ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಕಳಕಳಿಯ ನಾರಾಯಣ ಮಜ್ಜಿಗೆ: ತುರ್ತು ಸಂದರ್ಭದಲ್ಲಿ ಉಚಿತ ಆಟೊ ಸೇವೆ

ನಟ ದಿ.ಶಂಕರನಾಗ್ ಆದರ್ಶ
Last Updated 10 ಏಪ್ರಿಲ್ 2022, 5:50 IST
ಅಕ್ಷರ ಗಾತ್ರ

ಗುರುಮಠಕಲ್: ಕುಟುಂಬ ನಿರ್ವಹಣೆಗೆ ಆಟೋ ನಡೆಸುವ ಕಾಯಕವನ್ನು ಮಾಡುತ್ತಾ, ಮನೆಯ ಜೊತೆಗೆ ಸಮಾಜ ಸೇವೆಯೂ ಕರ್ತವ್ಯವೆಂಬ ಆದರ್ಶದಿಂದ ಸಾಮಾಜಿಕ ಕಳಕಳಿ ಮೆರೆಯುತ್ತಿರುವ ನಾರಾಯಣ ಮಜ್ಜಿಗೆ ಅವರ ಹೆಸರು ಹೇಳಿದರೆ ಇಲ್ಲಿನ ಜನಕ್ಕೆ ತಟ್ಟನೆ ನೆನಪಾಗುವುದು ಹೆರಿಗೆಗಾಗಿ ನೀಡುವ ಉಚಿತ ಆಟೊ ಸೇವೆ.

ಪಟ್ಟಣದ ಲಕ್ಷ್ಮೀನಗರದ ಬಡಾವಣೆಯ ಬಡ ಕುಟುಂಬದ ನಾರಾಯಣ ಮಜ್ಜಿಗೆ ಅವರು ದಿನ ನಿತ್ಯದ ದುಡಿತದ ಜೊತೆಗೆ ಒಂದಿಷ್ಟು ಸಮಾಜದ ಸೇವೆಯನ್ನು ಮಾಡಬೇಕೆಂಬ ಹಂಬಲ ಹೊಂದಿದವರು. ನಟ, ನಿರ್ದೇಶಕ ದಿ.ಶಂಕರನಾಗ್ ಅವರ ಅಭಿಮಾನಿಯಾದ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಸ್ವಯಂಪ್ರೇರಿತವಾಗಿ ತೊಡಗುವುದರಿಂದ ಜನರಿಗೆ ಹತ್ತಿರವಾಗಿದ್ದಾರೆ.

ಪಟ್ಟಣದಲ್ಲಿ ಬಾಣಂತಿಯರಿಗೆ ತೊಂದರೆ, ಗರ್ಭವತಿಯರ ಹಾರೈಕೆ, ಹೆರಿಗೆಗಾಗಿ ಯಾವಾಗ ಕರೆ ಮಾಡಿದರೂ ತಮ್ಮ ಆಟೊದಲ್ಲಿ ಉಚಿತ ಸೇವೆ ನೀಡುತ್ತಾರೆ. ‘ಬಡತನ, ಸಿರಿತನ ಬಂದುಹೋಗುತ್ತೆ. ಹಣ ಕಳೆದರೆ ಮತ್ತೆ ಸಂಪಾದಿಸಬಹುದು. ಆದರೆ, ಜೀವ ಹೋದರೆ ಮತ್ತೆ ಬರುವುದಿಲ್ಲ. ಸಾವು-ಬದುಕಿನ ಸಂದರ್ಭದಲ್ಲೂ ಹಣದ ಕುರಿತು ಚಿಂತಿಸುವುದು ಹೇಗೆ? ಜೀವ ಉಳಿದರೆ ಸಾಕು’ ಎನ್ನುತ್ತಾರೆ ನಾರಾಯಣ.

ಈವರೆಗೆ 50ಕ್ಕೂ ಹೆಚ್ಚು ಹೆರಿಗೆ ಸೇರಿದಂತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ತುರ್ತು ಸ್ಥಿತಿಯಲ್ಲಿದ್ದವರನ್ನು ಆಸ್ಪತ್ರೆಗೆ ಕರೆದೊಯ್ದಿರುವ ಅವರಿಗೆ ಜೀವ ಉಳಿಸುವುದು ಮುಖ್ಯ. ಒಬ್ಬರನ್ನು ಸಾವಿನ ಬಾಯಿಂದ ತಪ್ಪಿಸಿದ ಸಂತೋಷ ಹಣದಿಂದ ಸಂಪಾದಿಸಲಾಗದು, ಜೀವ ಕಾಪಾಡಿದ ಸಂತೃಪ್ತಿಯ ಮುಂದೆ ಉಳಿದೆಲ್ಲವೂ ಗೌಣ ಎಂದು ಅನುಭವ ಹಂಚಿಕೊಂಡರು.

‘2012ರಲ್ಲಿ ನಮ್ಮ ಮನೆಯಲ್ಲಿ ಸಿಲಿಂಡರ್ ಸ್ಫೋಟವಾಗಿತ್ತು. ನನ್ನ ಪತ್ನಿಗೆ ಸುಟ್ಟ ಗಾಯಗಳಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಲು ವಾಹನಗಳು ಸಿಗದೆ ನಿಧನರಾದರು. ಆ ಸಮಯದಲ್ಲಿ ಹಣ ನೋಡದೆ ವಾಹನ ಸಿಕ್ಕಿದ್ದರೆ ನನ್ನ ಪತ್ನಿ ಮರೆಮ್ಮ ಬದುಕಿರುತ್ತಿದ್ದಳು. ಇದು ನನ್ನೊಬ್ಬನ ಕಥೆಯಲ್ಲ, ಇಂತಹ ಹಲವು ಘಟನೆಗಳು ಜರುಗುತ್ತಿವೆ. ಜೀವಕ್ಕಿಂತ ತುರ್ತು ಸಂದರ್ಭಗಳಲ್ಲಿ ಸೇವೆ ನೀಡುವುದಕ್ಕೆ ಮೊದಲ ಆದ್ಯತೆ ನೀಡಿದ್ದೇನೆ’ ಎಂದರು.

ಪಟ್ಟಣದಲ್ಲಿ ಹೆರಿಗೆ ಹಾಗೂ ಅಪಘಾತದಂತ ತುರ್ತು ಸಮಯದಲ್ಲಿ ಯಾರಿಗಾದರೂ ಆಟೊ ಸೇವೆಯ ಅವಶ್ಯವಿದ್ದರೆ ನಾರಾಯಣ ಮಜ್ಜಿಗೆ (ಮೊ. 7259807464) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT