ಶಾಂತಿ, ಸೌಹಾರ್ದತೆಯಿಂದ ಗಣೇಶ ಚತುರ್ಥಿ ಆಚರಿಸಿ

7
ಗಣೇಶೋತ್ಸವ ಆಚರಣೆ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

ಶಾಂತಿ, ಸೌಹಾರ್ದತೆಯಿಂದ ಗಣೇಶ ಚತುರ್ಥಿ ಆಚರಿಸಿ

Published:
Updated:
Deccan Herald

ಯಾದಗಿರಿ:  ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಗಣೇಶ ಮೂರ್ತಿ ಸ್ಥಾಪನೆ, ವಿಸರ್ಜನೆ ವೇಳೆ ಕಾರ್ಯಕ್ರಮದ ಆಯೋಜಕರು ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರು ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಗಣೇಶ ಚತುರ್ಥಿ ಆಚರಣೆ ವೇಳೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಕುರಿತು ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಗಣೇಶನ ಮೂರ್ತಿಯನ್ನು ರಸ್ತೆ ಅಥವಾ ರಸ್ತೆ ಬದಿಯಲ್ಲಿ ಕೂಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಬಾರದು. ಮೂರ್ತಿಯನ್ನು ಪ್ರತಿಷ್ಠಾಪಿಸಲು ಪೊಲೀಸ್ ಇಲಾಖೆ, ತಹಶೀಲ್ದಾರ್‌, ನಗರಸಭೆ ಪೌರಾಯುಕ್ತರು, ಪುರಸಭೆ ಮುಖ್ಯಾಧಿಕಾರಿ, ಅಗ್ನಿ ಶಾಮಕದಳ ಹಾಗೂ ಜೆಸ್ಕಾಂ ನಿಂದ ಪರವಾನಗಿ ಪಡೆಯಬೇಕು. ಪರವಾನಗಿ ನೀಡಲು ಸೆಪ್ಟೆಂಬರ್ 10ರಿಂದ 12ರವರೆಗೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಆರಂಭಿಸಲಾಗುವುದು. ಅರ್ಜಿ ಸಲ್ಲಿಸಿದ 24 ಗಂಟೆಗಳಲ್ಲಿ ಅನುಮತಿ ದೊರೆಯಲಿದೆ. ಗಣೇಶ ಮೂರ್ತಿ ಕೂಡಿಸುವ ಪ್ರತಿಯೊಂದು ಸ್ಥಳದಲ್ಲಿ 5ರಿಂದ 10 ಜನ ಸ್ವಯಂ ಸೇವಕರ ಸಮಿತಿ ರಚಿಸಿಕೊಂಡು ಸಂಬಂಧಪಟ್ಟ ತಹಶೀಲ್ದಾರ್‌ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.

ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದ ಹತ್ತಿರ ಮಸೀದಿ ಇದ್ದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಬೇಕು. ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು. ಮುಸ್ಲಿಮರು ಪ್ರಾರ್ಥನೆ ಮಾಡುವ ಸ್ಥಳದಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿದ್ದರೆ ಪ್ರಾರ್ಥನೆ ಮಾಡುವ ವೇಳೆ ಧ್ವನಿವರ್ಧಕದ ಶಬ್ದವನ್ನು ಕಡಿಮೆಗೊಳಿಸಬೇಕು ಎಂದು ಅವರು ಸೂಚಿಸಿದರು.

ಗಣೇಶ ಮೂರ್ತಿಗಳನ್ನು ಕೂಡಿಸಿದ ಸ್ಥಳಗಳಲ್ಲಿ ಸೂಕ್ತ ಬಂದೋಬಸ್ತ್‌ಗಾಗಿ ಪೊಲೀಸ್ ಹಾಗೂ ಗೃಹರಕ್ಷದಳ ಸಿಬ್ಬಂದಿ ನಿಯೋಜಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದರು. ಮೆರವಣಿಗೆಯಲ್ಲಿ ಡಿ.ಜೆ ಗಳನ್ನು ಬಳಸಬಾರದು ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವ ಗೀತೆಗಳನ್ನು ಹಾಕಬಾರದು ಎಂದು ಅವರು ತಿಳಿಸಿದರು.

ಗಣೇಶ ವಿಸರ್ಜನೆಯ ದಿನ ನಗರದಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲಾ ತಾಲ್ಲೂಕುಗಳಲ್ಲಿ ಶಾಂತಿಸಭೆ ನಡೆಸಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು. ಅಂದು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಯಾದಗಿರಿ ನಗರದಲ್ಲಿ ಮೂರ್ತಿಗಳ ವಿಸರ್ಜನೆಗೆ ಸಣ್ಣ ಕೆರೆಯೊಂದರ ಭಾಗದ ಗುಂಡಿಯಲ್ಲಿ ನೀರು ತುಂಬಿಸಬೇಕು. ವಿಸರ್ಜನೆ ಮಾಡಿದ ಮೂರ್ತಿಗಳನ್ನು ಎತ್ತಿ ಬೇರೆಡೆ ಸಾಗಿಸಲು ಕ್ರೇನ್ ವ್ಯವಸ್ಥೆ ಮತ್ತು ಬೆಳಕಿಗಾಗಿ ವಿದ್ಯುತ್ ದೀಪ ಮತ್ತು ಜನರೇಟರ್ ವ್ಯವಸ್ಥೆ ಮಾಡುವಂತೆ ನಗರಸಭೆಯ ಪೌರಾಯುಕ್ತರು ಹಾಗೂ ತಹಶೀಲ್ದಾರರಿಗೆ ಸೂಚಿಸಿದರು. ಅದರಂತೆ ಶಹಾಪೂರ, ಸುರಪುರ, ಕೆಂಭಾವಿ, ಕಕ್ಕೇರಾ ಹಾಗೂ ಗುರುಮಠಕಲ್ ತಾಲ್ಲೂಕಿನ ತಹಶೀಲ್ದಾರರು ಕ್ರಮ ವಹಿಸುವಂತೆ ಸೂಚಿಸಿದರು.

ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಗಳನ್ನು ಭೀಮಾ, ಕೃಷ್ಣಾ ನದಿ ಹಾಗೂ ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬಾರದು. ವಿಸರ್ಜನೆಯ ಸಮಯದಲ್ಲಿ ಪೊಲೀಸ್ ಇಲಾಖೆ ನಿರ್ದೇಶಿಸುವ ಮಾರ್ಗದಲ್ಲೆ ಮೆರವಣಿಗೆ ನಡೆಸಬೇಕು. ವಿಸರ್ಜನೆ ಮಾಡುವ ಸ್ಥಳಕ್ಕೆ 8-10 ಜನರು ಮಾತ್ರ ಹೋಗಬೇಕು. ಹೋಗುವವರು ತಮ್ಮ ಹೆಸರು ವಿವರವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡಬೇಕು. ವಿಸರ್ಜನೆಯ ಸ್ಥಳದಲ್ಲಿ ಆಂಬುಲೆನ್ಸ್‌ನ ವ್ಯವಸ್ಥೆ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಉಪವಿಭಾಗಾಧಿಕಾರಿಡಾ.ಬಿ.ಎಸ್. ಮಂಜುನಾಥ ಸ್ವಾಮಿ, ಡಿವೈಎಸ್‌ಪಿ ಪಾಂಡುರಂಗ, ಪೌರಾಯುಕ್ತ ಸಂಗಪ್ಪ ಉಪಾಸೆ, ವಿವಿಧ ತಾಲ್ಲೂಕಿನ ತಹಶೀಲ್ದಾರರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಸಾಹಿತಿ ಅಯ್ಯಣ್ಣ ಹುಂಡೇಕಾರ, ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !