ಬುಧವಾರ, ಮಾರ್ಚ್ 29, 2023
23 °C

ಸುರಪುರ: ಬೆನಕನ ಮೂರ್ತಿಗೆ ಹೆಚ್ಚಿದ ಬೇಡಿಕೆ

ಅಶೋಕ ಸಾಲವಾಡಗಿ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಇಲ್ಲಿನ ಗಾಂಧಿ ನಗರದ ಕೃಷ್ಣ ಶಂಕರ ಚವ್ಹಾಣ ಕುಟುಂಬದ ಸದಸ್ಯರೆಲ್ಲರೂ ತಲೆಮಾರುಗಳಿಂದ ಗೌರಿ– ಗಣೇಶ, ಮಣ್ಣೆತ್ತು, ಹಸು ಇತರ ಮೂರ್ತಿಗಳ ತಯಾರಿಸಿಕೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದೆ.

ಗಣೇಶ ಚೌತಿ ಎರಡು ತಿಂಗಳು ಮುನ್ನವೇ ಮೂರ್ತಿ ತಯಾರಿಕೆ ಸಿದ್ಧತೆ ಕೈಗೊಳ್ಳುತ್ತಾರೆ. ಜೇಡಿ ಮಣ್ಣನ್ನು ಖರೀದಿಸಿ, ಹದ ಬರುವಂತೆ ಒಂದು ವಾರ ನೀರಿನಲ್ಲಿ ನೆನೆಸಿ, ಹತ್ತಿಯೊಂದಿಗೆ ಬೆರೆಸುತ್ತಾರೆ. ಸ್ನಾನ ಮಾಡಿ ಮೂರ್ತಿ ತಯಾರಿಕೆಯಲ್ಲಿ ತೊಡಗುತ್ತಾರೆ. ಮಾಂಸಹಾರವೂ ಸೇವಿಸದೆ   ಭಯ, ಭಕ್ತಿ ಮತ್ತು ಶ್ರದ್ಧೆಯಿಂದ ಮೂರ್ತಿಗಳನ್ನು ಸಿದ್ಧ ಪಡಿಸುತ್ತಾರೆ.

ಒಂದು ವಾರ ಚೆನ್ನಾಗಿ ಒಣಗಿದ ಮೇಲೆ ಬಣ್ಣ ಬಳಿದು ಆಕರ್ಷಣೆ ತುಂಬು ತ್ತಾರೆ. ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶ ಸಮಿತಿಗಳು ತಿಂಗಳು ಮೊದಲೇ ಬೇಡಿಕೆ ಸಲ್ಲಿಸುತ್ತಾರೆ. ಅವರಿಗೆ ಬೇಕಾದ ಅಳತೆ, ಮಾದರಿ, ವಿನ್ಯಾಸದಲ್ಲಿ ತಯಾರಿಸಿ ಕೊಡುತ್ತಾರೆ.

ನಹಗರದಲ್ಲಿ ಗಣೇಶ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಬ್ಬದ ಸಿದ್ಧತೆಯಲ್ಲಿರುವ ಸಂಘ, ಸಂಸ್ಥೆಗಳು ನಾನಾ ಮಾದರಿಯ ಮೂರ್ತಿಗಳ ಖರೀದಿಯಲ್ಲಿ ನಿರತವಾಗಿದ್ದಾರೆ. ನಿರ್ಬಂಧಗಳ ಸಡಿಲಿಸಿದ್ದರಿಂದ ಗಣೇಶ ಹಬ್ಬದ ಸಂಭ್ರಮ ಕಳೆ ಕಟ್ಟಿದೆ.

‘ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಿಸುವುದು ಕಷ್ಟ. ಅವು ಒಣಗಲು ಬಹಳ ಸಮಯ ತೆಗೆದುಕೊಳ್ಳುತ್ತವೆ. ಬಣ್ಣ ಸರಿಯಾಗಿ ಹತ್ತಿಕೊಳ್ಳುವುದಿಲ್ಲ. ಮೂರ್ತಿ ತಯಾರಿಸುವ ಸಾಚಾದಲ್ಲಿ ಸರಿಯಾಗಿ ಬರುವುದಿಲ್ಲ. ಎತ್ತರದ ವಿಗ್ರಹ ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಮೂರ್ತಿ ತಯಾರಕ ಕೃಷ್ಣ ಚವ್ಹಾಣ.

