ಬುಧವಾರ, ಸೆಪ್ಟೆಂಬರ್ 22, 2021
27 °C
ಕಕ್ಕೇರಾ: ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಣೆಯಾಗದ ಕಾರಣ ಸಮಸ್ಯೆ; ಸಂಕಷ್ಟದಲ್ಲಿ ಅನ್ನದಾತರು

ಕಕ್ಕೇರಾ: ಬೆಳೆ, ಮನೆ ಹಾನಿ, ರೈತರಿಗೆ ಸಿಗದ ಪರಿಹಾರ

ಮಹಾಂತೇಶ ಸಿ. ಹೊಗರಿ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ಕಳೆದ ವರ್ಷ ಪ್ರವಾಹದಿಂದ ಮನೆ, ಬೆಳೆ ಹಾನಿ ಅನುಭವಿಸಿದ ಕೆಲವು ಸಂತ್ರಸ್ತರಿಗೆ ಇದುವರೆಗೂ ಪ‍ರಿಹಾರ ಸಿಕ್ಕಿಲ್ಲ.

ಕಕ್ಕೇರಾ, ಕೆಂಭಾವಿ ಹಾಗೂ ಸುರಪುರ ಸುತ್ತಮುತ್ತ ಬಹಳಷ್ಟು ಜನರು ಮನೆ ಹಾಗೂ ಬೆಳೆ ಹಾನಿ ಅನುಭವಿಸಿದ್ದರು. ಆದರೆ ಇವರಿಗೆ ಇನ್ನೂ ಪರಿಹಾರ ಬಂದಿಲ್ಲ. ಈಗ ಮತ್ತೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಆತಂಕದಲ್ಲಿದ್ದಾರೆ. ಈ ವರ್ಷವಾದರೂ ಪರಿಹಾರ ಸಿಗುವುದೆ ಎಂಬ ನಿರೀಕ್ಷೆಯಲ್ಲಿ ಅವರು ಇದ್ದಾರೆ.

ಕಕ್ಕೇರಾ ಪಟ್ಟಣದಲ್ಲಿ ಮನೆ ಹಾನಿಗೆ ಸಂಬಂಧಿಸಿದಂತೆ 60 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 38 ಅರ್ಜಿಗಳು ಸೂಕ್ತ ದಾಖಲೆಯಿಂದ ಕೂಡಿವೆ. ತಹಶೀಲ್ದಾರ್ ಕಚೇರಿಯಲ್ಲಿ ಈ ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಆದರೂ ಪರಿಹಾರ ಮಾತ್ರ ಸಿಕ್ಕಿಲ್ಲ.

ಮನೆ ನಂಬರ್, ಕರಪಾವತಿ ಇದ್ದ ಮನೆಗಳಿಗೆ ಮಾತ್ರ ಪರಿಹಾರ ನೀಡಲಾಗುವುದು. ಇಲ್ಲದಿದ್ದರೆ ಅಂಥ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹಾಗೆಯೆ ಬೆಳೆ ಹಾನಿ ಅನುಭವಿಸಿದ 451 ರೈತರಲ್ಲಿ 391 ಜನ ರೈತರಿಗೆ ₹36,42,826 ಪರಿಹಾರ ಅವರ ಖಾತೆಗಳಿಗೆ ಜಮಾ ಆಗಿದೆ. ಆಧಾರ್ ಅಥವಾ ಪಹಣಿಯಲ್ಲಿ ಹೆಸರು ತಿದ್ದುಪಡ್ಡಿ ಹೀಗೆ ಇನ್ನಿತರ ತಪ್ಪುಗಳಿಂದ ಉಳಿದ 60 ರೈತರಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ದೂರವಾಣಿ ಮೂಲಕ ಅವರಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಕರೆ ಮಾಡಿ ಸೂಕ್ತ ದಾಖಲೆ ನೀಡುವಂತೆ ಸೂಚಿಸಿದ್ದರೂ ಬಂದಿಲ್ಲ ಎಂದು ಕಕ್ಕೇರಾ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ದೇವಾಪುರ, ತಿಂಥಣಿ, ಆಲ್ದಾಳ, ದೇವತ್ಕಲ್ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ಮತ್ತು ಹಾನಿಯಾಗಿದ್ದು, 10 ತಿಂಗಳಿಂದ ಪರಿಹಾರ ಬಂದಿಲ್ಲ. ಈ ವರ್ಷವು ಹಾನಿಯಾಗಿದ್ದು, ಕೂಡಲೇ ಅಧಿಕಾರಿಗಳು, ಶಾಸಕರು ಸೂಕ್ತ ಪರೀಶಿಲಿಸಿ ಎಕರೆಗೆ ₹25 ಸಾವಿರ ಹಣ ನೀಡಬೇಕು ಎಂದು ತಿಂಥಣಿ ಗ್ರಾಮ ಪಂಚಾಯಿತಿ ಸದಸ್ಯ ಭೈರಣ್ಣ ಅಂಬಿಗರ ಮನವಿ ಮಾಡಿದ್ದಾರೆ.

ನೀರು ಹರಿಸಲು ಮನವಿ: 10 ವರ್ಷದಿಂದ ಜಮೀನುಗಳಿಗೆ ನೀರೇ ಕಂಡಿಲ್ಲ. ಮೊದಲು ನೀರು ನಿಧಾನವಾಗಿ ಹರಿದು ಬರುತ್ತಿತ್ತು. ತಿಂಗಳಿಗೆ ಒಂದು ಸಲ ನೀರು ಸಿಗಬೇಕಾದರೆ ಕಷ್ಟಕರವಾಗಿತ್ತು. , ಬೆಳೆ ಹಾಳಾಗಿ, ಜಾನುವಾರುಗಳಿಗೆ ಹಾಕಿದ್ದೇವೆ. ಮಳೆ ಬಂದರೆ ಬೆಳೆ. ಇಲ್ಲದಿದ್ದರೆ ಸುಮ್ಮನಿರಬೇಕಾದ ಪರಿಸ್ಥಿತಿಯಿದೆ ಎಂದು ಸ್ಥಳೀಯರಾದ ನಂದಪ್ಪ ಪೂಜಾರಿ ಬಿಂಗಿ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಈಗ ಭಾರಿ ಮಳೆಯಾಗುತ್ತಿರುವ ಕಾರಣ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದ್ದು, ಕೆಲವೆಡೆ ಜಮೀನುಗಳು ಜಲಾವೃತಗೊಂಡು ಬೆಳೆ ಹಾನಿ ಭೀತಿ ಎದುರಾಗಿದೆ. ಈಗಾಗಲೇ ಕೋವಿಡ್‌ನಿಂದ ಸಂಕಷ್ಟಕ್ಕೀಡಾದ ರೈತರಿಗೆ ‘ಪ್ರವಾಹ ಭೀತಿ’ ಮತ್ತಷ್ಟು ತೊಂದರೆಗೆ ಸಿಲುಕಿಸಿದೆ. ಕೂಡಲೇ ಕಳೆದ ವರ್ಷದ ಪರಿಹಾರ ಧನ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.