ಬುಡಕಟ್ಟು ಸಮುದಾಯಕ್ಕೆ ಶಿಕ್ಷಣ ನೀಡಿ: ಡಿವೈಎಸ್‍ಪಿ ಡಾ.ಬಿ.ದೇವರಾಜ್

ಸುರಪುರ: ‘ಬುಡಕಟ್ಟು ಜನಾಂಗ ದವರಿಗಾಗಿ ಹೆಚ್ಚು ಹೆಚ್ಚು ಶಾಲೆಗಳನ್ನು ತೆರೆದು ಉತ್ತಮ ಶಿಕ್ಷಣ ನೀಡಿದಾಗ ಅವರು ವಿದ್ಯಾವಂತರಾಗಿ ಸರ್ಕಾರದ ಯೋಜನೆಗಳು ಮತ್ತು ತಮ್ಮ ಹಕ್ಕುಗಳ ಬಗ್ಗೆ ತಿಳಿಯುತ್ತಾರೆ’ ಎಂದು ಡಿವೈಎಸ್‍ಪಿ ಡಾ. ಬಿ. ದೇವರಾಜ್ ಪ್ರತಿಪಾದಿಸಿದರು.
ನಗರದ ಬಾಲಕರ ಸರ್ಕಾರಿ ವಸತಿ ನಿಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಆದಿವಾಸಿ ಮತ್ತು ಬುಡಕಟ್ಟು ಜನಾಂಗದ ಹಕ್ಕುಗಳು ಕುರಿತಾದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಸಿಗಬೇಕಾದ ಎಲ್ಲ ಹಕ್ಕುಗಳನ್ನು ಕೊಟ್ಟು ಅವರನ್ನು ಮುಖ್ಯವಾಹಿನಿಗೆ ತರಬೇಕಿದೆ’ ಎಂದರು.
‘ನಮ್ಮ ಭಾರತದಲ್ಲಿ ಸುಮಾರು 10 ಕೋಟಿ ಪರಿಶಿಷ್ಟ ಜನಸಂಖ್ಯೆಯಿದೆ. 705 ಬುಡಕಟ್ಟು ಜನಾಂಗಗಳಿವೆ. ನಮ್ಮ ಜನಸಂಖ್ಯೆಯಲ್ಲಿ ಶೇ 8.5 ಬುಡಕಟ್ಟು ಜನಾಂಗದವರಿದ್ದಾರೆ. 75ರಷ್ಟು ಬುಡಕಟ್ಟು ಸಮುದಾಯ ಆರ್ಥಿಕ ಹಾಗೂ ಸಾಮಾಜಿಕವಾಗಿ ಬಹಳ ಹಿಂದುಳಿದಿದೆ’ ಎಂದರು.
‘ಸಂವಿಧಾನದಲ್ಲಿ ತಿಳಿಸಿದಂತೆ ಪ್ರತಿಯೊಬ್ಬರಿಗೂ ಸಮಾನವಾದ ನ್ಯಾಯ ಸಿಗಬೇಕು. ತ್ವರಿತಗತಿಯಲ್ಲಿ ನ್ಯಾಯ ಸಿಗಲಿ, ಹಕ್ಕುಗಳ ಬಗ್ಗೆ ತಿಳಿಯಲಿ ಎಂಬ ಸದುದ್ದೇಶದಿಂದ ಜನರ ಮನೆ ಬಾಗಿಲಿಗೆ ಬಂದು ಕಾನೂನು ಅರಿವು– ನೆರವು ನೀಡಲಾಗುತ್ತಿದೆ’ ಎಂದರು.
ನ್ಯಾಯಾಧೀಶ ಚಿದಾನಂದ ಬಡಿಗೇರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಲಂಬಾಣಿ ಎಂಬುದು ಸಂಸ್ಕೃತ ಶಬ್ದ. ಸಂಸ್ಕೃತದಲ್ಲಿ ಇದಕ್ಕೆ ಲವಣ ಎಂದು ಕರೆಯುತ್ತಾರೆ. ಇತಿಹಾಸ ಪುಟಗಳನ್ನು ತಿರುವಿದಾಗ ಈ ಜನಾಂಗದವರು ಉಪ್ಪು ತಯಾರಿಕೆಯಲ್ಲಿ ತಮ್ಮನ್ನು ತಾವು ಹೆಚ್ಚಾಗಿ ತೊಡಿಗಿಸಿಕೊಂಡಿದ್ದರಿಂದ ಲವಣ ಎಂಬ ಶಬ್ದ ಕ್ರಮೇಣ ಮಾರ್ಪಾಡುಗೊಂಡ ಲಂಬಾಣಿ ಎಂಬುದಾಗಿದೆ. ಮೊಗಲರ ಆಳ್ವಿಕೆಯಲ್ಲಿ ರಾಜಪುತ್ರ ಮನೆತನದ ಜನಾಂಗ ಇದಾಗಿತ್ತು’ ಎಂದು ಲಂಬಾಣಿ ಜನಾಂಗದ ಇತಿಹಾಸ ತಿಳಿಸಿದರು.
ವಕೀಲ ದೇವಿಂದ್ರಪ್ಪ ಬೇವಿನಕಟ್ಟಿ ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯಿತಿ ಇಒ ಅಮರೇಶ ಮೂಡಲಮನಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕಿಲ್ಲೇದಾರ, ಎಪಿಪಿ ರಾಘವೇಂದ್ರ ಜಹಗೀರದಾರ್, ವಕೀಲರಾದ ಶ್ರೀದೇವಿ ಪಾಟೀಲ, ರಮಾನಂದ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.