‘ಪಿಒಪಿಯಿಂದ ಮೂರ್ತಿಗಳನ್ನು ಆಕರ್ಷಕವಾಗಿ ತಯಾರಿಸಬಹುದು. ಬಣ್ಣವೂ ಕೂಡುತ್ತದೆ. ಶೇ 30ರಷ್ಟು ಮಣ್ಣು ಬೆರೆಸುವುದರಿಂದ ಹಾನಿಕಾರಕ ಅಂಶಗಳು ಕಡಿಮೆಯಾಗುತ್ತವೆ. ಅಲ್ಲದೇ ಶೇ 90ರಷ್ಟು ಜನ ಪಿಒಪಿ ವಿಗ್ರಹಗಳನ್ನೇ ಖರೀದಿಸುತ್ತಾರೆ’ ಎಂದರು.

ಮನೆಗಳಲ್ಲಿ ಪ್ರತಿಷ್ಠಾಪಿಸಲು 6 ಇಂಚಿನಿಂದ 1 ಅಡಿವರೆಗೆ ಮೂರ್ತಿ ಲಭ್ಯವಿವೆ. ಸಾರ್ವಜನಿಕವಾಗಿ 6ರಿಂದ 10 ಅಡಿವರೆಗೂ ಮೂರ್ತಿಗಳನ್ನು ತಯಾರಿಸಿ ಇಡಲಾಗಿದೆ. ₹100ರಿಂದ ₹10 ಸಾವಿರದವರೆಗೂ ಬೆಲೆ ಇದೆ’ ಎಂದು ಮಾಹಿತಿ ಕೊಟ್ಟರು.

ಕೋವಿಡ್ ಕಾರಣ ಕಳೆದ ಎರಡು ವರ್ಷಗಳಿಂದ ಮಾರಾಟ ಗಣನೀಯವಾಗಿ ಕುಸಿದಿತ್ತು. ಹೀಗಾಗಿ ಮೂರ್ತಿ ತಯಾರಿಕೆಯ ಬಗ್ಗೆ ಹುರುಪು ಇರಲಿಲ್ಲ. ಕೆಲವೊಂದು ವಿಗ್ರಹಗಳನ್ನು ಅಕ್ಕಲಕೋಟ, ಸೋಲಾಪುರಗಳಿಂದ ಖರೀದಿಸಿ ತಂದಿದ್ದೇವೆ. ಕೆಲವನ್ನು ನಾವೇ ಸಿದ್ಧ ಪಡಿಸಿದ್ದೇವೆ. ನಮ್ಮ ಸಂಸಾರ ತೂಗಿಸುವಷ್ಟು ಹಣ ಮಾರಾಟದಿಂದ ಬರುತ್ತದೆ ಎನ್ನುತ್ತಾರೆ ಕೃಷ್ಣ.

****

ಮೂರ್ತಿ ತಯಾರಿಕೆ ನಂಬಿ ನಗರದಲ್ಲಿ 3–4 ಕುಟುಂಬಗಳು ಬದುಕುತ್ತಿವೆ. ಕೋವಿಡ್ ಕಾರಣ ಕಳೆದ ಎರಡೂ ವರ್ಷ ಸಂಕಷ್ಟ ಅನುಭವಿಸಿದ್ದಾರೆ. ಸರ್ಕಾರ ಅವರ ನೆರವಿಗೆ ಬರಬೇಕು

–ರಾಘವೇಂದ್ರ ಭಕ್ರಿ, ಲೇಖಕ

****

ಪಿಒಪಿ ನಿಷೇಧಿಸಿದ ಸರ್ಕಾರ ಮಣ್ಣಿನ ಮೂರ್ತಿ ತಯಾರಿಕರಿಗೆ ಪ್ರೋತ್ಸಾಹ, ಹಣಕಾಸಿನ ನೆರವು ನೀಡಬೇಕು. ಮಣ್ಣಿನ ಮೂರ್ತಿಗಳನ್ನೆ ಖರೀದಿಸಿ ಪರಿಸರ ಉಳಿಸಬೇಕು

–ಅಪ್ಪಣ್ಣ ಚಿನ್ನಾಕಾರ, ಪರಿಸರವಾದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು