ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೋಟಗಾರಿಕೆ ಪ್ರದೇಶ ವಿಸ್ತರಣೆಗೆ ಆದ್ಯತೆ ನೀಡಿ’

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಎಡಿಸಿ ಶರಣಬಸಪ್ಪ ಕೋಟೆಪ್ಪಗೊಳ ಸಲಹೆ
Last Updated 30 ಸೆಪ್ಟೆಂಬರ್ 2022, 17:10 IST
ಅಕ್ಷರ ಗಾತ್ರ

ಯಾದಗಿರಿ: ತೋಟಗಾರಿಕೆ ಬೆಳೆ ಬೆಳೆಯಲು ಇಚ್ಛಿಸುವ ಅರ್ಹ ರೈತರಿಗೆ ವಿವಿಧ ಬೆಳೆಗಳ ಕುರಿತು ಅಗತ್ಯ ಮಾಹಿತಿ ನೀಡುವ ಮೂಲಕ ತೋಟಗಾರಿಕೆ ಬೆಳೆಗಳನ್ನು ಬೆಳೆಯುವತ್ತ ರೈತರನ್ನು ಆಕರ್ಷಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ತೋಟಗಾರಿಕೆ ಇಲಾಖೆ ಸಹಾಯಕ ಹಿರಿಯ ನಿರ್ದೇಶಕರಿಗೆ ಸೂಚಿಸಿದರು.

ನಗರದ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಯಾದಗರಿ ತಾಲ್ಲೂಕಿನ ವಿವಿಧ ಇಲಾಖೆಗಳಡಿ ಅನುಷ್ಠಾನಗೊಂಡ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗಾಗಿ ಇರುವ ರಿಯಾಯಿತಿ ಬಗ್ಗೆ ಅರ್ಹ ರೈತರಿಗೆ ತಿಳಿವಳಿಕೆ ನೀಡಿ, ರೈತರ ಆರ್ಥಿಕ ಪ್ರಗತಿಗೆ ಪೂರಕವಾಗಿ ಕೆಲಸ ಮಾಡಿ ಎಂದರು.

ಆ.15, ಜನವರಿ 26 ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ತಾಲ್ಲೂಕು ಮಟ್ಟದಲ್ಲಿ ಫಲಪುಷ್ಪ ಪ್ರದರ್ಶನ ಮೇಳ, ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ತಾಲ್ಲೂಕಿನ ಪ್ರತಿ ಹೊಬಳಿಯಲ್ಲಿ ರೈತರಿಗೆ, ಸಾರ್ವಜನಿಕರಿಗೆ ತೋಟಗಾರಿಕೆ ಬೆಳೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಜಿಮುದ್ದೀನ್ ಸಭೆಯಲ್ಲಿ ಮಾಹಿತಿ
ನೀಡಿದರು.

ವಿವಿಧ ಇಲಾಖೆಗಳಿಂದ ವಿವಿಧ ಯೋಜನೆಗಳಡಿ ಸಿಗುವ ಸೌಲಭ್ಯ ಕುರಿತು ರೈತರಿಗೆ, ಜನರಿಗೆ ಅಗತ್ಯ ಮಾಹಿತಿ ನೀಡಿ, ಆರ್ಥಿಕ ಪ್ರಗತಿ ಸಾಧಿಸುವಲ್ಲಿ ಅಧಿಕಾರಿಗಳ ಪಾತ್ರ ಹಿರಿದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು
ಹೇಳಿದರು.

ಅರಣ್ಯ ಪ್ರದೇಶ ಬೆಳೆಸಲು ಸರ್ಕಾರಿ ಜಮೀನಿನ ಪ್ರತಿ 5 ಹೆಕ್ಟೇರ್ ಪ್ರದೇಶದಲ್ಲಿ ಒಂದು ಬ್ಲಾಕ್ ಪ್ಲಾಂಟೇಶನ್ ಮಾಡುತ್ತಿದ್ದು, ತಾಲ್ಲೂಕಿನಲ್ಲಿ 52 ಬ್ಲಾಕ್ ಪ್ಲಾಂಟೇಶನ್ ಕಾಮಗಾರಿ ಕೈಗೊಳ್ಳಲಾಗಿದೆ. ಅದರಲ್ಲಿ 47 ಪೂರ್ಣಗೊಂಡಿವೆ. ನರ್ಸರಿಯಲ್ಲಿ 3 ಲಕ್ಷ ವಿವಿಧ ಸಸಿ ಬೆಳೆಸಲಾಗುತ್ತಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆಯ ಆರ್‌ಎಫ್‌ಒ ಸೋಮರಾಯ ಮಾಹಿತಿ ನೀಡಿದರು.

ಶಾಲಾ ಮಕ್ಕಳ ಝೀರೊ ಬ್ಯಾಲೆನ್ಸ್ ಅಕೌಂಟ್ ತೆಗೆಯುವಾಗ ಕೆಲವು ಬ್ಯಾಂಕ್‌ಗಳ ವ್ಯವಸ್ಥಾಪಕರು ನಿರಾಕರಿಸುತ್ತಾರೆ. ಇಂತಹ ಸಮಸ್ಯೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ನಾರಾಯಣ ಅವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸೂಚಿಸಿದರು.

ಯಾದಗಿರಿ ತಾ.ಪಂ. ಇಒ ಬಸವರಾಜ ಶರಬೈ, ಸಹಾಯಕ ನಿರ್ದೇಶಕ ಖಾಲೀದ್ ಅಹ್ಮದ್, ತಾ.ಪಂ. ಲೆಕ್ಕಾಧಿಕಾರಿ ಕಾಶಿನಾಥ, ತಾಲ್ಲೂಕು ಯೋಜನಾಧಿಕಾರಿ ಶಶಿಧರ ಸ್ವಾಮಿ, ವ್ಯವಸ್ಥಾಪಕ ಶಿವರಾಯ, ನರೇಗಾ ವಿಷಯ ನಿರ್ವಾಹಕ ಅನಸರ ಪಟೇಲ್, ಪಂಚಾಯತ್‌ ರಾಜ್ ಎಂಜಿನಿಯರಿಂಗ್ ಇಲಾಖೆ ಅಧಿಕಾರಿ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಅಕ್ಷರ ದಾಸೋಹ ಇಲಾಖೆ, ಕೆಆರ್‌ಐಡಿಎಲ್ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು, ತಾ.ಪಂ. ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ತೋಟಗಾರಿಕೆ ಇಲಾಖೆಯಿಂದ ರೈತರಿಗೆ ವಿತರಿಸುವ ಬೆಳೆಗಳಿಗೆ ಹೊರತಾಗಿ, ಈ ಭಾಗದ ರೈತರಿಗೆ ಬೇಕಾಗಿರುವ ತೋಟಗಾರಿಕೆ ಬೆಳೆಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು
*ಶರಣಬಸಪ್ಪ ಕೋಟೆಪ್ಪಗೊಳ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT