ಯಾದಗಿರಿ: ನದಿಯ ನೀರಿನ ಮೇಲೆ ಬದುಕು ಅವಲಂಬಿತರಿಗೆ ಪ್ರವಾಹದ ಹೊಡೆತದಿಂದ ನದಿಯ ನೀರೇ ಶಾಪವಾಗಿ ಪರಿಣಮಿಸುವುದರ ಜತೆಗೆ ನದಿ ತಟದ ಹಲವಾರು ಹಳ್ಳಿಗಳ ಜನತೆಗೆ ಪ್ರವಾಹ ಸದಾ ನೆರಳಿನಂತೆ ಹಿಂಬಾಲಿಸಿಕೊಂಡು ಬರುತ್ತದೆ.
ಪ್ರವಾಹದ ಮುನ್ನೆಚ್ಚರಿಕೆ ಬಂದಾಗ ನದಿಯ ದಂಡೆಯಲ್ಲಿ ಅಳವಡಿಸಿದ ವಿದ್ಯುತ್ ಮೋಟಾರ್ ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ತಂದು ಇಡಬೇಕು. ನಂತರ ಪ್ರವಾಹದ ರಕ್ಕಸಕ್ಕೆ ಫಲವತ್ತಾದ ಜಮೀನು, ಬೆಳೆದು ನಿಂತ ಪೈರು ನೀರಿನ ರಭಸಕ್ಕೆ ಕಣ್ಣು ಮುಂದೆ ಮಾಯವಾಗುತ್ತದೆ. ವಾರಗಟ್ಟಲೇ ಪ್ರವಾಹದ ಸಂಕಷ್ಟವನ್ನು ಆತಂಕದಲ್ಲಿಯೇ ನುಂಗಿಕೊಂಡು ಕಾಲ ಕಳೆಯಬೇಕು. ಆಗ ಮಕ್ಕಳಲ್ಲಿ ಅನಾರೋಗ್ಯ, ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಬವಣೆ ಎದುರುಗೊಳ್ಳುತ್ತವೆ. ಅವೆಲ್ಲವನ್ನು ನಾವು ಪ್ರವಾಹದಂತೆ ಮೆಟ್ಟಿ ನಿಲ್ಲಬೇಕು ಅಷ್ಟೆ ಎನ್ನುತ್ತಾರೆ ಗೌಡೂರ ಗ್ರಾಮದ ಮಲ್ಲಪ್ಪ.
‘ಪ್ರವಾಹ ಇಳಿಮುಖವಾದಾಗ ಸಮಸ್ಯೆಯು ಮಗ್ಗಲು ಬದಲಿಸುತ್ತದೆ. ಮತ್ತೆ ವಿದ್ಯುತ್ ಮರು ಜೋಡಣೆಯ ಹೋರಾಟ, ಬೆಳೆ ನಷ್ಟ ಪರಿಹಾರಕ್ಕೆ ಪ್ರತಿಭಟನೆ, ಧರಣಿಗೆ ಅಣಿಯಾಗಬೇಕು. ಪ್ರವಾಹದ ನಂತರ ಬೆಳೆ ನಷ್ಟ ಸಮೀಕ್ಷೆ ಮಾಡುವ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಕೇವಲ ನೀರು ನಿಂತು ಬೆಳೆ ಹಾನಿಯಾಗಿರುವ ಜಮೀನು ಮಾತ್ರ ನಷ್ಟವೆಂದು ಭಾವಿಸುತ್ತಾರೆ. ಆದರೆ, ವಾರಗಟ್ಟಲೆ ವಿದ್ಯುತ್ ಇಲ್ಲದೆ ಬೆಳೆಗೆ ನೀರು ಹಾಯಿಸಿರುವುದಿಲ್ಲ. ಆಗ ಬೆಳೆಯು ಒಣಗಿರುತ್ತದೆ. ಅದಕ್ಕೆ ಪರಿಹಾರ ಸಿಗುವುದಿಲ್ಲ. ಅಲ್ಲದೆ ಪ್ರವಾಹದಿಂದ ಫಲವತ್ತಾದ ಮಣ್ಣು ಕೊಚ್ಚಿ ಜಮೀನು ಸಮತಟ್ಟು ಕಳೆದುಕೊಂಡಿರುತ್ತದೆ. ಅದಕ್ಕೂ ಸಹ ಪರಿಹಾರ ವಿತರಣೆ ಮಾಡುವ ಚಿಂತನೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಮಾರ್ಗಸೂಚಿಸಿ ಪರಿಶೀಲಿಸಬೇಕು' ಎನ್ನುತ್ತಾರೆ ರೈತ ಮುಖಂಡ ಭಾಸ್ಕರರಾವ ಮುಡಬೂಳ.
‘ಪ್ರವಾಹ ಬಂದಾಗ ಮೀನುಗಾರರ ಬದುಕು ಸ್ವತಃ ಮೀನಿನ ಬಲೆಯಲ್ಲಿ ತಾವೇ ಸಿಕ್ಕಿಕೊಂಡು ಒದ್ದಾಡುವ ದುಸ್ಥಿತಿ ಎದುರಾಗಿರುತ್ತದೆ. ನದಿಯ ನೀರಿನಲ್ಲಿ ಇಳಿದು ಮೀನಿನ ಬೇಟೆಯಾಡಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಾರೆ. ಆದರೆ, ಪ್ರವಾಹ ಬಂದಾಗ ಮೀನಿನ ಬಲೆ, ಹರಿಗೋಲು ಎಲ್ಲವು ಸ್ಥಗಿತಗೊಳ್ಳುತ್ತವೆ. ಆಗ ಉಪ ಜೀವನ ನಡೆಸುವುದೇ ಕಷ್ಟ ಆಗುತ್ತದೆ. ಅಂತಹ ಸಂದರ್ಭದಲ್ಲಿ ಮೀನುಗಾರರ ಕುಟುಂಬಗಳಿಗೆ ಸರ್ಕಾರ ಆಹಾರ ಧಾನ್ಯದ ಕಿಟ್ ವಿತರಿಸಿ ಮಾನವೀಯತೆಯನ್ನು ಮೆರೆಯಬೇಕು' ಎನ್ನುತ್ತಾರೆ ಸಾಮಾಜಿಕ ಚಿಂತಕ ಯೂಸೂಫ್ ಸಿದ್ದಕಿ.
ಕೆರೆಗೆ ನೀರು ತುಂಬಿಸಲಿಲ್ಲ ಇಚ್ಛಾಶಕ್ತಿ
ಶಹಾಪುರ: ಕೃಷ್ಣಾ ನದಿಯ ಪ್ರವಾಹದಿಂದ ಸುಮಾರು 500 ಟಿಎಂಸಿ ಅಡಿ ನೀರು ನದಿಗೆ ಸೇರಿತು. ನೀರನ್ನು ಸೆರೆ ಹಿಡಿಯಲು ಲಭ್ಯ ವಿರುವ ಕೆರೆಗಳನ್ನು ದುರಸ್ತಿಗೊಳಿಸಿ ಪ್ರವಾಹದ ನೀರು ಕೆರೆಯಲ್ಲಿ ಸಂಗ್ರಹಿಸಲು ಅವಕಾಶವಿದೆ. ಆದರೆ, ಇಚ್ಛಾಶಕ್ತಿಯ ಕೊರತೆಯಿದೆ ಎನ್ನುತ್ತಾರೆ ಯೂಸೂಫ್ ಸಿದ್ದಕಿ.
‘ನರೇಗಾ ಯೋಜನೆ ಅಡಿಯಲ್ಲಿ ಕೆರೆ ದುರಸ್ತಿ ಹಾಗೂ ಪೈಪ್‌ಲೈನ್ ಅಳವಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ನೀರು ಸಂಗ್ರಹಿಸುವ ಮುಂದಾಲೋಚನೆಯ ಗುರಿ ಇದ್ದರೆ ಪ್ರವಾಹ ನೀರು ಪೋಲಾಗುತ್ತಿರಲಿಲ್ಲ. ಕೆರೆಯಲ್ಲಿ ನೀರು ಸಂಗ್ರಹದಿಂದ ಅಂತರ್ಜಲಮಟ್ಟ ಹೆಚ್ಚಳದ ಜತೆಗೆ ಸುತ್ತಮುತ್ತಲಿನ ಪರಿಸರಕ್ಕೂ ಇದು ಪೂರಕವಾಗುತ್ತದೆ. ಬರುವ ದಿನದಲ್ಲಿ ಜಿಲ್ಲಾಡಳಿತವು ಇದನ್ನು ಗಂಭೀರವಾಗಿ ತೆಗೆದುಕೊಂಡು ಪ್ರವಾಹದ ನೀರು ಕೆರೆಗೆ ತುಂಬಿಸುವ ಯೋಜನೆಗೆ ಸಿದ್ಧರಾಗಬೇಕು’ ಎಂದು ಅವರು ಸಲಹೆ ಮಾಡಿದ್ದಾರೆ.
ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ನಾಮದೇವ ವಾಟ್ಕರ್
ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಮಾರ್ಗಸೂಚಿ ನಿಯಮಗಳನ್ನು ತುರ್ತಾಗಿ ಬದಲಾಯಿಸುವ ಅಗತ್ಯವಿದೆ. ಸರ್ಕಾರ ಕಾನೂನು ಬದಲಾವಣೆ ಮಾಡುತ್ತಿರುವಾಗ ವಿಪತ್ತು ನಿರ್ವಹಣೆ ನಿಯಮ ಬದಲಾಯಿಸುವುದು ದೊಡ್ಡ ಕೆಲಸವಲ್ಲ. ಇದರಿಂದ ಪ್ರವಾಹದ ಸಂತ್ರಸ್ತರಿಗೆ ನೆರವಾಗಲಿದೆ.ಭಾಸ್ಕರರಾವ ಮುಡಬೂಳ ರೈತ ಮುಖಂಡ ಶಹಾಪುರ
ಪ್ರವಾಹ ಪೀಡಿತ ಜಮೀನುಗಳಲ್ಲಿ ಬೆಳೆ ಹಾನಿ ಬಗ್ಗೆ ಕಂದಾಯ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ಮಾಡಿ ಪರಿಹಾರಕ್ಕೆ ಶಿಫಾರಸ್ಸು ಮಾಡಲಾಗುವುದು.ಭೀಮರಾಯ ಹವಾಲ್ದಾರ್ ಸಹಾಯಕ ಕೃಷಿ ನಿರ್ದೇಶಕ
ಬಂಡೋಳಿ ನದಿ ತೀರದಲ್ಲಿ ಇರುವ ನನ್ನ ಜಮೀನಿಗೆ ನೀರು ಬಂದು ಸಾಕಷ್ಟು ಹಾನಿಯಾಗಿದೆ. ಪುನಃ ಬಿತ್ತಬೇಕೆಂದರೆ ಭೂಮಿ ಒಣಗುತ್ತಿಲ್ಲಶರಣಗೌಡ ಬಂಡೋಳಿ ರೈತ
ಪ್ರವಾಹದಿಂದ 150 ಹೆಕ್ಟೇರ್ ಬೆಳೆ ಹಾನಿ ಸುರಪುರ: ಬಸವಸಾಗರ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಬಿಟ್ಟಿದ್ದರಿಂದ 25 ದಿನಗಳವರೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಿದ್ದರೂ ಕಕ್ಕೇರಾ ಮತ್ತು ಸುರಪುರ ಹೋಬಳಿಯ ನದಿ ತೀರದ ಜಮೀನುಗಳಲ್ಲಿ ಬೆಳೆದ ಬೆಳೆ ಹಾನಿಯಾಯಿತು. ಈಗ ಪ್ರವಾಹ ನಿಂತಿದೆ. ಪ್ರವಾಹ ಪೀಡಿತ ಜಮೀನುಗಳು ಕೆಸರುಮಯವಾಗಿದ್ದು ಕಾಲು ಸಿಕ್ಕಿಹಾಕಿಕೊಳ್ಳುವಷ್ಟು ಮಣ್ಣು ನೆಂದುಹೋಗಿದೆ. ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ ಭತ್ತ ಬೆಳೆಗೆ ಹಾನಿಯಾಗಿಲ್ಲ. ಹತ್ತಿ ಮತ್ತು ತೊಗರಿ ಬೆಳೆ ನಷ್ಟವಾಗಿದೆ. ಅಂದಾಜು 150ಕ್ಕೂ ಹೆಚ್ಚು ಹೆಕ್ಟೇರ್ ಜಮೀನಿನಲ್ಲಿ ನೀರು ನುಗ್ಗಿತ್ತು. ಪ್ರವಾಹ ಇಳಿಮುಖವಾದ ನಂತರ ಮಳೆ ಆರಂಭವಾಗಿದೆ. ಹೀಗಾಗಿ ಜಮೀನಿನ ಮಣ್ಣು ಆರಿಲ್ಲ. ತೇವಾಂಶ ಅಧಿಕವಾಗಿದ್ದು ಬಿತ್ತಲು ಸಾಧ್ಯವಾಗುತ್ತಿಲ್ಲ. ಬಿತ್ತುವ ಸಮಯ ವಿಳಂಬವಾದರೆ ಸಮರ್ಪಕ ಫಸಲು ಬರುವುದಿಲ್ಲ ಎಂಬ ಆತಂಕ ರೈತರದ್ದು.
ಮುಳುಗಡೆಯಾಗಿದ್ದ ಹತ್ತಿ ಭತ್ತದ ಬೆಳೆ ವಡಗೇರಾ: ಕಳೆದ 15 ದಿನಗಳಿಂದ ನಾರಾಯಣಪುರ ಜಲಾಶಯದಿಂದ ನದಿಗೆ ನೀರು ಬಿಡುತ್ತಿರುವುದರಿಂದ ವಡಗೇರಾ ತಾಲ್ಲೂಕಿನ ಐಕೂರ ಅನಕಸೂಗುರ ಗೊಂದೆನೂರ ಯಕ್ಚಿಂತಿ ಹಾಗೂ ಇನ್ನೂ ಅನೇಕ ಗ್ರಾಮಗಳ ಜಮೀನುಗಳಲ್ಲಿ ಬೆಳೆದಿದ್ದ ಹತ್ತಿ ಹಾಗೂ ಭತ್ತದ ಬೆಳೆಗಳು ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿದ್ದವು. ಇನ್ನೂ ಕೃಷ್ಣಾ ನದಿಗೆ ನೀರು ಬರುತ್ತಿರುವುದರಿಂದ ಕಂದಾಯ ಹಾಗೂ ಇಲಾಖೆ ಕೃಷಿ ಇಲಾಖೆ ವತಿಯಿಂದ ಬೆಳೆ ಹಾನಿ ಸಮೀಕ್ಷೆ ಮಾಡಿಲ್ಲ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ನದಿಗೆ ನಾರಾಯಣಪುರ ಜಲಾಶಯದಿಂದ ನೀರು ಬಿಡುವುದು ನಿಂತ ಮೇಲೆ ನದಿಯಲ್ಲಿ ಪ್ರವಾಹ ಕಡಿಮೆಯಾಗುತ್ತದೆ. ಆಗ ಸಮೀಕ್ಷೆ ಮಾಡಿದರೆ ನಿಖರವಾದ ಮಾಹಿತಿ ಸಿಗುತ್ತದೆ ಎಂದು ಕಂದಾಯ ಅಧಿಕಾರಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.