ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಖಾಸಗಿ ಕಟ್ಟಡದಲ್ಲಿ‌ ಸರ್ಕಾರಿ ಕಚೇರಿಗಳು!

Published 6 ನವೆಂಬರ್ 2023, 6:41 IST
Last Updated 6 ನವೆಂಬರ್ 2023, 6:41 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಸರ್ಕಾರಿಯ ಕೆಲ ಇಲಾಖೆಗಳಿಗೆ ಇಂದಿಗೂ ಸ್ವಂತ ಕಟ್ಟಡಗಳಿಲ್ಲ. ಇದರಿಂದ ವರ್ಷಕ್ಕೆ ಕೋಟ್ಯಂತರ ರೂಪಾಯಿ ಬಾಡಿಗೆ ಕಟ್ಟಡಗಳಿಗೆ ಸಂದಾಯವಾಗುತ್ತಿದೆ. ಅಲ್ಲದೇ ಸಾರ್ವಜನಿಕ ಕೆಲಸಗಳಿಗೆ ಕಚೇರಿಗೆ ಆಗಮಿಸುವ ಜನತೆಗೆ ಹಾಗೂ ಸಿಬ್ಬಂದಿಯು ಕನಿಷ್ಠ ಸೌಲಭ್ಯವಿಲ್ಲದೆ ಪರದಾಡುವಂತೆ ಆಗಿದೆ.

ಸರ್ಕಾರಿ ಕಚೇರಿಗಳು ಸ್ಥಳೀಯ ಪ್ರಭಾವಿಗಳ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬುವುದು ಗುಟ್ಟಾಗಿ ಉಳಿದಿಲ್ಲ. ಇದರಿಂದಾಗಿ ಸಾರ್ವಜನಿಕರು ಹಾಗೂ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸೂಕ್ತ ವ್ಯವಸ್ಥೆಗಳು ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಸರ್ಕಾರದ ವಿವಿಧ ಕಚೇರಿಗಳು ಬೇರೆಬೇರೆ ಕಡೆ ಇರುವುದರಿಂದ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆಯುವ ಸ್ಥಿತಿ ಎದುರಾಗಿದೆ. ಬಾಡಿಗೆ ಕಟ್ಟಡದಲ್ಲಿ ನಡೆಯುವ ಕಚೇರಿಗಳ ಬಗ್ಗೆ ಸರಿಯಾದ ಮಾಹಿತಿಯೇ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರು, ಫಲಾನುಭವಿಗಳು ಹುಡುಕಿಕೊಂಡು ಕಚೇರಿಗಳನ್ನು ತಲುಪಬೇಕಿದೆ. ಎಲ್ಲಾ ಕಚೇರಿಗಳು ಒಂದೆಡೆ ಇದ್ದರೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುತ್ತದೆ.

‌ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಉಪ ನೋಂದಣಿ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಬಕಾರಿ ಉಪ ನಿರೀಕ್ಷಕರ ಕಚೇರಿ, ಬಿಸಿಎಂ, ಸಮಾಜ ಕಲ್ಯಾಣ, ಮೀನಗಾರಿಕೆ, ಕಾರ್ಮಿಕ ಇಲಾಖೆ, ನಗರ ಯೋಜನಾ ಪ್ರಾಧಿಕಾರ ಸೇರಿದಂತೆ ಹೆಚ್ಚಿನ ಸರ್ಕಾರಿ  ಕಚೇರಿಗಳು ಹಲವು ವರ್ಷದಿಂದ ಬಾಡಿಗೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿವೆ. ಪ್ರತಿ ವರ್ಷ ಬಾಡಿಗೆ ರೂಪದಲ್ಲಿ ಕೋಟಿಗೂ ಅಧಿಕ ಹಣ ಸರ್ಕಾರದಿಂದ ಸಂದಾಯ ಮಾಡಲಾಗುತ್ತಿದೆ ಎಂದು ಉಪ ನೋಂದಣಿ ಕಚೇರಿಯ ಅಧಿಕಾರಿ ಒಬ್ಬರು ತಿಳಿಸಿದರು.

ಹೆಸರಿಗೆ ಮಾತ್ರ ತಾಲ್ಲೂಕು ಕೇಂದ್ರ

ಹಳೆ ತಾಲ್ಲೂಕುಗಳನ್ನು ಹೊರತುಪಡಿಸಿ ಹೊಸ ತಾಲ್ಲೂಕುಗಳಲ್ಲಿ ಯಾವ ಸೌಲಭ್ಯವೂ ಇಲ್ಲ. ಗುರುಮಠಕಲ್‌, ವಡಗೇರಾ, ಶಹಾಪುರ, ಹುಣಸಗಿ ತಾಲ್ಲೂಕಿನಲ್ಲಿ ಹೊಸದಾಗಿ ಮಿನಿ ವಿಧಾನಸೌಧ ನಿರ್ಮಿಸಿದರೆ ಸರ್ಕಾರದ ಬೊಕ್ಕಸಕ್ಕೆ ಹೊರೆ ತಪ್ಪುತ್ತದೆ. ಅಲ್ಲದೆ ಸಾರ್ವಜನಿಕರಿಗೆ ಅಲೆದಾಟಕ್ಕೆ ಮುಕ್ತಿ ದೊರಕುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಸಂಬಂಧಿಸಿದ ಶಾಸಕರು, ಅಧಿಕಾರಿಗಳು ಮಿನಿ ವಿಧಾನಸೌಧ ನಿರ್ಮಾಣಕ್ಕೆ ಗಮನಹರಿಸಬೇಕು ಎಂಬ ಕೂಗು ಸಾರ್ವಜನಿಕರಿಂದ ಕೇಳಿ ಬರುತ್ತಲಿದೆ.

ನನೆಗುದಿಗೆ ಬಿದ್ದ ಹಳೆ ತಹಶೀಲ್ದಾರ್‌ ಕಚೇರಿ ಕಟ್ಟಡ‌

ಶಹಾಪುರ: ತಾಲ್ಲೂಕಿನ ಉಪ ನೋಂದಣಿ ಕಚೇರಿ ಸೇರಿದಂತೆ ಹಲವಾರು ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡವಿಲ್ಲದೆ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದುಕೊಂಡು ಕೆಲಸ ನಿರ್ವಹಿಸುತ್ತಿವೆ. ನಗರದ ಹಳೆ ತಹಶೀಲ್ದಾರ್‌ ಕಚೇರಿಯನ್ನು ನವೀಕರಣ ಮಾಡುವ ನೆಪದಲ್ಲಿ ಅಧಿಕಾರಿಗಳು ಸುಸಜ್ಜಿತವಾದ ಕಟ್ಟಡವನ್ನು ಆರು ವರ್ಷಗಳ ಹಿಂದೆ ಒಡೆದು ಹಾಕಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಅನುದಾನ ಬರಲಿಲ್ಲ. ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ. ಹಳೆ ತಹಶೀಲ್ದಾರ್‌ ಕಚೇರಿ ಕಟ್ಟಡ ನಿರ್ಮಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂಬುವುದು ಜನತೆ ಮನವಿ.

ಸ್ವಂತ ಕಟ್ಟಡಕ್ಕಾಗಿ ಕಾದಿರುವ ಕಚೇರಿಗಳು

ಹುಣಸಗಿ: ಪಟ್ಟಣವು ತಾಲ್ಲೂಕು ಕೇಂದ್ರವಾಗಿ ಆರು ವರ್ಷಗಳು ಗತಿಸಿದರೂ ಇಂದಿಗೂ ಬಹುತೇಕ ಸರ್ಕಾರಿ ಕಚೇರಿಗಳು ಹಾಗೂ ವಿವಿಧ ವಿದ್ಯಾರ್ಥಿಗಳ ವಸತಿ ನಿಲಯಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿವೆ. 2018ರಲ್ಲಿ ಹುಣಸಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರ ಎಂದು ಘೋಷಣೆ ಮಾಡಲಾಗಿದ್ದು ಅದಕ್ಕೂ ಮುಂಚೆ ಹುಣಸಗಿ ವಿಶೇಷ ತಾಲ್ಲೂಕು ಎಂದು ಘೋಷಿಸಿ ಪಟ್ಟಣದಲ್ಲಿ ವಿಶೇಷ ತಹಶೀಲ್ದಾರ್ ಕಚೇರಿ ಸಿಪಿಐ ಉಪ ನೋಂದಣಾಧಿಕಾರಿ ಕಚೇರಿ ಉಪಖಜಾನೆ ಅಧಿಕಾರಿ ಕಚೇರಿ ಸೇರಿದಂತೆ ಇತರ ಕಚೇರಿಗಳು ಕೆಬಿಜೆಎನ್‌ಎಲ್ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ‌‘ತಾಲ್ಲೂಕು ಕೇಂದ್ರವಾದ ಬಳಿಕ ಎಲ್ಲ ಕಚೇರಿಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸಲಿವೆ ಎಂದು ಸಾಕಷ್ಟು ಭರವಸೆ ಇಟ್ಟುಕೊಂಡಿದ್ದೆವು. ಆದರೆ ಇಂದಿಗೂ ಕಾಲ ಕೂಡಿ ಬಂದಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಮೂಲ ಸೌಲಭ್ಯಗಳು ಲಭ್ಯವಾಗುತ್ತಿಲ್ಲ’ ಎಂದು ರಾಜ್ಯ ರೈತ ಹಾಗೂ ಹಸಿರು ಸೇನೆ ರಾಜ್ಯ ನಾಯಕಿ ಮಹಾದೇವಿ ಬೇನಾಳಮಠ ಹೇಳಿದರು. ‌‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಹುಣಸಗಿಯಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಹಾಗೂ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನು ಆರಂಭಿಸಿದೆ. ಈ ಕಟ್ಟಡ ಕೂಡ ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿರುವುದಿಂದಾಗಿ ಸ್ನಾನಗೃಹ ಶೌಚಾಲಯ ಸೇರಿದಂತೆ ಇತರೆ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ’ ಎಂದು ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಕುರಿತು ವಿವರಿಸಿದರು. ‘ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೂಡ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಹಂತದಲ್ಲಿ ಪ್ರವೇಶ ಪಡೆದಿದ್ದು ಅವರ ವ್ಯಾಸಂಗಕ್ಕೆ ಹೊಸ ಕಟ್ಟಡದ ವ್ಯವಸ್ಥೆ ಮಾಡಿ ಕೊಡಬೇಕೆಂಬ ಕೂಗು ಹಲವು ವರ್ಷಗಳಿಂದಲೂ ಕೇಳಿಬರುತ್ತಿದೆ. ಆದರೆ ಇಂದಿಗೂ ಕಾಲ ಕೂಡಿ ಬಂದಿಲ್ಲ’ ಎಂದು ಪಟ್ಟಣದ ನಿವಾಸಿ ಸಿದ್ದನಗೌಡ ಬಿರಾದಾರ ಹೇಳಿದರು.

ಕಚೇರಿಗಳೇ ಇಲ್ಲ; ಇನ್ನೆಲ್ಲಿ ಬಾಡಿಗೆ ಕಟ್ಟಡ!

ವಡಗೇರಾ ಕಂದಾಯ ತಾಲ್ಲೂಕು ಕೇಂದ್ರವಾಗಿದೆ. ಸರ್ಕಾರಿ ಕಚೇರಿಗಳೇ ಇಲ್ಲದಿದ್ದರಿಂದ ಬಾಡಿಗೆ ಕಟ್ಟಡ ಪಡೆಯುವುದು ಇನ್ನೆಲ್ಲಿ ಬಂತು ಎಂದು ತಾಲ್ಲೂಕಿನ ಜನತೆ ಹೇಳುತ್ತಾರೆ. ಸಾರ್ವಜನಿಕರು ಪಾಲಕರು ಹಾಗೂ ಶಿಕ್ಷಕರು ಹಳೆಯ ತಾಲ್ಲೂಕು ಕೇಂದ್ರವಾದ ಶಹಾಪುರನ್ನೇ ಅವಲಂಬಿಸಿದ್ದಾರೆ. ವಡಗೇರಾ ತಾಲ್ಲೂಕು ಕೇಂದ್ರವಾಗಿ ಆರೇಳು ವರ್ಷಗಳೇ ಕಳೆಯುತ್ತಾ ಬಂದರೂ ಇಲ್ಲಿಯವರೆಗೂ ಪಟ್ಟಣದಲ್ಲಿ ಕಚೇರಿಗಳೇ ಆರಂಭವಾಗಿಲ್ಲ. ಸದ್ಯ ನಾಲ್ಕು ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು ಅದು ಯುಕೆಪಿ ಕಟ್ಟಡದಲ್ಲಿ. ‌ತಹಶೀಲ್ದಾರ್ ತಾಲ್ಲೂಕು ಪಂಚಾಯಿತಿ ಉಪಖಜಾನೆ ಸಮಾಜ ಕಲ್ಯಾಣ ಇಲಾಖೆ ಬಾಡಿಗೆ ಆಧಾರದಲ್ಲಿ ನಡೆಯುತ್ತಿವೆ.

ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕಚೇರಿಗಳು

ಸುರಪುರ: ತಾಲ್ಲೂಕಿನ ಕಾರ್ಮಿಕ ಇಲಾಖೆ ಅಬಕಾರಿ ಇಲಾಖೆ ಅಲ್ಪಸಂಖ್ಯಾತರ ಹಿಂದುಳಿದ ವರ್ಗಗಳ ಇಲಾಖೆಯ ಮೂರು ವಸತಿ ನಿಲಯಗಳು ಸರ್ಕಾರಿ ಐಟಿಐ ಇತರ ಕೆಲವು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಕಾರ್ಮಿಕ ಇಲಾಖೆಯ ಕಚೇರಿ ಕಟ್ಟಡ ಚಿಕ್ಕದಾಗಿರುವುದರಿಂದ ಕಾರ್ಮಿಕರು ಭೇಟಿ ನೀಡಲು ಕುಳಿತುಕೊಳ್ಳಲು ತೊಂದರೆಯಾಗಿದೆ. ಇದು ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗಿದೆ. ಸರ್ಕಾರಿ ಐಟಿಐ ಕಾಲೇಜಿಗೆ ಸುರಪುರ ನಗರದಲ್ಲಿ ಸಮರ್ಪಕ ಸ್ಥಳ ಸಿಗದಿದ್ದರಿಂದ 10 ಕಿ.ಮೀ ದೂರದ ಕೃಷ್ಣಾಪುರದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಹಾಸ್ಟೆಲ್ ವ್ಯವಸ್ಥೆ ಇಲ್ಲ. ಸುರಪುರದ ಹಾಸ್ಟೆಲ್‌ಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಕೃಷ್ಣಾಪುರಕ್ಕೆ ಹೋಗಿ ಬರಲು ತೊಂದರೆಯಾಗಿದೆ. ಅಬಕಾರಿ ಇಲಾಖೆಯ ಕಚೇರಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಪರವಾನಗಿ ನವೀಕರಣ ಪ್ರಕರಣ ದಾಖಲಿಸುವುದು ಆರೋಪಿಗಳನ್ನು ಬಂಧಿಸುವುದು ಇತರ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಗರದ ಎರಡು ಮತ್ತು ಕೆಂಭಾವಿಯ ಒಂದು ಹಾಸ್ಟೆಲ್ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸುರಪುರದ ಎರಡು ಹಾಸ್ಟೆಲ್‌ಗಳನ್ನು ಸರ್ಕಾರಿ ಡಿಪ್ಲೊಮಾ ಕಾಲೇಜಿನ ಖಾಲಿ ಇರುವ ಕೋಣೆಗಳಿಗೆ ವರ್ಗಾಯಿಸಲಾಗುತ್ತಿದೆ. ರೈತ ಸಂಪರ್ಕ ಕಕ್ಕೇರಾ ಮತ್ತು ಕೆಂಭಾವಿಗಳಿಗೆ ಸ್ವಂತ ಕಟ್ಟಡ ಇಲ್ಲ. ಕೆಂಭಾವಿಯಲ್ಲಿ ಕಟ್ಟಡ ಪೂರ್ಣಗೊಂಡಿದೆ.

ಖಾಸಗಿ ಕಟ್ಟಡದಲ್ಲಿವೆ ಸಿಡಿಪಿಒ ಕಾರ್ಮಿಕ ಕಚೇರಿ

ಗುರುಮಠಕಲ್: ಪಟ್ಟಣದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಕಾರ್ಮಿಕ ನಿರೀಕ್ಷಕರ ಕಚೇರಿಗಳು ಸದ್ಯ ಬಸ್‌ ನಿಲ್ದಾಣ ಹತ್ತಿರದ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ತಾಲ್ಲೂಕು ಕೇಂದ್ರವಾದ ನಂತರ ಪಟ್ಟಣದಲ್ಲಿ ತಾಲ್ಲೂಕು ಹಂತದ ಕಚೇರಿಗಳು ಈವರೆಗೂ ಸ್ಥಾಪನೆಯಾಗಿಲ್ಲ. ಜತೆಗೆ ತಹಶೀಲ್ದಾರ್ ಕಚೇರಿಯು ಡಿಜಿಟಲ್ ಸ್ಟಡಿ ಸೆಂಟರ್ ಕಟ್ಟಡದಲ್ಲಿ ತಾಲ್ಲೂಕು ಪಂಚಾಯಿತಿಗೆ ಪಶು ಸಂಗೋಪನಾ ಇಲಾಖೆಯ ಕಟ್ಟಡದಲ್ಲಿ ಟಿಎಚ್‌ಒ ಕಚೇರಿಯನ್ನು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಯ ವಸತಿ ಸಂಕೀರ್ಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದಲ್ಲಿ ಹಳೆ ತಹಶೀಲ್ದಾರ್ ಕಚೇರಿ (ಆರ್.ಐ.ಕ್ವಾಟರ್ಸ್) ಕಟ್ಟಡ ಹಳೆ ಆಸ್ಪತ್ರೆ ಸೇರಿದಂತೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಗೋದಾಮುಗಳು ಸರ್ಕಾರಿ ಕಟ್ಟಡಗಳು ಬಳಕೆಯಿಲ್ಲದೆ ಮತ್ತು ನಿರ್ವಹಣೆ ಕೊರತೆ ಸೇರಿದಂತೆ ದುರಸ್ತಿಯಾಗದೆ ಪಾಳುಬಿದ್ದಿವೆ. ಅಂಥ ಕಟ್ಟಡಗಳನ್ನು ದುರಸ್ತಿ ಅಥವಾ ಪಾಳುಬಿದ್ದ ಕಟ್ಟಡ ತೆರವುಗೊಳಿಸುವ ಮೂಲಕ ನಿವೇಶನದಲ್ಲಿ ಸರ್ಕಾರಿ ಕಚೇರಿಗಳಿಗೆ ವ್ಯವಸ್ಥೆ ಮಾಡಬಹುದಿತ್ತು. ಆದರೆ ಆ ಕುರಿತು ಚಿಂತನೆ ಮಾಡುತ್ತಿಲ್ಲ ಎನ್ನುವುದು ಸ್ಥಳೀಯರ ಮಾತುಗಳು. ‘ಇನ್ನೇನು ಹೊಸ ತಾಲ್ಲೂಕಿನಲ್ಲಿ ಮಿನಿ ವಿಧಾನಸೌಧ ಇನ್ನೊಂದೆರಡು ವರ್ಷಗಳಲ್ಲಿ ಎಲ್ಲ ಕಚೇರಿಗಳೂ ಒಂದೇ ಸೂರಿನಡಿ ವ್ಯವಸ್ಥೆಯಾಗಲಿವೆ ಎನ್ನುವ ಮಾತುಗಳು ಕೇಳುತ್ತಲೇ 4 ವರ್ಷಗಳಾಗುತ್ತಿದೆ. ಆದರೆ ಆ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ’ ಎಂದು ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದರು. ‘ಸಮಾಜ ಕಲ್ಯಾಣ ಇಲಾಖೆ ಕೃಷಿ ಇಲಾಖೆ ತಾಲ್ಲೂಕು ವೈದ್ಯಾಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಹೀಗೆ ಹಲವು ಇಲಾಖೆಗಳು ನೆಪ ಮಾತ್ರದಲ್ಲಿವೆ. ಈಗಲೂ ಯಾದಗಿರಿ ತಾಲ್ಲೂಕಿನ ಅಧಿಕಾರಿಗಳೇ ನಮ್ಮ ತಾಲ್ಲೂಕಿನ ಜವಾಬ್ದಾರಿ ನಿರ್ವಹಿಸುವುದು ನಮ್ಮ ಕೆಲಸಗಳಿಗೆ ಇನ್ನೂ ಯಾದಗಿರಿ ತಾಲೂಕನ್ನೇ ನೆಚ್ಚಿಕೊಂಡಿದ್ದೇವೆ’ ಎಂದು ಸಾರ್ವಜನಿಕರು ಅಲವತ್ತುಕೊಳ್ಳುತ್ತಾರೆ. ಕಾರ್ಮಿಕ ನಿರೀಕ್ಷಕರ ಕಚೇರಿಯೂ ಆಯ್ದ ಕೆಲ ದಿನಗಳಲ್ಲಿ ಮಾತ್ರ ತೆರೆದಿರುತ್ತದೆ. ಉಳಿದಂತೆ ಸದಾ ಮುಚ್ಚಿದ ಬಾಗಿಲು ಆ ಇಲಾಖೆಯ ಕೆಲಸಗಳೇನೆ ಇದ್ದರೂ ಯಾದಗಿರಿಗೆ ಅಲೆದಾಡುವುದು ತಪ್ಪುತ್ತಿಲ್ಲ.

ಯಾರು ಏನಂದರು?

ಶಹಾಪುರ ತಾಲ್ಲೂಕಿನಲ್ಲಿ ಸರ್ಕಾರಿ ಕಚೇರಿಯ ಕಟ್ಟಡಗಳನ್ನು ಒಂದೇ ಸೂರಿನಡಿಯಲ್ಲಿ ಕೆಲಸ ನಿರ್ವಹಿಸಲು ಸುಮಾರು ₹25 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡುವ ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ. ಪೂರಕ ಮಾಹಿತಿಯನ್ನು ಸಂಗ್ರಹಿಸಿ ತ್ವರಿತವಾಗಿ ಅನುದಾನದ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸಲಾಗುವುದು- ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ

ಹುಣಸಗಿ ಪಟ್ಟಣದ ಹೊರವಲಯದಲ್ಲಿ ಸರ್ಕಾರಿ ಕಚೇರಿಗಳನ್ನು ಆರಂಭಿಸುವ ನಿಟ್ಟಿನಲ್ಲಿ 10 ಎಕರೆ ಸ್ಥಳ ನಿಗದಿ ಮಾಡಿದ್ದು ಪಹಣಿ ಕೂಡ ಲಭ್ಯವಿದೆ. ಆದರೆ ಸೂಕ್ತ ಅನುದಾನ ದೊರೆತಲ್ಲಿ ಕಟ್ಟಡ ನಿರ್ಮಾಣವಾಗಲಿದೆ - ಬಸಲಿಂಗಪ್ಪ ನಾಯ್ಕೋಡಿ ತಹಶೀಲ್ದಾರ್ ಹುಣಸಗಿ

ಒಂದು ತಾಲ್ಲೂಕಿಗೆ 25 ಕಚೇರಿಗಳು ಬೇಕು. ಆದರೆ ನಮ್ಮಲ್ಲಿ ಕಟ್ಟಡಗಳೇ ನಿರ್ಮಾಣವಾಗಿಲ್ಲ. ಇದರಿಂದ ಹಳೆ ತಾಲ್ಲೂಕು ಕೇಂದ್ರಕ್ಕೆ ಅಲೆದಾಡುವುದು ತಪ್ಪಿಲ್ಲ‌ - ಶರಣು ಇಟಗಿ ಸಾಮಾಜಿಕ ಕಾರ್ಯಕರ್ತ ವಡಗೇರಾ

ಯಾದಗಿರಿ ಮತಕ್ಷೇತ್ರದ ಶಾಸಕರು ಇತ್ತ ಕಡೆ ಗಮನಹರಿಸಿ ವಡಗೇರಾ ಪಟ್ಟಣದಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಆರಂಭಿಸಲು ಕ್ರಮ ಕೈಗೊಳ್ಳಬೇಕು - ಶಿವಕುಮಾರ ಕೊಂಕಲ್‌ ವಡಗೇರಾ ನಿವಾಸಿ

ಒಂದೇ ಸೂರಿನಡಿ ಅಥವಾ ಒಂದೇ ಪ್ರದೇಶದಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಆರಂಭವಾದಲ್ಲಿ ಸಾರ್ವಜನಿಕರಿಗೂ ಸಾಕಷ್ಟು ಅನುಕೂಲವಾಗಲಿದೆ - ಬಸವರಾಜ ಹಗರಟಗಿ ಮಾದಿಗ ದಂಡೋರ ಹಾಗೂ ಎಂಆರ್‌ಎಚ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹುಣಸಗಿ

ಕಾರ್ಮಿಕ ಇಲಾಖೆ ದೊಡ್ಡ ಇಲಾಖೆ. ತಾಲ್ಲೂಕಿನಲ್ಲಿ 10 ಸಾವಿರಕ್ಕೂ ಹೆಚ್ಚು ಅಸಂಘಟಿತ ಮತ್ತು 2 ಸಾವಿರಕ್ಕೂ ಹೆಚ್ಚು ಸಂಘಟಿತ ಕಾರ್ಮಿಕರಿದ್ದಾರೆ. ಕಚೇರಿ ಬಾಡಿಗೆಯಾಗಿರುವುದರಿಂದ ಸಮರ್ಪಕ ಕೆಲಸವಾಗುತ್ತಿಲ್ಲ - ದೇವಿಂದ್ರಪ್ಪ ಪತ್ತಾರ ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಸುರಪುರ

ಪಟ್ಟಣದಲ್ಲಿರುವ ಸರ್ಕಾರಿ ಕಟ್ಟಡಗಳು ಪಾಳು ಬಿದ್ದಿರುವ ಕುರಿತು ಮತ್ತು ಅವುಗಳನ್ನು ಸೂಕ್ತ ದುರಸ್ತಿ ಹಾಗೂ ನಿರ್ವಹಣೆ ಮೂಲಕ ಸಂಪನ್ಮೂಲಗಳ ಸದುಪಯೋಗ ಪಡೆಯುವ ನಿಟ್ಟಿನಲ್ಲಿ ಕ್ರಮವಹಿಸಲು ಹಲವು ಬಾರಿ ಜಿಲ್ಲಾ ಮಟ್ಟದವರೆಗೂ ಮನವಿ ಪತ್ರಗಳನ್ನು ನೀಡಿದ್ದೇವೆ. ಆದರೆ ಸಂಬಂಧಿತರು ಮನಸ್ಸು ಮಾಡುತ್ತಿಲ್ಲ - ಸಂಜು ಅಳೆಗಾರ ಸಾಮಾಜಿಕ ಕಾರ್ಯಕರ್ತ ಗುರುಮಠಕಲ್‌

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.‍ಪಿ.ಚಪೆಟ್ಲಾ

ಯಾದಗಿರಿಯ ಹೊಸಳ್ಳಿ ಕ್ರಾಸ್‌ ಸಮೀಪ‍ದಲ್ಲಿ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ವಸತಿ ನಿಲಯ
ಯಾದಗಿರಿಯ ಹೊಸಳ್ಳಿ ಕ್ರಾಸ್‌ ಸಮೀಪ‍ದಲ್ಲಿ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ವಸತಿ ನಿಲಯ
ಶಹಾಪುರ ನಗರದ ಖಾಸಗಿ ಮಳಿಗೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉಪ ನೋಂದಣಿ ಕಚೇರಿ
ಶಹಾಪುರ ನಗರದ ಖಾಸಗಿ ಮಳಿಗೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉಪ ನೋಂದಣಿ ಕಚೇರಿ
ಹೊಸ ಕಟ್ಟಡ ನಿರ್ಮಿಸುವ ಭರದಲ್ಲಿ ಶಹಾ‍ಪುರದ ಹಳೆ ತಹಶೀಲ್ದಾರ್‌ ಕಟ್ಟಡ ಒಡೆದು ಹಾಕಿರುವುದು
ಹೊಸ ಕಟ್ಟಡ ನಿರ್ಮಿಸುವ ಭರದಲ್ಲಿ ಶಹಾ‍ಪುರದ ಹಳೆ ತಹಶೀಲ್ದಾರ್‌ ಕಟ್ಟಡ ಒಡೆದು ಹಾಕಿರುವುದು
ಗುರುಮಠಕಲ್ ಪಟ್ಟಣದ ಖಾಸಗಿ ಕಟ್ಟಡದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ
ಗುರುಮಠಕಲ್ ಪಟ್ಟಣದ ಖಾಸಗಿ ಕಟ್ಟಡದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ
ಗುರುಮಠಕಲ್ ಪಟ್ಟಣದಲ್ಲಿ ಕಾರ್ಮಿಕ ನಿರೀಕ್ಷಕರ ಕಟ್ಟಡವು ಖಾಸಗಿ ಕಟ್ಟಡದಲ್ಲಿ ಬಾಡಿಗೆಗೆ ಪಡೆಯಲಾಗಿದೆ
ಗುರುಮಠಕಲ್ ಪಟ್ಟಣದಲ್ಲಿ ಕಾರ್ಮಿಕ ನಿರೀಕ್ಷಕರ ಕಟ್ಟಡವು ಖಾಸಗಿ ಕಟ್ಟಡದಲ್ಲಿ ಬಾಡಿಗೆಗೆ ಪಡೆಯಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT