ.

ಕೆಲವು ಕಡೆ ಜಾಹೀರಾತು ತೆರವುಗೊಳಿಸದೆ ಹಾಗೇ ಬಿಟ್ಟಿದ್ದರಿಂದ ವಿದ್ಯುತ್‌ ಕಂಬಗಳಲ್ಲಿ ನೇತಾಡುತ್ತಿವೆ. ಅಧಿಕಾರಿಗಳ ಕಣ್ಣುತಪ್ಪಿಸಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ರಾತ್ರೋರಾತ್ರಿ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸಿ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ. ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಅಪಘಾತಕ್ಕೆ ಕಾರಣ: ನಗರದ ವಿವಿಧೆಡೆ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌ನಿಂದ ಸಣ್ಣಪುಟ್ಟ ಅಪಘಾತಗಳೂ ಸಂಭವಿ ಸುತ್ತಿವೆ. ರಸ್ತೆ ವಿಭಜಕ ಮತ್ತು ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಜಾಹೀರಾತಿನಿಂದ ವಾಹನ ಸವಾರರು ಫ್ಲೆಕ್ಸ್‌, ಬ್ಯಾನರ್‌ ನೋಡುತ್ತಾ ಪ್ರಯಾಣಿ ಸುವಾಗ ಅಪಘಾತಗಳು ನಡೆಯುತ್ತಿವೆ.

‍ಪರಿಸರಕ್ಕೆ ಮಾರಕವಾಗಿರುವ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಸರ್ಕಾರ ನಿಷೇಧಿಸಿದೆ. ಈ ಬಗ್ಗೆ ನ್ಯಾಯಾಲ ಯಗಳು ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡಿವೆ. ಆದರೂ ಅನಧಿಕೃತವಾಗಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸುವುದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ.

***

ಪರವಾನಗಿ ಇಲ್ಲದೇ ಜಾಹೀರಾತು ಮುದ್ರಿಸುವವರಿಗೆ ನೋಟಿಸ್‌ ನೀಡಲಾಗುವುದು. ಇನ್ಮುಂದೆ ಜಾಹೀರಾತು ಮುದ್ರಿಸುವವರ ವಿವರ ಜಾಹೀರಾತಿನಲ್ಲಿ ಹಾಕಬೇಕು.
–ಸುರೇಶ ಅಂಬಿಗೇರ, ನಗರಸಭೆ ಅಧ್ಯಕ್ಷ

***

ಬೇಕಾಬಿಟ್ಟಿ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದು, ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕು.
–ಚಂದ್ರಶೇಖರ್‌ ಆರ್‌ ದಾಸನಕೇರಿ, ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT